ಶಿವಮೊಗ್ಗ,ಅ.07:
ಅ.17 ರಂದು ಆರಂಭಗೊಳ್ಳುವ ದಸರಾ ಹಬ್ಬಕ್ಕೆ ನಗರದ ಕೋಟೆ ರಸ್ತೆಯ ಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಕೊರೋನ ವಾರಿಯರ್ಸ್ ನಿಂದ ಚಾಲನೆ ನೀಡಲಾಗುವುದು ಎಂದು ಮೇಯರ್ ಸುವರ್ಣ ಶಂಕರ್ ತಿಳಿಸಿದರು.
ಅವರು ಪಾಲಿಕೆಯ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೊರೋನ ಹಿನ್ನಲೆಯಲ್ಲಿ ಈ ಬಾರಿ ಸರಳ ದಸರ ನಡೆಸಲು ತೀರ್ಮಾನಿಸಲಾಗಿದ್ದು, ಕೊರೋನ ವಾರಿಯರ್ಸ್ ಗಳಾದ ಪೌರಕಾರ್ಮಿಕರು, ನೀರು ಸರಬರಾಜು ಸಿಬ್ಬಂದಿಗಳು, ಒಳಚರಂಡಿ ಸಿಬ್ಬಂದಿಗಳು, ಪೊಲೀಸ್, ಆರೋಗ್ಯ ಇಲಾಖೆಯ ಶುಶ್ರೂಷಕಿಯರು ಹಾಗೂ ವೈದ್ಯರುಗಳಿಂದ ನಾಡಹಬ್ಬಕ್ಕೆ ಚಾಲನೆ ನೀಡಲಾಗುವುದು ಎಂದರು.
ಪ್ರತಿವರ್ಷದಂತೆ ದಸರಾ ಸ್ವಾಗತ ಸಮಿತಿ, ದಸರಾ ಉತ್ಸವ ಸಮಿತಿ, ಯುವ ದಸರಾ, ಚಲನ ಚಿತ್ರೋತ್ಸವ, ರೈತ ದಸರಾ, ಅಲಂಕಾರ ದಸರಾ, ಆಹಾರ ದಸರ, ಪರಿಸರ ದಸರಾ ಮತ್ತು ಕಲಾ ದಸರಾ ಸಮಿತಿಗಳನ್ನ ಈ ಬಾರಿ ರಚಿಸದೆ ಕೇವಲ ಸ್ವಾಗತ, ಉತ್ಸವ ಹಾಗೂ ಅಲಂಕಾರ ಸಮಿತಿಯನ್ನ ಮಾತ್ರ ರಚಿಸಲಾಗುವುದು. ಸ್ವಾಗತ ಸಮಿತಿಗೆ ನಾನೇ ಅಧ್ಯಕ್ಷರಾಗಿದ್ದು ಅಲಂಕಾರ ಸಮಿತಿಗೆ ಪಾಲಿಕೆಯ ವಿರೋಧ ಪಕ್ಷದ ನಾಯಕ ಯೋಗೀಶ್ ಅಧ್ಯಕ್ಷರಾಗಿರುವರು ಎಂದರು.
ಅ.26 ರಂದು ವಿಜಯ ದಶಮಿ ದಿನ ಈ ಬಾರಿ ಮೆರವಣಿಗೆ ಇಲ್ಲದಿರುವುದರಿಂದ ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನಗಳಾದ ಕೋಟೆ ಸೀತಾರಾಮಜನೇಯ ದೇವಸ್ಥಾನ, ಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನ, ಲಕ್ಷ್ಮೀ ನಾರಾಯಣ ಶ್ರೀ ಭವಾನಿ ಶಂಕರ ದೇವಸ್ಥಾನ, ಭೀಮೇಶ್ವರ ದೇವಾಲಯ, ಆದಿ ರಂಗನಾಥ್ ದೇವಸ್ಥಾನ, ಗೋಪಾಳ ದೇವಸ್ಥಾನಗಳ ಸಮಿತಿಯವರು ಬನ್ನಿ ಮುಡಿಯುವ ಸ್ಥಳವಾದ ಫ್ರೀಡಂ ಪಾರ್ಕ್ ಗೆ (ಹಳೇ ಜೈಲ್ ಆವರಣ) ನೇರವಾಗಿ ದೇವರುಗಳನ್ನ ಕರೆತರಲಾಗುವುದು.
ಆದರೆ ಖಾಸಗಿ ದೇವಸ್ಥಾನ ದೇವರುಗಳನ್ನ ಬನ್ನಿ ಮುಡಿಯುವ ಸ್ಥಳಕ್ಕೆ ಕರೆತರುವುದು ಬೇಡವೆಂದು ಪಾಲಿಕೆ ಮನವಿ ಮಾಡಿಕೊಂಡಿದೆ. ಅಲ್ಲದೆ ಪ್ರತಿ ವರ್ಷದಂತೆ ಸಹಾಯಧನವನ್ನ ಈ ವರ್ಷವೂ ಪಾಲಿಕೆ ನೀಡಲು ತೀರ್ಮಾನಿಸಿದ್ದು ಪಾಲಿಕೆ ವ್ಯಾಪ್ತಿಯ 200 ದೇವಾಯಗಳಿಗೆ ತಲಾ 4000 ರೂ. ಹಣ ನೀಡಲಾಗುವುದು ಎಂದರು.
ಬನ್ನಿ ಮುಡಿಯುವ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಭಾಗವಹಿಸಲು ಅವಕಾಶವಿರುವುದಿಲ್ಲ. ಸ್ಥಳೀಯ ಟಿ.ವಿ. ಚಾನೆಲ್ ಗಳಲ್ಲಿ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ಬಿತ್ತರಿಸಲಾಗುವುದು. ಹಾಗಾಗಿ ಸಾರ್ವಜನಿಕರು ಈ ಕಾರ್ಯಕ್ರಮವನ್ನ ಮನೆಯಲ್ಲಿಯೇ ವೀಕ್ಷಿಸುವಂತೆ ಸುವರ್ಣ ಶಂಕರ್ ಕೋರಿದರು.
ಕೋವಿಡ್-19 ಹಿನ್ನೆಲೆಯಲ್ಲಿ ಸರಳ ದಸರಾಕ್ಕೆ ಮನವಿ ಮಾಡಿಕೊಳ್ಳಲಾಗುತ್ತಿದ್ದು ಕಳೆದ ವರ್ಷ 163 ಲಕ್ಷ ರೂ. ವೆಚ್ಚದಲ್ಲಿ ದಸರಾ ಆಚರಿಸಲಾಗಿತ್ತು. ಈ ವರ್ಷ 38 ಲಕ್ಷ ರೂ. ವೆಚ್ಚದಲ್ಲಿ ಆಚರಿಸಲಾಗುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಉಪಮೇಯರ್ ಸುರೇಖಾ ಮುರಳೀಧರ್, ಆಯುಕ್ತ ಚಿದಾನಂದ ವಟಾರೆ, ಸದಸ್ಯರಾದ ಚನ್ನಬಸಪ್ಪ, ಜ್ಞಾನೇಶ್ವರ್, ವಿಶ್ವಾಸ್ ಹಾಗೂ ಇತರರು ಇದ್ದರು