ಬಂಜಾರ ಸಮುದಾಯದ ಶೇ.೭೦ರಿಂದ ೮೦ ಮತಗಳು ಭಾರತೀಯ ಜನತಾ ಪಕ್ಷಕ್ಕೆ ಬರುತ್ತವೆ. ವಿಷಯವನ್ನು ಸರಿಯಾಗಿ ಅರ್ಥಮಾಡಿಕೊಳ್ಳದ, ಬಿಜೆಪಿಯ ಬಗ್ಗೆ ಆರೋಪಿಸಲು ವಿಷಯಗಳಿಲ್ಲವೆಂದು ಸುಖಾಸುಮ್ಮನೆ ಒಳಮೀಸಲಾತಿ ವಿಷಯವಾಗಿ ಮಾತನಾಡುತ್ತಾರೆ. ಮೊದಲು ಅವರು ವಿಷಯವನ್ನು ಅರ್ಥಮಾಡಿಕೊಳ್ಳಲಿ ಎಂದು ಶಿವಮೊಗ್ಗ ಗ್ರಾಮಾಂತರ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಅಶೋಕ್‌ನಾಯ್ಕ್ ಇಂದಿಲ್ಲಿ ಹೇಳಿದರು.
ಅವರು ಇಂದು ಬೆಳಗ್ಗೆ ಪತ್ರಿಕಾಸಂವಾದದಲ್ಲಿ ಮಾತನಾಡುತ್ತಾ, ನ್ಯಾಯದ ಪರವಾಗಿ ಸರ್ಕಾರ ಒಳಮೀಸಲಾತಿಯನ್ನು ನೀಡಿದೆ. ಅದನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ೨೦೧೧ರ ಜನಗಣತಿ ಪ್ರಕಾರ ಜನಸಂಖ್ಯೆ ಆಧಾರದ ಮೇಲೆ ಒಳ ಮೀಸಲಾತಿಯನ್ನು ನೀಡಲಾಗಿದ್ದು, ಅತ್ಯಂತ ಪಾರದರ್ಶಕವಾಗಿರುವ ಈ ವಿಷಯವನ್ನು ಪ್ರಶ್ನಿಸಲು ಯಾರಿಂದಲ್ಲೂ ಸಾಧ್ಯವಿಲ್ಲ ಎಂದು ಹೇಳಿದರು.
ಈ ಮೀಸಲಾತಿ ವಿಷಯವಾಗಿ ಸರಿಯಾದ ರೀತಿ ಅಧ್ಯಯನ ಮಾಡಿದ ನಂತರ ಆದರ ಬಗ್ಗೆ ನಿರ್ಧಿಷ್ಟ ವಾಗಿ ಹೇಳಲಿ. ಏನಾದರೂ ಸಮಸ್ಯೆ ಇದ್ದರೆ ಬಗೆಹರಿ ಸುವುದಾಗಿ ನಿಕಟಪೂರ್ವ ಮುಖ್ಯಮಂತ್ರಿ ಆಶ್ವಾಸನೆ ನೀಡಿದ್ದಾರೆ. ಕೆಲವರು ಸುಮ್ಮನೆ ಚುನಾವಣಾ ಗಿಮಿಕ್ ಗಾಗಿ ಇದನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕನಾಗಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಸದ ಬಿ.ವೈ.ರಾಘವೇಂದ್ರ ಅವರ ಸಹಕಾರ ದೊಂದಿಗೆ ಕ್ಷೇತ್ರದ ಪ್ರತಿ ಹಳ್ಳಿಗಳಲ್ಲಿ ಕನಿಷ್ಠ ೫೦ ಲಕ್ಷದಿಂದ ೧೦ ಕೋಟಿವರೆಗೆ ಅನುದಾನ ತಂದು ಕೆಲಸ ಮಾಡಿಸಿದ್ದೇನೆ. ಅಂತೆಯೇ ದೇಶದ ರಕ್ಷಣೆಗೆ ಹಾಗೂ ನಮ್ಮ ಸುರಕ್ಷತೆಗೆ ವಿಶ್ವದಲ್ಲೇ ಹೆಸರು ವಾಸಿಯಾದ ಪ್ರಧಾನಿ ನರೇಂದ್ರ ಮೋದಿ ಅವರ ಕೃಪೆಯ ಮೇರೆಗೆ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಕನಿಷ್ಠ ೨೫ರಿಂದ ೩೦ಸಾವಿರ ಮತಗಳಿಂದ ಜಯಗಳಿಸುತ್ತೇನೆ ಎಂದರು.
ಬರುವ ಮೇ.೭ರಂದು ಶಿವಮೊಗ್ಗ ಗ್ರಾಮಾಂತರ ಭಾಗದ ಆಯನೂರಿನಲ್ಲಿ ನಡೆಯಲಿರುವ ಮೋದಿ ಅವರ ಕಾರ್ಯಕ್ರಮವೇ ಚುನಾವಣಾ ಪ್ರಚಾರ ಸಭೆಯ ಅಂತಿಮ ಸಬೆಯಾಗುತ್ತದೆ. ಇಡೀ ಜಿಲ್ಲೆಯ ಜನ ಅಲ್ಲಿಗೆ ಬರುತ್ತಾರೆ. ಸಂಘಟನೆಯ ಪ್ರಮುಖರು, ಯಡಿಯೂರಪ್ಪ ಹಾಗೂ ರಾಘವೇಂದ್ರ ಅವರ ಭೇಟಿಯ ಹಿನ್ನೆಲೆಯಲ್ಲಿ ಕ್ಷೇತ್ರದ ಜನ ನನ್ನನ್ನು ಅತಿದೊಡ್ಡ ಅಂತರದಿಂದ ವಿಜಯಶಾಲಿಯನ್ನಾಗಿ ಮಾಡುತ್ತಾರೆ ಎಂದರು.
ಶಿವಮೊಗ್ಗ ಗ್ರಾಮಾಂತರವನ್ನು ತಾಲ್ಲೂಕು ಕೇಂದ್ರವನ್ನಾಗಿ ರಚಿಸುವ ಜೊತೆಗೆ ಇಡೀ ಕ್ಷೇತ್ರದಲ್ಲಿ ನನ್ನೂರು, ನಮ್ಮ ಬೀದಿ, ನಮ್ಮ ಕೇರಿ ಮಾದರಿಯ ಸಮಗ್ರ ಅಭಿವೃದ್ಧಿಯ ಕನಸು ಹೊಂದಿದ್ದೇನೆ. ವಿಜಯೇಂದ್ರ ಅವರು ಶಿಕಾರಿಪುರದಲ್ಲಿ ಕನಿಷ್ಠ ೫೦ರಿಂದ ೭೦ ಸಾವಿರದ ಮತಗಳಿಂದ ಜಯಶಾಲಿಯಾಗುತ್ತಾರೆ. ಇಲ್ಲಿನ ಕೆಲವರು ಒಳಮೀಸಲಾತಿ ವಿಷಯ ಹೇಳುತ್ತಿರುವುದು ರಾಜಕೀಯ ದುರುದ್ದೇಶವೇ ಹೊರತು ಬೇರೆನೂ ಅಲ್ಲ. ಗ್ರಾಮಾಂತರದಲ್ಲಿ ಇಂತಹ ಯಾವುದೇ ಆರೋಪ ಕೇಳಿ ಬಂದಿಲ್ಲ ಎಂದರು.
ಸಂವಾದಲ್ಲಿ ಪ್ರೆಸ್‌ಟ್ರಸ್ಟ್ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಇದ್ದರು.