Site icon TUNGATARANGA

ಬಿ.ಜೆ.ಪಿ. ಪಕ್ಷದಿಂದ ನಾಮಪತ್ರ ಸಲ್ಲಿಸಿದ ಚೆನ್ನಬಸಪ್ಪ(ಚೆನ್ನಿ)/ ಈ ಬಾರಿ ವಿಧಾನಸಭೆಗೆ ಹೋಗುವುದು ನಿಶ್ಚಿತ: ಶಾಸಕ ಡಿ.ಎಸ್. ಅರುಣ್

ಶಿವಮೊಗ್ಗ: ಬಿಜೆಪಿ ಕಾರ್ಯಕರ್ತರ ಪಕ್ಷವಾಗಿದ್ದು, ಶಿವಮೊಗ್ಗ ನಗರ ಕ್ಷೇತ್ರದಿಂದ ಹಿರಿಯ ಕಾರ್ಯಕರ್ತ ಎಸ್.ಎನ್. ಚನ್ನಬಸಪ್ಪನವರಿಗೆ ಪಕ್ಷ ಟಿಕೆಟ್ ನೀಡಿದ್ದು, ಅವರು ವಿಧಾನಸಭೆಗೆ ಹೋಗುವುದು ನಿಶ್ಚಿತ ಎಂದು ಶಾಸಕ ಡಿ.ಎಸ್. ಅರುಣ್ ಹೇಳಿದರು.


ಅವರು ಇಂದು ಶಿವಮೊಗ್ಗ ನಗರ ಕ್ಷೇತ್ರದ ಅಭ್ಯರ್ಥಿ ಚನ್ನಬಸ್ಪನವರು ಕೋಟೆ ಸೀತಾರಾಮಾಂಜನೇಯ ದೇವಸ್ಥಾನದಿಂದ ಬೃಹತ್ ಮೆರವಣೀಗೆಯಲ್ಲಿ ಆಗಮಿಸಿ ನಾಮಪತ್ರ ಸಲ್ಲಿಸಿದ ಬಳಿಕ ಎನ್‌ಡಿವಿ ಹಾಸ್ಟೆಲ್ ಆವರಣಲದ್ಲಿ ನಡೆದ ಬೃಹತ್ ಸಭೆ ಉದ್ದೇಶಿಸಿ ಮಾತನಾಡಿದರು.
ಪ್ರತಿಯೊಬ್ಬ ಕಾರ್ಯಕರ್ತ ನಾನೇ ಚನ್ನಬಸಪ್ಪ ಎಂದು ಭಾವಿಸಿ ಮನೆಮನೆಗೆ ತೆರಳಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳು ಮತ್ತು ಹಿಂದುತ್ವದ ಹೋರಾಟಗಳ ಬಗ್ಗೆ ತಿಳಿಸಿ ಗೆಲ್ಲಿಸೋಣ. ಚನ್ನಬಸಪ್ಪನವರ ಕಣಕಣದಲ್ಲೂ ಹಿಂದುತ್ವ ಇದೆ. ಪ್ರತಿಯೊಬ್ಬ ಕಾರ್ಯಕರ್ತನ್ನು ಗುರುತಿಸಿ ಅವರು ಸಂಘಟನೆಯಲ್ಲಿ ತೊಡಗಿಕೊಂಡಿದ್ದಲ್ಲದೆ ಎಲ್ಲಾ ಕಾರ್ಯಕರ್ತರಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದಾರೆ. ಅಂತಹ ಹಿರಿಯ ನಾಯಕನನ್ನು ಗುರುತಿಸಿ ಪಕ್ಷ ಸ್ಥಾನ ನೀಡಿದ್ದು ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ೧೩೦ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದರು.


ಪಕ್ಷದ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಮಾತನಾಡಿ, ಇವತ್ತು ಆದರ್ಶದ ದಿನ. ಒಬ್ಬ ಕಾರ್ಯಕರ್ತನಿಗೆ ಬಿಜೆಪಿಯಲ್ಲಿ ಯಾವ ಸ್ಥಾನ ಸಿಗುತ್ತದೆ ಎಂಬುದನ್ನು ಪಕ್ಷ ತೋರಿಸಿದೆ. ಅಲ್ಲದೆ ದೇಶಕ್ಕಾಗಿ ಮತ್ತು ಪಕ್ಷಕ್ಕಾಗಿ ತ್ಯಾಗ ಮಾಡಿ ಕಾರ್ಯಕರ್ತರಿಗೆ ಅವಕಾಶ ಮಾಡಿಕೊಟ್ಟ ಬಿ.ಎಸ್.ಯಡಿಯೂರಪ್ಪ ಮತ್ತು ಈಶ್ವರಪ್ಪರಂತಹ ನಾಯಕರು ನಮಗೆ ಸ್ಫೂರ್ತಿ.ಪಕ್ಷವನ್ನು ತಾಯಿಗೆ ಹೋಲಿಸಿ ತನ್ನ ಶಿಷ್ಯನಿಗೆ ಟಿಕೆಟ್ ನೀಡಿದಾಗ ಪಕ್ಷದ ಸೂಚನೆಯನ್ನು ಮನ್ನಿಸಿ ಯುವ ಪೀಳಿಗೆಗೆ ಅವಕಾಶ ಮಾಡಿಕೊಟ್ಟು ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಲ್ಲದೆ ನಾನು ೪೦ ಸಾವಿರ ಲೀಡಲ್ಲಿ ಗೆದ್ದಿದ್ದೆ. ನೀರು ೬೦ ಸಾವಿರ ಲೀಡಲ್ಲಿ ಗೆಲ್ಲುತ್ತೀಯಾ ಎಂದು ಆಶೀರ್ವಾದ ಮಾಡಿದ ಈಶ್ವರಪ್ಪನವರು ನಮಗೆಲ್ಲಾ ನಾಯಕರು.ಪೇಪರ್ ಟೈಗರ್‌ಗಳಿಗೆ ಹೆದರುವುದು ಬೇಡ. ಮಂಜಣ್ಣನವರೇ ನೀವು ನಮ್ಮ ಪಕ್ಷದ ಕಾರ್ಯಕರ್ತರ ಬೆವರಿನಿಂದ ನಾಲ್ಕೂ ಮನೆಯ ಸದಸ್ಯರಾಗಿ ಅಧಿಕಾರ ಅನುಭವಿಸಿದ್ದೀರಿ. ನಿಮ್ಮ ಅಧಿಕಾರ ಅದು ಬಿಜೆಪಿ ಕಾರ್ಯಕರ್ತನ ಕೊಡುಗೆ. ಪಕ್ಷ ಚಿಕ್ಕದಲ್ಲ. ನೀವು ನುಡಿದಂತೆ ನಡೆಯವವರು ಎಂದಾದರೆ ಜೆಡಿಎಸ್‌ನಿಂದ ಸಲ್ಲಿಸಿದ ನಾಮಪತ್ರ ಹಿಂಪಡೆದು ಭಾರತ ಮಾತೆಯ ಸೇವೆಗೆ ಸಿದ್ಧರಾಗಿ ಎಂದರು.


ಈಗಿನ ಚುನಾವಣೆ ಕೇವಲ ಚೆನ್ನಿಗಾಗಿ ಅಲ್ಲ.ದೇಶಕ್ಕಾಗಿ. ಯಾಕೆಂದರೆ ಗೋಹತ್ಯೆ ನಿಷೇಧ ಸೇರಿದಂತೆ ಪಿಎಫೈ ಮೇಲಿನ ಕೇಸುಗಳನ್ನು ಕೂಡ ವಾಪಾಸು ಪಡೆಯುವುದಾಗಿ ಕಾಂಗ್ರೆಸ್ಸಿಗರು ಹೇಳಿದ್ದಾರೆ. ಅವರು ಅಧಿಕಾರಕ್ಕೆ ಬರುವುದನ್ನು ತಡೆಯಲು ಚೆನ್ನಿಯನ್ನು ಗೆಲ್ಲಿಸಬೇಕು ಎಂದರು.
ಅಭ್ಯರ್ಥಿ ಚನ್ನಬಸಪ್ಪ ಮಾತನಾಡಿ, ಪಕ್ಷವನ್ನು ಉತ್ತುಂಗ ಶಿಖರಕ್ಕೆ ಏರಿಸಿದ ಬಿಎಸ್‌ವೈ, ಕೆ.ಎಸ್. ಈಶ್ವರಪ್ಪ,ಡಿ.ಹೆಚ್. ಶಂಕರಮೂರ್ತಿಯಂತಹ ನಾಯಕರುಕಟ್ಟಿ ಬೆಳೆಸಿದ ಪಕ್ಷವನ್ನು ಕಾರ್ಯಕರ್ತ ಹಾಳಾಗಲು ಬಿಡಬಾರದು. ಬಿಜೆಪಿ ಎಂದೂ ಸ್ವಾರ್ಥವನ್ನು

ಕಲಿಸಿಕೊಟ್ಟಿಲ್ಲ. ದೇಶಕ್ಕಾಗಿ ಹೋರಾಟಗಳನ್ನು ಕಟ್ಟುತ್ತಾ ಬಂದಿದೆ. ದೇಶದ ಮುಕುಟ ಕಾಶ್ಮೀರಕ್ಕಾಗಿ ಬಿಜೆಪಿ ಅನೇಕ ಬಲಿದಾನ ಮಾಡಿದೆ. ಲಾಲ್‌ಚೌಕ್‌ನಲ್ಲಿ ಪ್ರಧಾನಿ ಮೋದಿ ಹಾಗೂ ಮುರಳೀ ಮನೋಹರ ಜೋಷಿ ನೇತೃತ್ವದಲ್ಲಿ ತಾಯಿಯ ಹಾಲು ಕುಡಿದಿದ್ದರೆ ಭಾರತದ ಧ್ವಜ ಹಾರಿಸಿ ಎಂದು ಭಯೋತ್ಪಾದಕರು ಸವಾಲು ಹಾಕಿದ್ದಾಗ ಅಲ್ಲಿ ತಿರಂಗ ಹಾರಿಸಿ ಉತ್ತರ ಕೊಟ್ಟ ಪಕ್ಷ ನಮ್ಮದು. ಈಗ ಕಾಶ್ಮೀರದಲ್ಲಿ ನೆಮ್ಮದಿ ಕಾಣಲು ಬಿಜೆಪಿಯೆ ಕಾರಣ. ಜನಸಂಘ ಪ್ರಾರಂಭವಾಗಿದ್ದು ಅಧಿಕಾರಕ್ಕಾಗಿ ಅಲ್ಲ. ಕಾಶ್ಮೀರ ಉಳಿಸಲು. ದೀನ್‌ದಯಾಳ್ ಉಪಾಧ್ಯ ಹಾಗೂ ಶ್ಯಾಮ್‌ಪ್ರಸಾದ್ ಮುಖರ್ಜಿ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ್ದಲ್ಲದೆ ಕಾರ್ಯಕರ್ತ ಹೇಗಿರಬೇಕೆಂಬುದನ್ನು ತೋರಿಸಿಕೊಟ್ಟಿದ್ದಾರೆ. ಮತ್ತು ರಾಜ್ಯ ಬಿಜೆಪಿ ಮುಖಂಡರು ನಮಗೆ ಉತ್ತಮ ಮಾರ್ಗ ಹೇಳಿಕೊಟ್ಟಿದ್ದು, ಬಿ.ಎಸ್.ವೈ. ಹಾಗೂ ಈಶ್ವರಪ್ಪ ನೇತೃತ್ವದಲ್ಲಿ ದೇಶಕ್ಕಾಗಿ ಮತ್ತು ರಾಜ್ಯದ ಅಭಿವೃದ್ಧಿಗಾಗಿ ಬಿಜೆಪಿಯನ್ನು ಮತ್ತೆ ಗೆಲ್ಲಿಸೋಣ ಎಂದರು.


ಈ ಸಂದರ್ಭದಲ್ಲಿ ಜಿಜೆಪಿ ಪ್ರಮುಖರಾದ ಗಣೇಶ್ ಕಾರ್ಣಿಕ್, ಕುಲದೀಪ್‌ಕುಮಾರ್, ಜ್ಯೋತಿಪ್ರಕಾಶ್, ಡಾ. ಧನಂಜಯ ಸರ್ಜಿ, ಜ್ಞಾನೇಶ್ವರ್, ಹರಿಕೃಷ್ಣ, ಕೇಬಲ್‌ಬಾಬು, ಎಸ್.ಎನ್. ನಾಗರಾಜ್, ಮೇಯರ್ ಶಿವಕುಮಾರ್, ಉಪಮೇಯರ್ ಲಕ್ಷ್ಮಿಶಂಕರನಾಯಕ್, ಚಂದ್ರ ಶೇಖರ್, ಜಗದೀಶ್, ಸುರೇಖಾ ಮುರಳೀಧರ್, ಸಂತೋಷ್ ಬಳ್ಳೆಕೆರೆ ಸೇರಿದಂತೆ ಹಲವರಿದ್ದರು.

Exit mobile version