Site icon TUNGATARANGA

ರೈತರನ್ನು ದೇವರಂತೆ ನೋಡಲು ಶ್ರೀ ಪ್ರಸನ್ನನಾಥ ಸ್ವಾಮೀಜಿ ಕರೆ

ಶಿವಮೊಗ್ಗ,ಸೆ.06:

ರೈತರನ್ನು ದೇವರು ಎಂದು ಪರಿಗಣಿಸಿ ತಮ್ಮಿಂದ ಆದಷ್ಟು ಸಹಕಾರವನ್ನು ನೀಡಿ ಎಂದು ಆದಿಚುಂಚನಗಿರಿ ಮಹಾಸಂಸ್ಥಾನದ ಪ್ರಧಾನ ಕಾರ್ಯದರ್ಶಿ ಹಾಗೂ ಶಿವಮೊಗ್ಗ ಶಾಖಾ ಮಠಾಧೀಶರಾದ ಶ್ರೀ ಪ್ರಸನ್ನನಾಥ ಸ್ವಾಮೀಜಿ ಇಂದು ಡಿಸಿಸಿ ಬ್ಯಾಂಕ್‍ನ ಆಡಳಿತ ಮಂಡಳಿಗೆ ಮತ್ತು ಸಿಬ್ಬಂದಿಗಳಿಗೆ ಸಲಹೆ ನೀಡಿದ್ದಾರೆ.
ಇಂದು ನವೀಕೃತಗೊಂಡ ಬ್ಯಾಂಕಿನ ಎಲ್ಲ ವಿಭಾಗಗಳಿಗೆ ಭೇಟಿ ನೀಡಿದ ಬಳಿಕ ಬ್ಯಾಂಕ್ ಆಡಳಿತ ಮಂಡಳಿಗೆ ಮತ್ತು ಸಿಬ್ಬಂದಿಗಳಿಗೆ ಆಶೀರ್ವಚನ ನೀಡಿದರು. ಇತ್ತೀಚೆಗೆ ಉದ್ಗಾಟನಾ ಸಂದರ್ಭದಲ್ಲಿ ಅನಿವಾರ್ಯ ಕಾರಣದಿಂದ ಭೇಟಿ ನೀಡಲು ಆಗಲಿಲ್ಲ ಎಂದು ತಿಳಿಸಿದ ಅವರು, ಬಡ ರೈತರಿಗೆ ಜಿಲ್ಲಾ ಸಹಕಾರಿ ಬ್ಯಾಂಕುಗಳೇ ಉಸಿರಾಗಿವೆ. ರೈತರಿಗೆ ಹತ್ತಿರದಲ್ಲಿ ಸಿಗುವ ಬ್ಯಾಂಕ್ ಎಂದರೆ ಡಿಸಿಸಿ ಬ್ಯಾಂಕ್. ತಾನು ಕಷ್ಟಪಟ್ಟು ಬೆಳೆದ ಬೆಳೆ ಕೈಗೆ ಸಿಗುವ ಸಂದರ್ಭದಲ್ಲಿ ಅತಿವೃಷ್ಟಿ ಅಥವಾ ಇನ್ನಿತರ ಕಾರಣಗಳಿಂದ ತಕ್ಕ ಬೆಲೆ ಸಿಗದೇ ರೈತ ಸಂಕಷ್ಟದಲ್ಲಿರುತ್ತಾನೆ. ಬ್ಯಾಂಕ್‍ಗಳು ಸಹಕರಿಸಿದರೆ ತಾನು ಬೆಳೆದ ಬೆಳೆಯನ್ನು ಸಂಗ್ರಹಿಸಿ ಉತ್ತಮ ಬೆಲೆ ಬಂದಾಗ ಮಾರುವ ಒಂದು ಅವಕಾಶ ಇರುತ್ತದೆ. ರೈತರು ಬ್ಯಾಂಕಿಗೆ ಬಂದಾಗ ಆತ ನಮ್ಮ ಗ್ರಾಹಕ ಮಾತ್ರವಲ್ಲ ದೇವರು ಎಂಬ ಭಾವನೆ ಬರಬೇಕು. ಶಾಲೆಯಲ್ಲಿ ಶಿಕ್ಷಕರಿಗೂ ಕೂಡ ವಿದ್ಯಾರ್ಥಿಗಳು ದೇವರು ಎಂಬ ಭಾವನೆ ಬಂದಾಗ ಮಾತ್ರ ಅವರಿಂದ ಉತ್ತಮ ಶಿಕ್ಷಣ ನೀಡಲು ಸಾಧ್ಯ ಎಂದರು.
ಜಿಲ್ಲಾ ಸಹಕಾರಿ ಬ್ಯಾಂಕ್ ಅನೇಕ ಸಂಕಷ್ಟಗಳ ನಡುವೆಯೂ ಉತ್ತಮ ಸಾಧನೆ ಮಾಡಿದೆ. ದಾಖಲೆ ಪ್ರಮಾಣದಲ್ಲಿ ರೈತರಿಗೆ ಆರ್ಥಿಕ ನೆರವು ನೀಡಿ ಸಹಕಾರ ಮಾಡಿದೆ. 15 ವರ್ಷಗಳ ಬಳಿಕ ಬ್ಯಾಂಕ್ ಸುಣ್ಣಬಣ್ಣ ಕಂಡು ಆಧುನಿಕ ಸ್ಪರ್ಶದೊಂದಿಗೆ ಆಕರ್ಷಕವಾಗಿ ಕಾಣುತ್ತಿದ್ದು, ಯಾವುದೇ ಕಾರ್ಪೋರೇಟ್ ಸಂಸ್ಥೆಗೂ ಕಡಿಮೆ ಇಲ್ಲದಂತೆ ಅಭಿವೃದ್ದಿ ಕಂಡಿದೆ. ಮುಂದಿನ ದಿನಗಳಲ್ಲಿ ಶಿವಮೊಗ್ಗ ಜಿಲ್ಲಾ ಡಿಸಿಸಿ ಬ್ಯಾಂಕ್ ಉತ್ತರೋತ್ತರ ಅಭಿವೃದ್ದಿಯಾಗಲಿ ಎಂದು ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ, ನಿರ್ದೇಶಕರುಗಳಾದ ಯೋಗಿಶ್ ಗೌಡ, ಷಡಾಕ್ಷರಿ, ದುಗ್ಗಪ್ಪ ಗೌಡ, ಸುಧೀರ್, ಬ್ಯಾಂಕ್‍ನ ಎಂಡಿ ರಾಜಣ್ಣರೆಡ್ಡಿ ಮೊದಲಾದವರಿದ್ದರು.

Exit mobile version