Site icon TUNGATARANGA

ವಿದ್ಯಾವಂತರೇ ಮತದಾನದಲ್ಲಿ ನಿರಾಸಕ್ತಿ ತೊರೆಯಬೇಕು: ಜಿಲ್ಲಾ ಪಂಚಾಯತಿ ಲೆಕ್ಕಾಧಿಕಾರಿ  ಕೆ. ಎಸ್. ಶ್ರೀಕಾಂತ್

      ಶಿವಮೊಗ್ಗ : ನಗರ ಪಟ್ಟಣಗಳಲ್ಲಿ ವಾಸವಿರುವ ವಿದ್ಯಾವಂತರೇ ಮತಗಟ್ಟೆಗೆ ಬಾರದೆ ನಿರಾಸಕ್ತಿ ತೋರಿಸುವುದು ಸರಿಯಲ್ಲ. ಪ್ರಜಾಪ್ರಭುತ್ವ ನಮಗೆ ಕೊಟ್ಟ ಅವಕಾಶ, ಅದನ್ನು ಬಳಸಿ ಸಮರ್ಥ ನಾಯಕನನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಕಳೆದುಕೊಳ್ಳಬಾರದು. ಉದಾಸೀನ ತೊರೆದು ಮತಗಟ್ಟೆಗೆ ಬರಲೇಬೇಕು ಎನ್ನುವ ಜಾಗೃತಿ ಮೂಡಿಸಲು ಚುನಾವಣಾ ಆಯೋಗ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಲವಾರು ಪ್ರಯತ್ನ ಮಾಡುತ್ತಿರುವುದನ್ನು ವಿವರಿಸಿದವರು ಜಿಲ್ಲಾ ಪಂಚಾಯತಿ ಲೆಕ್ಕಾಧಿಕಾರಿಗಳಾದ  ಕೆ. ಎಸ್. ಶ್ರೀಕಾಂತ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಜಾನಪದ ಪರಿಷತ್ತು, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಮತ್ತು ಚುನಾವಣಾ ಮತದಾರರಿಗೆ ಮತದಾನದ ಜಾಗೃತಿ ಮತ್ತು ಅರಿವು ಸಮಿತಿ ನಗರದ ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾ ವಿದ್ಯಾಲಯದಲ್ಲಿ  ಏಪ್ರಿಲ್ ೨೪ ರಂದು ಏರ್ಪಡಿಸಿದ್ದ ಕವಿಗಳು ಬರೆದ ಕವನ, ಜಾನಪದ ಕಲಾವಿದರು ಹಾಡುವ ಲಾವಣಿ, ಗೀಗೀ ಪದ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ಜಾನಪದ ಕಲಾವಿದರಾದ ಆಂಜನೇಯ ಜೋಗಿ ಅವರು ಲಾವಣಿ ಹಾಡಿದರು. ಕವಿಗಳಾದ ಸಾಗರದ ಗವಿಯಪ್ಪ, ಭದ್ರಾವತಿಯ ಕಾಂತಪ್ಪ, ಪ್ರೊ. ಸತ್ಯನಾರಾಯಣ, ಡಿ. ಗಣೇಶ್ ಕವನ ವಾಚಿಸಿದರು.

ಮುಖ್ಯ ಅತಿಥಿಗಳಾಗಿ ಮಹಾನಗರ ಪಾಲಿಕೆಯ ಶ್ರೀಮತಿ ಅನುಪಮ ಮತದಾರ ಜಾಗೃತಿಗೆ ಕೈಗೊಂಡ ಕ್ರಮಗಳನ್ನು ವಿವರಿಸಿದರು, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಆದಿಮೂರ್ತಿ ಪಾರ್ಟಿ, ಪಕ್ಷ ನೋಡದೆ ಯೋಗ್ಯರಿಗೆ ಮತನೀಡಿ ಎಂದರು. ಪ್ರಿನ್ಸಿಪಾಲ್ ಡಾ. ಜಿ. ಮಧು ಮಾತನಾಡಿ ಪ್ರಥಮ ಮತದಾರರು ನೀವು. ನಿಮಗೆ ಅರಿವು ಮಾಡಿಕೊಡುವ ಈ ಕಾರ್ಯಕ್ರಮ ಅರ್ಥಪೂರ್ಣ ವಾಗಿದೆ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಡಿ. ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಸ್ಪಂದನ ನಾಡಗೀತೆ ಹಾಡಿದರು. ಸೌಮ್ಯ ಸ್ವಾಗತಿಸಿದರು. ಕಾವ್ಯ ನಿರೂಪಿಸಿದರು. ಪ್ರಿಯಾಂಕ ವಂದಿಸಿದರು. ಮಹಾನಗರ ಪ್ರದೇಶಗಳಲ್ಲಿ ಸುಪ್ರಿಯಾ, ಕಜಾಪ ಸೋಮಿನಕಟ್ಟಿ ಇತರರು ಉಪಸ್ಥಿತರಿದ್ದರು.

Exit mobile version