ಶಿವಮೊಗ್ಗ: ಶಿಕಾರಿಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಇಂದು ಇಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಭಾರೀ ಜನಸಾಗರದೊಂದಿಗೆ ಮೆರವಣಿಗೆಯಲ್ಲಿ ತೆರಳಿ ನಾಮಪತ್ರ ಸಲ್ಲಿಸಿದರು.
ಉಮೇದುವಾರಿಕೆ ಸಲ್ಲಿಕೆಗೂ ಮೊದಲು ಶಿಕಾರಿಪುರದ ಶ್ರೀ ಹುಚ್ಚರಾಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಜೊತೆಗೆ ರಾಯರ ಮಠಕ್ಕೂ ಭೇಟಿ ನೀಡಿ ವಿಶೇ? ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸಂಸದ ಹಾಗೂ ಸಹೋದರ ಬಿ.ವೈ. ರಾಘವೇಂದ್ರ ಮೊದಲಾದವರು ಇದ್ದರು.
ಮೆರವಣಿಗೆಯಲ್ಲಿ ನಾಯಕರಾದ ಬಿ.ಎಸ್. ಯಡಿಯೂರಪ್ಪ. ಎಂಟಿಬಿ ನಾಗರಾಜ್, ಕೇಂದ್ರ ಸಚಿವ ನಾರಾಯಣಸ್ವಾಮಿ, ನಟಿ ಶ್ರುತಿ, ರಾಜೀವ್, ಶಾಸಕ ಎಸ್. ರುದ್ರೇಗೌಡ, ಸಂಸದ ಬಿ.ವೈ. ರಾಘವೇಂದ್ರ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್ ಮೊದಲಾದವರು ಭಾಗಿಯಾಗಿದ್ದರು.
ಮೆರವಣಿಗೆ ಉದ್ದಕ್ಕೂ ಸಾವಿರಾರು ಮಂದಿ ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ನೆರೆದಿದ್ದರು. ಮೆರವಣಿಗೆ ಉದ್ದಕ್ಕೂ ಪ್ರಧಾನಿ ನರೇಂದ್ರ ಮೋದಿ, ಬಿ.ಎಸ್. ಯಡಿಯೂರಪ್ಪ, ಬಿ.ವೈ. ವಿಜಯೇಂದ್ರ ಪರ ಘೋ?ಣೆ ಕೂಗಿದರು. ದೇಶಕ್ಕೆ ನರೇಂದ್ರ, ರಾಜ್ಯಕ್ಕೆ ವಿಜಯೇಂದ್ರ ಎಂಬ ಘೋ?ಣೆ ಮುಗಿಲು ಮುಟ್ಟಿತ್ತು.
ಕಾರ್ಯಕರ್ತರ ಪಡೆಯೇ ಶಕ್ತಿ:
ನಾಮಪತ್ರ ಸಲ್ಲಿಕೆ ಬಳಿಕ ಹೇಳಿಕೆ ನೀಡಿದ ವಿಜಯೇಂದ್ರ, ಹುಚ್ಚುರಾಯಸ್ವಾಮಿಗೆ ಪೂಜೆ ಸಲ್ಲಿಸಿ, ರಾಯರ ಮಠದಲ್ಲಿ ಪೂಜೆ ಸಲ್ಲಿಸಿ ನಾಮಪತ್ರ ಸಲ್ಲಿಸಿದ್ದೇನೆ. ನಮ್ಮ ಶಕ್ತಿ ಕಾರ್ಯಕರ್ತರ ಪಡೆ. ಕಾರ್ಯಕರ್ತರು ಶಕ್ತಿಯನ್ನು ತುಂಬುವ ಕೆಲಸ ಮಾಡಿದ್ದಾರೆ. ಕಾರ್ಯಕರ್ತರ ಪಡೆಯಿಂದ ದೊಡ್ಡ ಶಕ್ತಿ ತಂದುಕೊಟ್ಟಿದೆ. ಯುವಕರ ಹೊಸ ಪಡೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ, ರಾಜ್ಯ ಸರ್ಕಾರ ಅವರು ನಡೆಸಿರುವ ಅಭಿವೃದ್ಧಿ ಮೆಚ್ಚಿ ನಮ್ಮ ಜೊತೆ ಸೇರಿದ್ದಾರೆ ಎಂದರು.
ಕ್ಷೇತ್ರದಲ್ಲಿ ಮತದಾರರು ಯಡಿಯೂರಪ್ಪ ಅವರಿಗೆ, ಸಂಸದ ರಾಘವೇಂದ್ರ ಅವರಿಗೆ ಆಶೀರ್ವಾದ ಮಾಡಿದ್ದಾರೆ. ಅದೇ ರೀತಿ ನನಗೂ ಆಶೀರ್ವಾದ ಮಾಡುತ್ತಾರೆ ಎಂಬ ವಿಶ್ವಾಸ ಇದೆ. ಶಿಕಾರಿಪುರದಲ್ಲಿ ಪ್ರಚಾರ ಮಾಡುವ ಜೊತೆಗೆ ರಾಜ್ಯದಲ್ಲಿ ಬೇರೆ ಬೇರೆ ಕಡೆ ಒಂದು ವಾರ ಪ್ರಚಾರ ಮಾಡುತ್ತೇನೆ. ಈ ಬಾರಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದರು.
ಯಡಿಯೂರಪ್ಪ ಅಂಬಾಸಿಡರ್ ಕಾರಿನಲ್ಲಿ ಪ್ರಯಾಣಿಸಿದ ಕುರಿತು ಪ್ರತಿಕ್ರಿಯಿಸಿದ ವಿಜಯೇಂದ್ರ, ಯಡಿಯೂರಪ್ಪ ಅವರಿಗೆ ಅಂಬಾಸಿಡರ್ ಕಾರು ಮೇಲೆ ಬಹಳ ಪ್ರೀತಿ. ಈ ಹಿಂದೆ ಈ ಕಾರನ್ನು ಅವರು ಬಳಸುತ್ತಿದ್ದರು. ಅಂಬಾಸಿಡರ್ ಕಾರು ನಂಬರ್ ಸಿಕೆಆರ್ ೪೫೪ ಆ ಕಾರಿನ ನಂಬರ್ ಮೇಲೆ ಅವರಿಗೆ ಪ್ರೀತಿ ಹೊಂದಿದ್ದಾರೆ ಎಂದರು.