ಬಂಡಾಯ ಬಾವುಟ ಹಾರಿಸಲು ಸಿದ್ದರಾದ ಆಯನೂರು ಮಂಜುನಾಥ್ ಎಂಎಲ್’ಸಿ ಸ್ಥಾನಕ್ಕೆ ರಾಜೀನಾಮೆ ಘೋಷಣೆ
ಶಿವಮೊಗ್ಗ,ಏ.03:
ಶೀಘ್ರದಲ್ಲೇ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿರುವ ಆಯನೂರು ಮಂಜುನಾಥ್, ಕೆ.ಎಸ್. ಈಶ್ವರಪ್ಪ ಅಥವಾ ಅವರ ಮಗನ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಶೀಘ್ರದಲ್ಲೇ ವಿಧಾನ ಷರಿಷತ್’ಗೆ ರಾಜೀನಾಮೆ ನೀಡಲಿದ್ದೇನೆ ಎಂದು ಘೋಷಣೆ ಮಾಡಿದ್ದಾರೆ. ಕೆ.ಎಸ್. ಈಶ್ವರಪ್ಪ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸೊಳ್ಳೆ ಓಡಿಸಲು ಸಾಧ್ಯವಾಗದ ನೀವು ಸೊಳ್ಳೆ ಪರದೆ ನೀಡುತ್ತೀರಾ ಎಂದು ವ್ಯಂಗ್ಯವಾಡಿದ್ದು, ನಿಮ್ಮ ವಿರುದ್ಧ ಅಖಾಡಕ್ಕೆ ನಾನು ನಿಲ್ಲಲಿದ್ದೇನೆ. ತಾವು ಸಾರ್ವಜನಿಕವಾಗಿ ಕ್ಷಮೆ ಕೇಳಿ, ಅಖಾಡಕ್ಕೆ ಇಳಿಯದಿದ್ದರೆ ಮಾತ್ರ ಬಿಜೆಪಿ ಪಕ್ಷದಲ್ಲಿ ಉಳಿಯುತ್ತೇನೆ ಎಂದಿದ್ದಾರೆ.
ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಿಂದ ಕಣಕ್ಕೆ ಇಳಿಯಲೇಬೇಕು ಎಂಬ ಇಚ್ಚೆ ಹೊಂದಿದ್ದೇನೆ. ಈಗಾಗಲೇ ನನ್ನ ನಿಲುವು, ಭಾವನೆ ಪ್ರಕಟ ಮಾಡಿದ್ದೇನೆ. ಪಕ್ಷದ ವೇದಿಕೆಯಲ್ಲೂ ನನ್ನ ವಿನಂತಿ ಸಲ್ಲಿಸಿದ್ದೇನೆ. ನನ್ನ ಆಸೆಗೆ ಪೂರಕವಾಗಿ ಬಿಜೆಪಿಯಿಂದ ಟಿಕೇಟ್ ಸಿಗುವ ಲಕ್ಷಣ ಕಂಡು ಬಂದಿಲ್ಲ. ಕೆಲವರ ಹಾಗೂ ಅವರವರ ಮಕ್ಕಳ ಹೆಸರು ಓಡಾಡುತ್ತಿದೆ. ನಮ್ಮ ಸ್ನೇಹಿತರು, ವಿಶ್ವಾಸಿಗರ ಜೊತೆ ಸಮಾಲೋಚನೆ ನಡೆಸಿದ್ದೇನೆ ಎಂದಿದ್ದಾರೆ.
ಈಶ್ವರಪ್ಪ ಅವರು ಪತ್ರಿಕಾಗೋಷ್ಠಿಯಲ್ಲಿ ನಿನ್ನನ್ನೇ ಕೇರ್ ಮಾಡಿಲ್ಲ, ಅವನು ಯಾವ ಲೆಕ್ಕ ಅಂದಿದ್ದಾರೆ. ಅವರ ಶಿಕ್ಷಣದ ಮಟ್ಟ ಅದು, ಅವರು ಬಹುವಚನ ಕಲಿತಿಲ್ಲ. ಬಹುವಚನ ಮಾತನಾಡಿದರೆ ಪ್ರಪಂಚ ಪ್ರಳಯವಾಗುತ್ತದೆ. ಅವರ ಮಾತನ್ನು ಸವಾಲಾಗಿ ಸ್ವೀಕರಿಸಿದ್ದು, ನನ್ನ ಬಗ್ಗೆ ಯಕಶ್ಚಿತ್ ಮಾತನಾಡಿದ ಈಶ್ವರಪ್ಪ, ಅವರಾಗಲಿ, ಅವರ ಮಗನಾಗಲಿ ಸ್ಪರ್ಧೆ ಮಾಡಲಿ. ಈ ಬಾರಿ ಅವರು ಚುನಾವಣಾ ಅಖಾಡಕ್ಕೆ ಬರಬೇಕು. ಪಕ್ಷದ ಟಿಕೇಟ್ ಕೊಡಲಿಲ್ಲ ಎಂದು ಪಲಾಯನ ಮಾಡಬಾರದು ಎಂದಿದ್ದಾರೆ.
ನಿಮಗೆ ರಾಜಕೀಯ ಲೆಕ್ಕ ಕೊಡುತ್ತೇನೆ ಎಂದ ಅವರು, ನಿಮ್ಮ ಗೋಡೌನ್’ನಲ್ಲಿ ಇರುವ ಎಲ್ಲಾ ನೋಟುಗಳನ್ನು ಎಣಿಸುವ ಮಿಷಿನ್‌ಗಳನ್ನು ತೆಗೆದುಕೊಂಡು ಬನ್ನಿ, ನನ್ನ ಪ್ರಶ್ನೆಗಳನ್ನು ಲೆಕ್ಕ ಹಾಕಲು ಬೇಕಾಗುತ್ತದೆ. ಬಹಳ ಪ್ರಭಾವಿ ಈಶ್ವರಪ್ಪ ಅವರು ರಾಜ್ಯದಲ್ಲಿ ಶಿವಮೊಗ್ಗ ಬಿಟ್ಟು ಬೇರೆ ಎಲ್ಲೂ ಸ್ಪರ್ಧಿಸುವ ಮನಸ್ಸಿಲ್ಲ. ನಿಮಗೆ ಅಷ್ಟೊಂದು ಪ್ರಭಾವ ಇದ್ದರೆ ನಿಮ್ಮ ಮಗನನ್ನು ನಿಲ್ಲಿಸಿಕೊಂಡು ಗೆಲ್ಲಿಸಿ ನಿಮ್ಮ ಪ್ರಭಾವ ತೋರಿಸಿ. ಎಲ್ಲಿಯೂ ನೀವು ಗೌರವದಿಂದ ನಡೆದುಕೊಂಡಿಲ್ಲ. ನೀವು ಮಂತ್ರಿ ಸ್ಥಾನಕ್ಕೆ ಸ್ಪರ್ಧೆ ಮಾಡುವವರು. ಹೀಗಾಗಿ ಪಾಪ ಶಾಸಕ ಸ್ಥಾನಕ್ಕೆ ಸ್ಪರ್ಧಿಸಲ್ಲ. ಅಧಿಕಾರದ ಹಪಾಹಪಿ ಇದೆ ನಿಮಗೆ ಎಂದು ವಾಗ್ದಾಳಿ ನಡೆಸಿದ ಅವರು, ಮಂತ್ರಿ ಸ್ಥಾನಕ್ಕಾಗಿ ಸದನಕ್ಕೆ ಹೋಗಲಿಲ್ಲ. ಜಿಲ್ಲಾ ಮಂತ್ರಿಯಾಗಿದ್ದವರು ನೀವು ಅದಕ್ಕೆ ತಕ್ಕ ಗೌರವ ಉಳಿಸಿಕೊಂಡಿದ್ದೀರಾ ಎಂದು ಪ್ರಶ್ನಿಸಿದರು.
ಸದ್ಯದಲ್ಲೇ ಶಿವಮೊಗ್ಗದಲ್ಲಿ ಚುನಾವಣೆ ಬೇಳೆಕಾಳು ಬೇಯಿಸಿಕೊಳ್ಳಲು ಹಿಂದೂ, ಮುಸ್ಲಿಂ ನಡುವಣ ಜಗಳ ಹಚ್ಚಲು ಕಾಣದ ಕೈಗಳು ಷಡ್ಯಂತ್ರ ನಡೆಸುತ್ತಿವೆ. ಈಶ್ವರಪ್ಪ ಅವರೇ ಯಾವುದೇ ಪ್ರಚೋದನೆ ಮಾಡದೇ, ಗಲಾಟೆ ಎಬ್ಬಿಸದೇ ಚುನಾವಣೆಗೆ ಬನ್ನಿ ನೋಡೋಣ.
ಗಲಭೆ ಮೂಲಕ ಗೆಲ್ಲಲು ಷಡ್ಯಂತ್ರ, ಶಾಂತಿಯಿಂದಿರಿ:
ಹಿಂದು ಮುಸ್ಲಿಂ ಭಾಂಧವರಲ್ಲಿ ಮನವಿ ಮಾಡ್ತೇನೆ, ದಯವಿಟ್ಟು ಶಾಂತ ರೀತಿಯಿಂದ ಇರಿ. ಕೆಲವೇ ದಿನದಲ್ಲಿ ದೇವಸ್ಥಾನ ಪೂಜಾ ಸ್ಥಳ ಇಲ್ಲವೇ ಮಸೀದಿ ಮಲಿನವಾಗಬಹುದು. ಪೊಲೀಸರು ಮೈಮರೆಯಬಾರದು. ಸದ್ಯದಲ್ಲೇ ಕೆಲವು ಘಟನೆ ಮರುಕಳಿಸುವುದಿದೆ. ಚುನಾವಣೆ ಸಂದರ್ಭದಲ್ಲಿ ಎಲ್ಲರೂ ಎಚ್ಚರಿಕೆಯಿಂದ ಇರಿ. ಯಾರೂ ಜಗಳ, ಗಲಭೆಯಂತಹ ವಿಷಯಗಳಿಗೆ ಕೈ ಹಾಕಬೇಡಿ ಎಂಬುದು ನನ್ನ ಪ್ರಾರ್ಥನೆ.
-ಆಯನೂರು ಮಂಜುನಾಥ್
ಮುಖ್ಯಮಂತ್ರಿ ಆಗಿದ್ದ ಯಡಿಯೂರಪ್ಪ ಜಿಲ್ಲೆಗೆ ಬಂದಾಗ ಯಾವಾಗಲಾದರೂ ಸ್ವಾಗತ ಮಾಡಿದ್ದೀರಾ. ಯಡಿಯೂರಪ್ಪ ಅವರಿಗೆ ಸದಾ ಅಪಮಾನ ಮಾಡಿ, ತಾವು ಅರ್ಹತೆ ಕಳೆದುಕೊಂಡಿದ್ದೀರಾ. ತಮಗೆ ಅರ್ಹತೆ, ಶಕ್ತಿ ಇದ್ದರೆ ತಮ್ಮ ಮಗನನ್ನು ಗೆಲ್ಲಿಸಿಕೊಳ್ಳಿ. ಕಾರ್ಪೋರೇಟರ್‌ಗಳು ನಿಮ್ಮ ಕುಟುಂಬದ ಹಿಡಿತದಲ್ಲಿ ನರಳುತ್ತಿದ್ದಾರೆ. ಕಾರ್ಯಕರ್ತರು ನೀವೊಬ್ಬರಾದರೂ ಅವರ ವಿರುದ್ದ ಧ್ವನಿ ಎತ್ತಿದ್ದೀರಾ ನೀವು ಸ್ಪರ್ಧೆ ಮಾಡಿ ನಾವು ನಿಮ್ಮ ಜೊತೆ ಇರುತ್ತೇವೆ ಎಂದಿದ್ದಾರೆ. ಶಿವಮೊಗ್ಗದಲ್ಲಿ ನಾಲ್ಕೂವರೆ ಕೋಟಿ ರೂಪಾಯಿ ಸೀರೆ ಸಿಕ್ಕಿದೆ. ಒಂದೂವರೆ ಕೋಟಿ ಹಣ ಸಿಕ್ಕಿದೆ. ಇಷ್ಟೊಂದು ಹಣ, ಇಷ್ಟೊಂದು ಸೀರೆ ತರಿಸುವಂತಹ ವ್ಯಾಪಾರಿ ಶಿವಮೊಗ್ಗದಲ್ಲಿ ಅವರನ್ನು ಬಿಟ್ಟರೆ ಬೇರೆ ಯಾರೂ ಇಲ್ಲ. ಈಗಾಗಲೇ ವಾರ್ಡ್‌ಗಳಲ್ಲಿ ಹಣ ಡಿಪಾಸಿಟ್ ಮಾಡಿದ್ದಾರೆ. ನನಗೆ ಎಲ್ಲಾ ಗೊತ್ತಿದೆ ಎಂದಿದ್ದಾರೆ.
ಶಿವಮೊಗ್ಗದಲ್ಲಿ ಅಭಿವೃದ್ಧಿ ಆಗಿರುವುದು ಯಡಿಯೂರಪ್ಪ, ರಾಘವೇಂದ್ರ ಅವರಿಂದ. ನೀವೇನು ಮಾಡಿದ್ದೀರಾ ಹೇಳಿ, 32 ವರ್ಷದ ರಾಜಕಾರಣದಲ್ಲಿ ನೀವು ಮಾಡಿದ್ದು ಏನಿಲ್ಲ. ನೀವು ಪ್ರಚೋದನೆಯಿಂದ ಮಾತನಾಡಿದ್ದು ಅಷ್ಟೇ. ಈ ಬಾರಿ ಇಂತಹ ಶೈಲಿ ನಡೆಯಲು ಬಿಡುವುದಿಲ್ಲ. ನೀವು ಶಾಸಕರಾಗಿದ್ದಾಗ ಕ್ಷೇತ್ರದ ಜನರ ಬಗ್ಗೆ ಮಾತನಾಡಿದ್ದು ಇದ್ದರೆ ತೋರಿಸಿ. ಕ್ಷೇತ್ರದಲ್ಲಿ ಸಂಘಟನೆ ಪ್ರಬಲವಾಗಿದ್ದು, ಕಾರ್ಯಕರ್ತರ ಹೆಗಲ ಮೇಲೆ ಕೈಯಿಟ್ಟು ಅಧಿಕಾರ ಮಾಡಿದ್ದೀರಾ. ಈಗ ನಾನು ಅಖಾಡಕ್ಕೆ ಸಿದ್ದನಿದ್ದೇನೆ. ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಸ್ಪರ್ಧೆ ಮಾಡ್ತೇನೆ ಎಂದರು.
ಯಡಿಯೂರಪ್ಪ ಅವರು ತಮ್ಮ ಪುತ್ರನನ್ನು ರಾಜಕಾರಣಕ್ಕೆ ತರಲು ಹೊರಟಾಗ ವೀರಾವೇಷ ತೋರಿಸಿದ್ದೀರಿ. ಈಗ ತಮ್ಮ ಮಗನನ್ನು ತರಲು ಮುಂದಾಗಿದ್ದೀರಾ. ನೀವು ಯಾವುದೇ ಷಡ್ಯಂತ್ರವನ್ನು ನಡೆಸಲು ನಾವು ಬಿಡುವುದಿಲ್ಲ ಎಂದರು.