Site icon TUNGATARANGA

ಕೆ.ಎಸ್. ಈಶ್ವರಪ್ಪ ಶೇಕಡ 40ರ ಕಮಿಷನ್ ಆರೋಪ ಹೊತ್ತು ಸಚಿವ ಪಟ್ಟ ಕಳೆದುಕೊಂಡರೋ ಇನ್ನೂ ಬುದ್ದಿ ಬಂದಿಲ್ಲ: ವೈ.ಎಚ್. ನಾಗರಾಜ್ ವ್ಯಂಗ್ಯ

ಶಿವಮೊಗ್ಗ: ಕೆಲವರಿಗೆ ಕೆಟ್ಟ ಮೇಲೆ ಬುದ್ಧಿ ಬರುತ್ತದೆ ಆದರೆ ಕೆ.ಎಸ್. ಈಶ್ವರಪ್ಪ ಅಂಥವರಿಗೆ ಕೆಟ್ಟ ಮೇಲೆಯೂ ಬುದ್ಧಿ ಬರುವುದಿಲ್ಲ ಎಂದು ಕೆಪಿಸಿಸಿ ಸದಸ್ಯ ವೈ.ಎಚ್. ನಾಗರಾಜ್ ಹೇಳಿದ್ದಾರೆ.

 ನಮ್ಮ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ಮಾತನಾಡುವ ಯಾವ ನೈತಿಕತೆಯೂ ಈಶ್ವರಪ್ಪನಿಗೆ ಇಲ್ಲ ಪದೇಪದೇ ಅವರನ್ನು ಅಲೆಮಾರಿ ಎಂದು ಹೇಳುವ ಮೂಲಕ ಅಲೆಮಾರಿ ಜನಾಂಗಕ್ಕೂ ಅವಮಾನ ಮಾಡುತ್ತಿದ್ದಾರೆ. ಈಗಾಗಲೇ ಅಲೆಮಾರಿ ಎಂಬ ಪದ ಬಳಕೆಯ ವಿರುದ್ಧ ಅವರ ಮೇಲೆ ದೂರು ಕೂಡ ದಾಖಲಿಸಲಾಗಿದೆ ಎಂದಿದ್ದಾರೆ.

 ಈಶ್ವರಪ್ಪ ಸಹನೆ ಕಳೆದುಕೊಂಡು ಬಹಳ ವರ್ಷಗಳೇ ಆಗಿವೆ. ಯಾವಾಗ ಸಿದ್ದರಾಮಯ್ಯ ಅವರನ್ನು ಹೀಯಾಳಿಸಲು ಹೊರಟರೋ ಆಗಲೇ ಅವರ ಶಕ್ತಿ ಕುಂದಿ ಹೋಯಿತು.  ಯಾವಾಗ ಶೇಕಡ 40ರ ಕಮಿಷನ್ ಆರೋಪ ಹೊತ್ತು ಸಚಿವ ಪಟ್ಟ ಕಳೆದುಕೊಂಡರೋ ಆವಾಗಲೇ ಅವರ ಮತಗಳು ಕಳೆದು ಹೋದವು. ಯಾವಾಗ ಬಿಜೆಪಿಯ ಪಾಲಿಗೆ ಶ್ರೀಕೃಷ್ಣನಂತೆ ಇದ್ದ ಯಡಿಯೂರಪ್ಪನವರ ವಿರುದ್ಧ ರಾಜಪಾಲರಿಗೆ ದೂರು ನೀಡಿ ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿಸಲು ಕಾರಣರಾದರೋ ಆವಾಗಲೇ ಅವರ ಮೇಲೆ ಬಿಜಿಪಿಗರಿಗೆ ಇದ್ದ ಭಕ್ತಿಯೂ ಹೊರಟು ಹೋಯಿತು ಎಂದು ಟೀಕಿಸಿದ್ದಾರೆ.

 ಈಶ್ವರಪ್ಪ ಈಗ ಏಕಾಂಗಿಯಾಗಿದ್ದಾರೆ. ಚುನಾವಣೆಯನ್ನು ಎದುರಿಸುವ ಯಾವ ಶಕ್ತಿಯೂ ಅವರಿಗೆ ಉಳಿದಿಲ್ಲ. ಚುನಾವಣೆಯನ್ನು ಗೆಲ್ಲಲು ಇದ್ದ ತಂತ್ರ ಮಂತ್ರಗಳು ಅವರಿಗೆ ಮರೆತು ಹೋಗಿವೆ. ಜನರ ಶಾಪದ ಪಾತ್ರೆ ತುಂಬಿ ತುಳುಕುತ್ತಿದೆ. ಸಿದ್ದರಾಮಯ್ಯ ಅವರನ್ನು ಹೀಯಾಳಿಸಿದ ಮರುಕ್ಷಣವೇ ಅವರ ಸೋಲಿನ ಮೂಟೆ ಹೆಗಲೇರಿದೆ.

 ಸಿದ್ದರಾಮಯ್ಯ ಅವರಿಗೆ ರಾಜ್ಯದಲ್ಲಿ ನೂರಾರು ಕ್ಷೇತ್ರಗಳಿವೆ ಆದರೆ ಈಶ್ವರಪ್ಪನವರಿಗೆ ಎಲ್ಲಿದೆ ಕ್ಷೇತ್ರ? ಶಿವಮೊಗ್ಗದಲ್ಲಿ ಈಗಾಗಲೇ ತನಗೆ ಸೀಟು ಸಿಗುವುದಿಲ್ಲ ಎಂದು ಮಗನನ್ನು ಕರೆತರಲು ಹೊರಟಿದ್ದಾರೆ, ಕಾಲ ಇನ್ನೂ ಇನ್ನು ಮಿಂಚಿಲ್ಲ ಧರ್ಮವನ್ನು ಸ್ವಾರ್ಥಕ್ಕೆ ಬಳಸಿಕೊಂಡ ಅಮಲು ಇಳಿಯಲಿ, ಅವರು ಚುನಾವಣೆ ಕಣದಿಂದ ದೂರ ಸರಿಯಲಿ, ಇಡೀ ಶಿವಮೊಗ್ಗದಲ್ಲಿ ಅಶಾಂತಿ ಹುಟ್ಟಿಸಿ ಶಾಂತಿ ಕದಡಿದ್ದ ಅವರ ಮಲಿನ ಮನಸ್ಸನ್ನು ಈಗಲಾದರೂ ಶುದ್ಧಗೊಳಿಸಿಕೊಳ್ಳಲಿ. ಸಿದ್ದರಾಮಯ್ಯ ಯೋಚನೆ ಬಿಟ್ಟು ಜೊತೆಗೆ ಮಗನ ಪ್ರೀತಿ ಬಿಟ್ಟು ನೆಮ್ಮದಿಯಿಂದ ಜೀವನ ನಡೆಸಲಿ ಎಂದು ವೈ.ಎಚ್. ನಾಗರಾಜ್ ಹೇಳಿದ್ದಾರೆ.

Exit mobile version