ಸಾಗರ : ಅಭಿವೃದ್ದಿ ಕೆಲಸಗಳಿಗೆ ಕಲ್ಲು ಹಾಕುವವರು ಯಾರಾದರೂ ಇದ್ದರೆ ಅದು ಸಾಗರ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಎಂದು ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಹರತಾಳು ಹಾಲಪ್ಪ ತಿಳಿಸಿದರು.
ಇಲ್ಲಿನ ಭದ್ರಕಾಳಿ ಸಭಾಭವನದಲ್ಲಿ ಮಂಗಳವಾರ ಬಿಜೆಪಿ ವತಿಯಿಂದ ಆಯೋಜಿಸಿದ್ದ ಮಡಿವಾಳ ಸಮಾಜದ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ನಗರಸಭೆಗೆ ಒಟ್ಟು ೪೨ ಕೋಟಿ ರೂ. ಅನುದಾನ ಬಂದಿದ್ದು ಕಾಮಗಾರಿಗಳು ನಡೆಯುತ್ತಿದೆ. ತ್ವರಿತಗತಿಯ ಅಭಿವೃದ್ದಿಯಿಂದ ಎಲ್ಲಿ ಬಿಜೆಪಿಗೆ ಹೆಸರು ಬರುತ್ತದೆಯೋ ಎಂದು ಮಾಜಿ ಶಾಸಕರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿ ಕಾಮಗಾರಿಗಳಿಗೆ ತಡೆ ಹಾಕಿದ್ದಾರೆ. ಪ್ರಗತಿಪರ ರಾಜಕಾರಣಕ್ಕೆ ಹೆಸರಾಗಿರುವ ಸಾಗರದಲ್ಲಿ ಇಂತಹ ಅಭಿವೃದ್ದಿ ವಿರೋಧಿಗಳು ಇದ್ದಾರೆ. ರಾಜ್ಯದ ಯಾವ ಭಾಗದಲ್ಲಿಯೂ ಇಂತಹ ಅಭಿವೃದ್ದಿ ವಿರೋಧಿ ರಾಜಕಾರಣಿಯನ್ನು ತಾವು ನೋಡಿಲ್ಲ ಎಂದು ಹೇಳಿದರು.
ನಾನು ಶಾಸಕನಾಗಿದ್ದ ಆರಂಭದ ಅವಧಿಯಲ್ಲಿ ಎರಡು ವರ್ಷ ಕೊರೋನಾದಿಂದ ಸಮಗ್ರ ಅಭಿವೃದ್ದಿ ಕೆಲಸಗಳನ್ನು ಕೈಗೊಳ್ಳಲು ಆಗಲಿಲ್ಲ. ಸಿಕ್ಕಿರುವ ಎರಡೂವರೆ ವರ್ಷದಲ್ಲಿ ದೊಡ್ಡ ಪ್ರಮಾಣದಲ್ಲಿ ಅಭಿವೃದ್ದಿ ಕೆಲಸಗಳನ್ನು ಮಾಡಲಾಗಿದ್ದು ಎಲ್ಲ ಸಮುದಾಯಗಳ ಹಿತರಕ್ಷಣೆ ಮಾಡಲಾಗಿದೆ. ಮಡಿವಾಳ ಸಮಾಜ ಕ್ಷೇತ್ರವ್ಯಾಪ್ತಿಯಲ್ಲಿ ನಿರ್ಮಿಸುತ್ತಿರುವ ಸಮುದಾಯ ಭವನಕ್ಕೆ ೯೨ ಲಕ್ಷ ರೂ. ಅನುದಾನ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅನುದಾನ ಜನಾಂಗದ ಅಭಿವೃದ್ದಿಗೆ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.
ಬಿಜೆಪಿ ನಾಯಕಿ ಡಾ. ರಾಜನಂದಿನಿ ಕಾಗೋಡು ಮಾತನಾಡಿ, ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವ ಶಕ್ತಿ ಬಿಜೆಪಿ ಅಭ್ಯರ್ಥಿ ಹರತಾಳು ಹಾಲಪ್ಪ ಅವರಿಗಿದೆ. ಬೇರೆಬೇರೆ ಪಕ್ಷದಿಂದ ಅಪಾರ ಸಂಖ್ಯೆಯಲ್ಲಿ ಪ್ರಮುಖರು ಬಿಜೆಪಿ ಸೇರ್ಪಡೆಯಾಗಿ ಹಾಲಪ್ಪ ಅವರ ಶಕ್ತಿ ಬಲಪಡಿಸುವ ಕೆಲಸ ನಡೆಯುತ್ತಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತಂದು ಶಾಸಕ ಹಾಲಪ್ಪ ಅವರನ್ನು ಸಚಿವರನ್ನಾಗಿಸುವ ಕೆಲಸಕ್ಕೆ ಎಲ್ಲರೂ ಕೈಜೋಡಿಸಬೇಕು. ಮೇ ೧೦ರಂದು ನಡೆಯಲಿರುವ ಚುನಾವಣೆಯಲ್ಲಿ ಎಲ್ಲರೂ ಬಿಜೆಪಿಗೆ ಮತ ಚಲಾಯಿಸುವಂತೆ ಮನವಿ ಮಾಡಿದರು
.
ಮಡಿವಾಳ ಸಮಾಜದ ಅಧ್ಯಕ್ಷ ಎಂ.ಎಸ್.ಕೊಟ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕೆ.ಆರ್.ಗಣೇಶಪ್ರಸಾದ್, ವಿ.ಮಹೇಶ್, ಪ್ರೇಮ ಕಿರಣ್ ಸಿಂಗ್, ಆರ್.ಶ್ರೀನಿವಾಸ್ ಮೇಸ್ತ್ರಿ, ಪುರುಷೋತ್ತಮ್, ವಾಸಂತಿ ರಮೇಶ್, ಲಕ್ಷ್ಮೀರಾಜು, ಡಿ.ತುಕಾರಾಮ್, ರಾಜು ಬಿ. ಮಡಿವಾಳ, ಸಂತೋಷ್ ಕೆ.ಜಿ., ಯಶೋಧಮ್ಮ, ಗಂಗಮ್ಮ, ಅಶೋಕ್ ಡಿ., ಸುಧಾಕರ್ ಇನ್ನಿತರರು ಹಾಜರಿದ್ದರು