Site icon TUNGATARANGA

ನಾಳೆ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಸಿ. ಯೋಗೀಶ್ ಸಲ್ಲಿಕೆ

ಶಿವಮೊಗ್ಗ: ನಾಳೆ ಏ. ೨೦ ರಂದು ನಾಮಪತ್ರ ಸಲ್ಲಿಸುವುದಾಗಿ ಎಂದು ಕಾಂಗ್ರೆಸ್ ಅಭ್ಯರ್ಥಿ ಹೆಚ್.ಸಿ. ಯೋಗೀಶ್ ತಿಳಿಸಿದರು.
ಅವರು ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಏ. ೨೦ ರಂದು ಬೆಳಗ್ಗೆ ೧೧ ಗಂಟೆಗೆ ರಾಮಣ್ಣ ಶ್ರೇಷ್ಠಿ ಪಾರ್ಕ್ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಸಾವಿರಾರು ಕಾರ್ಯಕರ್ತರು ಅಭಿಮಾನಿಗಳ ಜೊತೆ ಮೆರವಣಿಗೆಯಲ್ಲಿ ಬಂದು ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಲಾಗುವುದು. ಈ ಮೆರವಣಿಗೆ ಗಾಂಧಿ ಬಜಾರ್, ಶಿವಪ್ಪನಾಯಕ ವೃತ್ತ, ಗೋಪಿ ವೃತ್ತ, ಕಮಲಾ ನೆಹರು ಕಾಲೇಜು ರಸ್ತೆಯ ಮೂಲಕ ಪಾಲಿಕೆಯಲ್ಲಿರುವ ಚುನಾವಣಾಧಿಕಾರಿಗಳ ಕಚೇರಿಗೆ ತೆರಳಲಿದೆ ಎಂದರು.


ನಾನು ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದಿಂದ ಬಂದವನು. ನಮ್ಮ ಅಜ್ಜ ಹೆಚ್.ಎಂ. ಮಲ್ಲಿಕಾರ್ಜುನ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ನಮ್ಮ ತಂದೆ ಹೆಚ್.ಎಂ. ಚಂದ್ರಶೇಖರಪ್ಪ ಶಾಸಕರಾಗಿ ಕೆಲಸ ಮಾಡಿದ್ದಾರೆ. ನಾನು ೨೦೦೭ ರಲ್ಲಿ ಪಾಲಿಕೆ ಸದಸ್ಯನಾಗುವ ಮೂಲಕ ರಾಜಕೀಯಕ್ಕೆ ಕಾಲಿಟ್ಟೆ. ಮೂರು ಬಾರಿ ಪಾಲಿಕೆ ಸದಸ್ಯನಾಗಿ ಕೆಲಸ ಮಾಡಿದ್ದೇನೆ ಎಂದರು.


ಮುಖ್ಯವಾಗಿ ಹೋರಾಟದ ಮೂಲಕ ಗುರುತಿಸಿಕೊಂಡಿದ್ದೇನೆ. ಜೊತೆಗೆ ಶಿವಮೊಗ್ಗ ನಗರದ ಅಭಿವೃದ್ಧಿಯ ಕಲ್ಪನೆ ನನಗಿದೆ. ಎಲ್ಲಾ ವರ್ಗದ ಜನರು ನನ್ನ ಪ್ರೀತಿಸಿದ್ದಾರೆ. ಯಾವುದೇ ಕಪ್ಪು ಚುಕ್ಕೆ ಇಲ್ಲದ ಕುಟುಂಬ ನನ್ನದು. ಜನರು ನನಗೆ ಆಶೀರ್ವಾದ ಮಾಡುತ್ತಾರೆ ಎಂಬ ನಂಬಿಕೆ ಇದೆ. ಜೊತೆಗೆ ಕಾರ್ಯಕರ್ತರ ಬಹುದೊಡ್ಡ ಪಡೆ ನನಗಿದೆ ಎಂದರು.


ಶಿವಮೊಗ್ಗ ನಗರಕ್ಕೆ ಸಂಬಂಧಿಸಿದಂತೆ ನಾವು ೧೧ ಜನರು ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದ್ದೆವು. ಯಾರೋ ಮೂರನೇಯವರು ಬರುತ್ತಾರೆ ಎಂಬ ವಿಷಯ ತಿಳಿದು ಎಲ್ಲರೂ ನಮ್ಮಲ್ಲಿ ಅರ್ಜಿ ಸಲ್ಲಿಸಿದವರಿಗೆ ಟಿಕೆಟ್ ಕೊಡಿ ಎಂದು ಹೈಕಮಾಂಡ್ ಗೆ ಮನವಿ ಮಾಡಿದ್ದೆವು. ಹೈಕಮಾಂಡ್ ಕೂಡ ಭರವಸೆ ನೀಡಿತ್ತು. ಅದರಂತೆ ಈಗ ನನಗೆ ಟಿಕೆಟ್ ನೀಡಲಾಗಿದೆ. ಟಿಕೆಟ್ ಆಕಾಂಕ್ಷಿಗಳಾಗಿದ್ದ ಎಲ್ಲರೂ ಕೂಡ ನನ್ನೊಂದಿಗಿದ್ದಾರೆ. ಕೆ.ಬಿ. ಪ್ರಸನ್ನಕುಮಾರ್ ಕೂಡ ನನ್ನ ಜೊತೆಗಿದ್ದಾರೆ. ಯಾವ ಗೊಂದಲವೂ ಇಲ್ಲ. ಎಲ್ಲರೂ ಒಟ್ಟಾಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲ್ಲಿಸುತ್ತೇವೆ. ಈ ಬಾರಿ ಕಾಂಗ್ರೆಸ್ ಗೆ ಬಹುದೊಡ್ಡ ನಿರೀಕ್ಷೆ ಇದೆ ಎಂದರು.


ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎಸ್.ಕೆ. ಮರಿಯಪ್ಪ, ಎಸ್.ಪಿ. ದಿನೇಶ್, ಆರ್. ಪ್ರಸನ್ನಕುಮಾರ್, ರೇಖಾ ರಂಗನಾಥ್, ಯಮುನಾ ರಂಗೇಗೌಡ, ಚಂದ್ರಭೂಪಾಲ್, ವಿಶ್ವನಾಥ್ ಕಾಶಿ, ರಮೇಶ್ ಹೆಗ್ಡೆ, ಆರ್.ಸಿ. ನಾಯ್ಕ್, ಎಸ್.ಪಿ. ಶೇಷಾದ್ರಿ, ಇಕ್ಕೇರಿ ರಮೇಶ್, ಮಂಜುನಾಥ ಬಾಬು, ಸುರೇಶ್ ಶೆಟ್ಟಿ ಮೊದಲಾದವರಿದ್ದರು.

Exit mobile version