Site icon TUNGATARANGA

ಅಧಿಕೃತ ಅಭ್ಯರ್ಥಿಗಳ ಘೋಷಣೆ ಇಲ್ಲದೇ ಶಿವಮೊಗ್ಗದ : ವಿಧಾನಸಭೆ ಚುನಾವಣೆ ಕಾವು ಸೈಲೆಂಟ್/ಕಾಂಗ್ರೆಸ್-ಬಿಜೆಪಿಯಲ್ಲಿ ಟಿಕೆಟ್ ಪೈಪೋಟಿ | ಆಕ್ಷಾಂಕ್ಷಿಗಳಲ್ಲಿ ಕುತೂಹಲ, ಕಾತರ-ಆತುರ |

ಶಿವಮೊಗ್ಗ: ವಿಧಾನಸಭೆ ಚುನಾವಣೆ ಇನ್ನೇನು ಸನಿಹದಲ್ಲೇ ಇದೆ. ಆದರೆ, ಎಲ್ಲಾ ಪಕ್ಷಗಳು ಕೂಡ ಅಭ್ಯರ್ಥಿಗಳ ಅಧಿಕೃತ ಘೋಷಣೆ ಇಲ್ಲದೇ ಶಿವಮೊಗ್ಗದಲ್ಲಿ ಚುನಾವಣೆಯ ಕಾವು ಕಾಣಿಸಿಕೊಳ್ಳುತ್ತಿಲ್ಲ. 

ಶಿವಮೊಗ್ಗ ಜಿಲ್ಲೆಯನ್ನೇ ತೆಗೆದುಕೊಂಡರೇ ಕಾಂಗ್ರೆಸ್ ಮಾತ್ರ 4 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಘೋಷಿಸಿದೆ. ಬಿಜೆಪಿ ಇನ್ನೂ ಅಧಿಕೃತವಾಗಿ ಪಟ್ಟಿ ಬಿಡುಗಡೆ ಮಾಡಿಲ್ಲ. ಇನ್ನುಳಿದಂತೆ ಜೆಡಿಎಸ್ ಒಂದು ಕ್ಷೇತ್ರದಲ್ಲಿ ಮಾತ್ರ ಅಧಿಕೃತವಾಗಿ ಅಭ್ಯರ್ಥಿ ಹೆಸರು ಘೋಷಣೆ ಮಾಡಿದೆ. ಆಪ್ ನಿಂದ ಮೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಮುಖ್ಯವಾಗಿ ಶಿವಮೊಗ್ಗದಲ್ಲಿ ಯಾವ ಪಕ್ಷಗಳು ಕೂಡ ಅಭ್ಯರ್ಥಿಗಳನ್ನು ಘೋಷಿಸಿಲ್ಲ. 

ಹಾಗಾಗಿ, ಚುನಾವಣೆಯ ಕಾವು ಇನ್ನೂ ಆರಂಭವಾಗಿಲ್ಲ. ಆದರೆ, ಅಭ್ಯರ್ಥಿಗಳ ಆಯ್ಕೆಯ ಕಾವು ಮಾತ್ರ ಏರುತ್ತಿದೆ. ಅಂತೆ ಕಂತೆಗಳು ಸಂತೆಗಳಲ್ಲಿ ಓಡಾಡುತ್ತಿವೆ. ಜೊತೆಗೆ ಬಂಡಾಯದ ಬಿಸಿ ಎಲ್ಲಾ ಪಕ್ಷಗಳನ್ನು ಕಾಡುತ್ತಿದೆ. ಮುಖ್ಯವಾಗಿ ಶಿವಮೊಗ್ಗದಲ್ಲಿ ಒಂದಿಷ್ಟು ಗೊಂದಲಗಳಿವೆ. ಹಾಗೆಯೇ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲೂ ಕೂಡ ಕಾಂಗ್ರೆಸ್ ಆಗಲಿ, ಬಿಜೆಪಿ ಆಗಲಿ ಅಭ್ಯರ್ಥಿ ಯಾರೆಂದು ತಿಳಿಸುತ್ತಿಲ್ಲ.

ಶಿವಮೊಗ್ಗದಲ್ಲಿ ಆಯನೂರು ಮಂಜುನಾಥ್ ಒಂದು ರೀತಿಯಲ್ಲಿ ಹವಾ ಸೃಷ್ಠಿಸಿದ್ದಾರೆ. ಆದರೆ, ಈ ಹವಾಕ್ಕೆ ಬಿಜೆಪಿ ಬಗ್ಗಿದಂತೆ ಕಾಣುತ್ತಿಲ್ಲ. ಆಯನೂರು ಮಂಜನಾಥ್ ಅವರ ಯಾವ ಆರೋಪಗಳನ್ನು ಕೂಡ ಬಿಜೆಪಿ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಜೊತೆಗೆ ಶಿಕಾರಿಪುರದಲ್ಲಿ ಮತ್ತು ಶಿವಮೊಗ್ಗ ಗ್ರಾಮಾಂತರದಲ್ಲಿ ಚುನಾವಣೆಯ ಒಳ ಒಪ್ಪಂದವಿದೆ ಎಂಬ ಮಾತುಗಳು ಕೇಳಿಬರತೊಡಗಿವೆ. ಮುಖ್ಯವಾಗಿ ಜೆಡಿಎಸ್ ಶಿಕಾರಿಪುರ ಕ್ಷೇತ್ರವನ್ನು ಗುರಿಯಾಗಿಟ್ಟುಕೊಂಡು ಇಲ್ಲಿ ಒಳ ಒಪ್ಪಂದ ಇದೆ ಎಂದು ಆರೋಪಿಸುತ್ತಿದೆ. 

ಎಲ್ಲಾ ಪಕ್ಷಗಳಲ್ಲೂ ಹೊರಗಿನವರಿಗೆ ಮಣೆ ಹಾಕುತ್ತಾರೆ ಎಂಬ ಭೀತಿ ಇದೆ. ಶಿಕಾರಿಪುರ, ಶಿವಮೊಗ್ಗ ಗ್ರಾಮಾಂತರ, ಶಿವಮೊಗ್ಗ ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದಲ್ಲಿ ದುಡಿದವರಿಗೆ ಟಿಕೆಟ್ ಸಿಗಲಿಕ್ಕಿಲ್ಲ. ಹೊರಗಿನವರನ್ನು ತಂದು ಇಲ್ಲಿ ಸೀಟು ಕೊಟ್ಟರೆ ಅವರು ಕ್ಷೇತ್ರವನ್ನು ಪರಿಚಯ ಮಾಡಿಕೊಳ್ಳುವುದರೊಳಗೆ ಚುನಾವಣೆಯೇ ಮುಗಿದು ಹೋಗಿರುತ್ತದೆ. ಹೀಗಾಗಿ ಆಕಾಂಕ್ಷಿಗಳೆಲ್ಲರೂ, ಎಲ್ಲಾ ಪಕ್ಷದವರೂ ಒಂದು ರೀತಿಯಲ್ಲಿ ಹೈಕಮಾಂಡ್ ಅಥವಾ ವರಿಷ್ಠರ ಕಡೆ ನೋಡುವಂತಾಗಿದೆ. ಬಿಜೆಪಿಯ ಕೋರ್ ಕಮಿಟಿ ಸಭೆ ಈಗಾಗಲೇ ನಡೆದಿದ್ದು, ಸಂಭವನೀಯ ಅಭ್ಯರ್ಥಿಗಳ ಹೆಸರು ಹರಿದಾಡುತ್ತಿವೆ. ಜೊತೆಗೆ ನಕಲಿ ಪಟ್ಟಿಯೂ ಹರಿದಾಡುತ್ತಿದೆ. ಇಷ್ಟರೊಳಗೆ ಎಲ್ಲಾ ಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಪ್ರಚಾರ ಆರಂಭಿಸಬೇಕಿತ್ತು. 

ಘೋಷಣೆಯಾದ ಅಭ್ಯರ್ಥಿಗಳು ಕೂಡ ಪ್ರಚಾರವನ್ನು ತೀವ್ರಗತಿಯಲ್ಲಿ ಮಾಡುತ್ತಿಲ್ಲ. ಎದುರಾಳಿ ಅಭ್ಯರ್ಥಿ ಯಾರು ಎಂಬ ಕುತೂಹಲದಲ್ಲಿ ಅವರಿದ್ದಂತೆ ಕಾಣುತ್ತದೆ. ಕೆಲವರಂತೂ ಇನ್ನೂ ದೆಹಲಿ, ಬೆಂಗಳೂರಿನಿಂದ ವಾಪಸ್ ಶಿವಮೊಗ್ಗಕ್ಕೆ ಬಂದಿಲ್ಲ. ಕೊನೆಯ ಸಮಯದಲ್ಲಿ ಏನಾದರೂ ಬದಲಾವಣೆ ಆಗಬಹುದು ಕಾತರ, ಆತುರ ಆಕಾಂಕ್ಷಿಗಳಲ್ಲಿ ಕಾಣುತ್ತಿದೆ.

ಚುನಾವಣಾ ಆಯೋಗ ಇನ್ನೆರಡು ದಿನಗಳಲ್ಲಿ ಅಧಿಸೂಚನೆ ಹೊರಡಿಸಲಿದ್ದು, ಆ ಬಳಿಕ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಿದ್ದು, ಬಿ ಫಾರಂಗಾಗಿ ಕಾಯುತ್ತಿದ್ದಾರೆ. ಕಡೆಗಳಿಗೆಯಲ್ಲಿ ಬಿ ಫಾರಂ ಸಿಗಬಹುದು ಎಂಬ ನಂಬಿಕೆಯಿಂದ ಕೆಲವು ಆಕಾಂಕ್ಷಿಗಳು ಕಾಯುತ್ತಿದ್ದಾರೆ. 

ನೀತಿ ಸಂಹಿತೆ ಜಾರಿಯಾಗಿದೆ. ಈಗಾಗಲೇ ಕೆಲವು ಕಡೆ ಕೇಸ್ ಗಳನ್ನು ದಾಖಲಿಸಿಕೊಳ್ಳಲಾಗಿದೆ. ಸೀರೆ, ಬಟ್ಟೆ, ಹಣ, ಗಿಫ್ಟ್ ವಸ್ತುಗಳನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಮಹಾನಗರ ಪಾಲಿಕೆ, ಜಿಲ್ಲಾಡಳಿತ, ಕೆಲವು ಸಂಘ ಸಂಸ್ಥೆಗಳು ಚುನಾವಣೆ, ಮತದಾನದ ಮಹತ್ವ ತಿಳಿಸಲು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ಎಲ್ಲಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ ಹಾಗೂ ಅಧಿಸೂಚನೆ ಹೊರಡಿಸುತ್ತಿದ್ದಂತೆ ಚುನಾವಣೆ ಕಾವೇರಲಿದೆ. ಪ್ರಚಾರ ಮತ್ತು ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ಈಗಾಗಲೇ ಸಿದ್ಧವಾಗಿದ್ದು, ನಾಮಪತ್ರ ಸಲ್ಲಿಕೆ ಆರಂಭವಾಗುವುದನ್ನೇ ಕಾಯುತ್ತಿದ್ದಾರೆ.

Exit mobile version