Site icon TUNGATARANGA

ಮಧ್ಯವರ್ತಿಗಳ ಮಧ್ಯಸ್ಥಿಕೆಯ ಪ್ರಭಾವದಿಂದ ಮತ ಮಾರಿಕೊಳ್ಳಬೇಡಿ: ಡಿ. ಮಂಜುನಾಥ

ಶಿವಮೊಗ್ಗ : ಪ್ರಜಾಪ್ರಭುತ್ವ ವ್ಯವಸ್ಥೆ ಐದು ವರ್ಷಗಳಿಗೊಮ್ಮೆ ನಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಿದೆ. ನಮ್ಮ ಪ್ರತಿನಿಧಿ ವಂಶಪಾರಂಪರ್ಯವಾಗಿ ನಾವೇ ಮುಂದುವರಿಯುವುದು ಅನಿವಾರ್ಯ ಎನ್ನುವಂತೆ ಬಿಂಬಿಸುವ ಪ್ರಯತ್ನ ನೋಡುತ್ತಿದ್ದೇವೆ. ಸೇವೆ ಮಾಡುವ ಉದ್ದೇಶವೇ ಆಗಿದ್ದರೆ ಮತದಾರರಿಗೆ ಆಮಿಷ ತೋರಿಸಿ ಖರೀದಿಸುವ ಹುನ್ನಾರವೇಕೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಡಿ. ಮಂಜುನಾಥ ಪ್ರಶ್ನೆಮಾಡಿದರು

ಅವರು ಏಪ್ರಿಲ್ ೨೧ ನೆಯ ಶುಕ್ರವಾರ ಸಂಜೆ ನಗರದ ಮೈತ್ರಿ ಶಿಕ್ಷಣ ಮಹಾವಿದ್ಯಾಲಯದ ಆವರಣದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಜಾನಪದ ಪರಿಷತ್ತು, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಮತ್ತು ಚುನಾವಣಾ ಮತದಾರರಿಗೆ ಮತದಾನದ ಜಾಗೃತಿ ಮತ್ತು ಅರಿವು ಸಮಿತಿ ಏರ್ಪಡಿಸಿದ್ದ ಮತದಾನದ ಮಹತ್ವ ಕುರಿತು ಕವಿಗಳು ಬರೆದ ಕವನ ವಾಚನ ಮತ್ತು ಜಾನಪದ ಕಲಾವಿದರು ಲಾವಣಿ, ಗೀಗೀ ಪದ ಹಾಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಹಣ, ಹೆಂಡ, ಮಾಂಸ, ಉಡುಗರೆ, ಸೀರೆ, ಪಂಚೆ, ಜಾತಿ, ಧರ್ಮ ಏನೆಲ್ಲಾ ಆಮಿಷ ತೋರಿಸಿ ನಿಮ್ಮ ಮತವನ್ನು ದೋಚಲು ಬರುತ್ತಾರೆ. ಅವರು ನೀಡಿದ ಕೊಡುಗೆ ಶಾಶ್ವತವೇ. ಅವರು ಕೊಟ್ಡ ಉಡುಪಲ್ಲೇ ಇಷ್ಟು ವರ್ಷ ಕಳೆದಿರೇ ಪ್ರಶ್ನೆ ಮಾಡಿಕೊಳ್ಳಲು ಇದು ಸಮಯ. ಮಧ್ಯವರ್ತಿಗಳು ಬರುತ್ತಾರೆ. ಆಸೆ ಹುಟ್ಟಿಸುತ್ತಾರೆ. ಅವರ ಪ್ರಭಾವಕ್ಕೆ ಒಳಗಾಗದೆ ಎಲ್ಲರೂ ಮತಗಟ್ಟೆಗೆ ಬಂದು ಮತದಾನ ಮಾಡಿ. ನೀವು ಯುವ ಮತದಾರರು ಚುನಾವಣಾ ಆಯೋಗದ ರಾಯಭಾರಿ ಗಳಂತೆ ಕೆಲಸಮಾಡಿ. ನಿಮ್ಮ ಮನೆಮಂದಿ, ನೆರೆ ಹೊರೆ ಎಲ್ಲರೂ ಓಟುಹಾಕಲು ಪ್ರೇರೇಪಿಸಿ ಎಂದು ಹಿತನುಡಿದರು.

ಜಾನಪದ ಕಲಾವಿದರು, ನಾಲ್ಕನೇ ಜಿಲ್ಲಾ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷರು ಬಟ್ಟೇಮಲ್ಲಪ್ಪದ ಆಂಜನೇಯ ಜೋಗಿ ಲಾವಣಿ ಮತ್ತು ಗೀಗೀ ಪದಗಳ ಮೂಲಕ ಮತದಾನ ಜಾಗೃತಿ ಗೊಳಿಸಿದರು.

ಕವಿಗಳಾದ ಪಿ.ಕೆ. ಸತೀಶ್, ಭದ್ರಾವತಿ ಮಾಯಮ್ಮ, ಇಂದಿರಾ ಅವರು ಕವನ ವಾಚಿಸಿದರು. ಸ್ವೀಪ್ ಜಿಲ್ಲಾ ಉಪ ನೋಡಲ್ ಅಧಿಕಾರಿ ನವೀದ್ ಅಹ್ಮದ್ ಫರ್ವೀಜ್ ಅವರು ಚುನಾವಣಾ ಆಯೋಗ ಮಾಡಿರುವ ಅನೇಕ ಸುಧಾರಣಾ ಕಾರ್ಯಕ್ರಮಗಳನ್ನು ಪರಿಚಯಿಸಿದರು.ತಾಲ್ಲೂಕು ಕಸಾಪ ಅಧ್ಯಕ್ಷರಾದ ಮಹಾದೇವಿ ಅವರು ಅತಿಥಿಗಳಾಗಿ ಭಾಗವಹಿಸಿದ್ದರು.

ಕಾಲೇಜು ಪ್ರಾಂಶುಪಾಲರಾದ ಡಾ. ಶಾಲಿನಿ ಅಧ್ಯಕ್ಷತೆ ವಹಿಸಿದ್ದರು. ನಮಗೆ ಮತದಾನದ ಅರಿವಿದೆ, ಆದರೆ ಎಚ್ಚರಿಕೆಯಿರಬೇಕು ಎನ್ನುವುದು ಈ ಕಾರ್ಯಕ್ರಮದ ಆಶಯ ಎಂದು ವಿವರಿಸಿದರು. ಯತಿಕುಮಾರಿ ಸಂಗಡಿಗರು ನಾಡಗೀತೆ ಹಾಡಿದರು. ರೇಖಾ ನಿರೂಪಿಸಿ, ಚಂದನಾ ಬಿ.ಎಸ್. ಸ್ವಾಗತಿಸಿ, ಕಾವ್ಯ ಕೆ.ಎಲ್ ವಂದಿಸಿದರು

Exit mobile version