ಶಿವಮೊಗ್ಗ,ಏ.28:
ಒಂದೆಡೆ ಚುನಾವಣೆ ಬಿಸಿ, ಮತ್ತೊಂದೆಡೆ ನಿತ್ಯದ ಕಾರ್ಯಗಳ ಒತ್ತಡ, ಇದರ ನಡುವೆಯೂ ಶಿವಮೊಗ್ಗ ಮಹಾನಗರ ಪಾಲಿಕೆಯ ಆರೋಗ್ಯ ವಿಭಾಗ ನಗರದಲ್ಲಿ ಅಕ್ರಮವಾಗಿ ಬಿತ್ತಿ ಪತ್ರಗಳನ್ನು ಅಂಟಿಸಿ ಅವುಗಳ ಮೂಲಕ ಪುಕ್ಕಟ್ಟೆ ಪ್ರಚಾರ ಪಡೆಯುತ್ತಿದ್ದ ವಿದ್ಯಾ ಸಂಸ್ಥೆಯೊಂದರ ವಿರುದ್ಧ ಕ್ರಮ ಕೈಗೊಂಡು ಬರೊಬ್ಬರಿ ಇಪ್ಪತ್ತೈದು ಸಾವಿರ ದಂಡ ವಸೂಲಿ ಮಾಡಿರುವ ವಿಶೇಷ ಘಟನೆ ನಡೆದಿದೆ.
ಶಿವಮೊಗ್ಗ ನಗರದ ಬಹಳಷ್ಟು ಕಡೆ ಕಾಣಿಸಿಕೊಳ್ಳುತ್ತಿದ್ದ ಬೆಲ್ಲಿ ವರ್ಲ್ಡ್ ಸ್ಕೂಲ್ ಪ್ರವೇಶಾತಿ ಆರಂಭಗೊಂಡಿದೆ ಎಂಬ ಬಿದ್ದಿ ಪತ್ರ ಹಾಕಲು ಮಹಾನಗರ ಪಾಲಿಕೆಯಿಂದ ಯಾವುದೇ ಅನುಮತಿ ಪಡೆದಿರಲಿಲ್ಲ. ಈ ಬಗ್ಗೆ ಆಯುಕ್ತ ಮಾಯಣ್ಣಗೌಡ ಅವರ ಸೂಚನೆ ಮೇರೆಗೆ ಮಹಾನಗರ ಪಾಲಿಕೆಯ ಆರೋಗ್ಯ ವಿಭಾಗದ ಆರೋಗ್ಯ ನಿರೀಕ್ಷಕರಾದ ಅಮೋಘ್ ಹಾಗೂ ಕೃಷ್ಣಮೂರ್ತಿ ಅವರ ತಂಡ ಶಾಲೆಗೆ ಸೂಚನೆ ನೀಡಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿತ್ತು.
ಯಾರು ಎಲ್ಲಿ ಹೇಗೆ ಬೇಕಲ್ಲಿ ತಮ್ಮ ಪುಕ್ಕಟ್ಟೆ ಪ್ರಚಾರದ ವಿಷಯವಾಗಿ ಸಾಕ್ಷಿಗಳನ್ನು ಬ್ಯಾನರ್ ಗಳನ್ನು ಬಿತ್ತಿಪತ್ರಗಳನ್ನು ಹಾಕುವಂತಿಲ್ಲ ಎಂಬ ಸಣ್ಣ ಸಂದೇಶವನ್ನು ಅರ್ಥಮಾಡಿಕೊಳ್ಳದೆ ಪಾಲಿಕೆಯ ನೋಟೀಸ್ ನೋಡಿದ ಕ್ಷಣ ಭಯಭೀತಗೊಂಡು ಮಹಾನಗರ ಪಾಲಿಕೆಗೆ ಓಡಿ ಬಂದ ಶಾಲೆಯ ಆಡಳಿತ ಮಂಡಳಿ ಇನ್ನು ಮುಂದೆ ಇಂತಹ ತಪ್ಪು ಮಾಡುವುದಿಲ್ಲ. ದಂಡ ವಿಧಿಸುವುದು ಬೇಡ ಎಂದು ಕೋರಿದ್ದಾರೆ.
ಪ್ರತಿ ಸಾರಿ ಇದೇ ತರ ಮಾಡಿದರೆ ಅಕ್ರಮವಾಗಿ ಈ ಬಗೆಯ ಅವಘಡಗಳು ನಿರಂತರವಾಗಿ ನಡೆಯುತ್ತವೆ ಎಂಬುದನ್ನು ಮನಗಂಡ ಪಾಲಿಕೆಯ ಆರೋಗ್ಯ ವಿಭಾಗ ಡೆಲ್ಲಿ ಸ್ಕೂಲ್ ಗೆ 25,000 ದಂಡ ಹಾಕಿದೆ. ದಂಡವನ್ನು ಈಗಾಗಲೇ ಮಹಾನಗರ ಪಾಲಿಕೆಗೆ ಡೆಲ್ಲಿ ವರ್ಲ್ಡ್ ಸ್ಕೂಲ್ ಕಟ್ಟಿದೆ.
ಈ ಒಂದು ಮಾಹಿತಿ ಮೂಲಕ ಅಕ್ರಮ ಬಿತ್ತಿ ಪತ್ರ, ಪ್ಲೆಕ್ಸಿ, ಬ್ಯಾನರ್ ಗಳನ್ನು ಹಾಕುವ ಕೃತ್ಯಗಳು ಕಡಿಮೆಯಾಗುತ್ತವೆ ಎನ್ನಲಾಗಿದೆ. ಅಂತೆಯೇ ಶಿವಮೊಗ್ಗ ನಗರದ ಅಕ್ರಮ ಪ್ಲೆಕ್ಸಿ, ಬ್ಯಾನರ್, ಬಿತ್ತಿಪತ್ರಗಳು ಸೇರಿದಂತೆ ಯಾವುದೇ ಪ್ರಚಾರದ ಜಾಹಿರಾತು ಹಾಕಲು ಪಾಲಿಕೆಯ ಅನುಮತಿ ಪಡೆಯಲೇ ಬೇಕು. ಇಲ್ಲದೆ ಪುಕ್ಕಟ್ಟೆಯಾದ ಪ್ರಚಾರ ಪಡೆಯುವ ಯಾವುದೇ ಅಂಶಗಳನ್ನು ಹಾಗೂ ಪ್ರಚಾರವನ್ನು ಪಾಲಿಕೆ ಗಂಭೀರವಾಗಿ ಗಮನಿಸುತ್ತದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.