ಶಿವಮೊಗ್ಗ : ಶಿವಮೊಗ್ಗ ವಿಧಾನಸಭಾ ಚುನಾವಣೆಗೆ ಸಂಬಂಧಪಟ್ಟಂತೆ ಭಾರತೀಯ ಜನತಾ ಪಕ್ಷದ ಮೂರು ಹೆಸರುಗಳು ಅಂತಿಮ ಹಂತದ ರಣರಂಗದಲ್ಲಿ ನಿಂತಿವೆ ಎಂದು ಬಲ್ಲಮೂಲಗಳು ಇಂದಿಲ್ಲಿ ಸ್ಪಷ್ಟಪಡಿಸುತ್ತಿವೆ.
ಕಾಂಗ್ರೆಸ್ ಪಕ್ಷವು ಪಟ್ಟಿ ಬಿಡುಗಡೆ ಮಾಡುವ ಮುನ್ನ ಬಿಜೆಪಿ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆಗಳಿಲ್ಲ ಎನ್ನಲಾಗಿದ್ದು, ಜಾತಿ ಆಧಾರದ ಲೆಕ್ಕಾಚಾರಗಳು ಇಲ್ಲಿ ಪ್ರಮುಖವಾಗಿ ಕಂಡುಬರುತ್ತವೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ನೋಡಿಕೊಂಡು ಬಿಜೆಪಿ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಉದ್ದೇಶದಿಂದ ಅಂತಿಮವಾಗಿ ಹಿಂದುಳಿದ ವರ್ಗ, ಲಿಂಗಾಯಿತ ಹಾಗೂ ಬ್ರಾಹ್ಮಣ ಜನಾಂಗದ ಮೂವರ ಹೆಸರನ್ನು ಅಂತಿಮ ಪಟ್ಟಿಯಲ್ಲಿ ಇಟ್ಟುಕೊಂಡಿದೆ ಎಂದು ಇದೇ ಮೂಲಗಳು ತಿಳಿಸುತ್ತಿವೆ.
ಇನ್ನು ಕಾಂಗ್ರೆಸ್ ಏನಾದರೂ ಲಿಂಗಾಯಿತ ಕೋಮಿಗೆ ಆದ್ಯತೆ ನೀಡಿದರೆ ಮೊದಲ ಆಯ್ಕೆಗಳು ಸರಿಯಾಗುವುದಿಲ್ಲ. ಇಲ್ಲಿ ಪ್ರಬಲ ಶಕ್ತಿಯಾಗಿರುವ ಬ್ರಾಹ್ಮಣ ಸಮುದಾಯವನ್ನು ಕ್ರೂಡೀಕರಿಸಲು ಬಿಜೆಪಿಯ ಪ್ರಮುಖ, ಮಾಜಿ ಸೂಡಾ ಅಧ್ಯಕ್ಷರಾದ ಎಸ್ ದತ್ತಾತ್ರಿ ಅವರ ಹೆಸರನ್ನು ಸಹ ಪ್ರಮುಖವಾಗಿ ಪರಿಗಣಿಸಲಾಗಿದೆ.
ಕಾಂಗ್ರೆಸ್ ಪಕ್ಷದ ಪಟ್ಟಿ ಬಿಡುಗಡೆಯಾಗುವ ಮುನ್ನವೇ ಬಿಜೆಪಿಯ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆಗಳಿಲ್ಲ. ಅಂತೆಯೇ ಕಾಂಗ್ರೆಸ್ ಸಹ ಇದೆ ಆಟವಾಡುತ್ತಿದೆ. ಚುನಾವಣಾ ದಿನಗಳು ಹತ್ತಿರ ಬರುತ್ತಿವೆ.
ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಆಯ್ಕೆ ರಾಜ್ಯಮಟ್ಟದಿಂದ ಕೇಂದ್ರ ಮಟ್ಟಕ್ಕೆ ಜಿಗಿದು ಸಾಕಷ್ಟು ಒತ್ತಡ, ಶಿಫಾರಸ್ಸುಗಳ ನಡುವೆ ಗೆಲ್ಲುವ ಅಭ್ಯರ್ಥಿಗಳ ಆಯ್ಕೆಗೆ ಹೈಕಮಾಂಡ್ ನಾಯಕರು ಹೆಚ್ಚಿನ ಆದ್ಯತೆ ನೀಡಿದ್ದಾರೆ ಎನ್ನಲಾಗಿದೆ.