Site icon TUNGATARANGA

ಸಾಗುವಳಿ ರೈತರ ಮೇಲಿನ ದೌರ್ಜನ್ಯಕ್ಕೆ ಖಂಡನೆ/ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಮನವಿ

ಶಿವಮೊಗ್ಗ,
ಸಾಗುವಳಿ ರೈತರ ಮೇಲೆ ನಡೆದ ದೌರ್ಜನ್ಯ, ಹಲ್ಲೆ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಇಂದು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ, ರಾಜ್ಯಪಾಲರಿಗೆ ಮನವಿ ಸಲ್ಲಿಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿತು.


ತುಮಕೂರು ಜಿಲ್ಲೆ ಗುಬ್ಬಿ ತಾಲೂಕು ಗಂಗ ಯ್ಯನಪಾಳ್ಯ ಗ್ರಾಮದಲ್ಲಿ ರೈತರು ಸುಮಾರು ಮೂವತ್ತು ನಲವತ್ತು ವರ್ಷಗಳಿಂದ ಕಂದಾಯ ಭೂಮಿಯಲ್ಲಿ ಬಗರ್‌ಹುಕುಂ ಸಾಗುವಳಿ ಮಾಡುತ್ತಿದ್ದಾರೆ. ಈಗ ಅರಣ್ಯ ಇಲಾಖೆಯವರು ಈ ಭೂಮಿ ನಮಗೆ ಸೇರಿದೆ ಎಂದು ಗುಂಡಿ ತೆಗೆದು ಸ್ವಾಧೀನಪಡಿಸಿ ಕೊಳ್ಳಲು ಮಾ.೩೦ರಂದು ಗ್ರಾಮಕ್ಕೆ ಬಂದಿದ್ದರು. ರೈತರು ಈ ಭೂಮಿಯೆ ನಮಗೆ ಆಧಾರ. ಭೂಮಿಯನ್ನು ಕಸಿದುಕೊಳ್ಳಬೇಡಿ ಎಂದು ಬೇಡಿಕೊಂಡರೂ ಕೂಡ ಅರಣ್ಯಾಧಿ ಕಾರಿಗಳು ಕೇಳದೆ ದೌರ್ಜನ್ಯ ಎಸಗಿದ್ದಾರೆ ಎಂದು ದೂರಿದರು.


ಅಲ್ಲದೆ ಮಹಿಳೆಯರು, ವೃದ್ಧರು ಎನ್ನದೆ ಅರಣ್ಯ ಇಲಾಖೆಯ ಅಧಿಕಾರಿಗಳು ದರ್ಪ ತೋರಿ ರೈತರ ತಲೆಯಲ್ಲಿ ರಕ್ತ ಸುರಿಯು ವಂತೆ ಹೊಡೆದಿದ್ದಾರೆ. ಅಲ್ಲದೆ ರೈತ ಮುಖಂಡರನ್ನು ಬಂಧಿಸಿದ್ದಾರೆ. ಶಾಂತಿ ಯುತ ಪ್ರತಿಭಟನೆ ಮಾಡುತ್ತಿರುವ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿದ್ದಾರೆ. ಜೊತೆಗೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಅರಣ್ಯ ಅಧಿಕಾರಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಒತ್ತಾಯಿಸಿದರು.


ಇದರ ಜೊತೆಗೆ ಬೆಂಗಳೂರಿನ ಶಿವ ರಾಮ ಕಾರಂತ ಬಡಾವಣೆಯ ರೈತರ ಮೇಲೆ ಬಿಡಿಎ ಅಧಿಕಾರಿಗಳು ದೌರ್ಜನ್ಯ ಎಸಗಿದ್ದಾರೆ. ಅಲ್ಲಿ ರೈತರ ೫ ಎಕರೆ ಸಪೋಟಾ ತೋಟ ನಾಶ ಮಾಡಿದ್ದಾರೆ. ದೌರ್ಜನ್ಯ ದಿಂದ ರೈತರ ಭೂಮಿಯನ್ನು ಕಸಿದು ಕೊಂಡಿದ್ದಾರೆ. ರೈತ ತಾನು ಕೊಟ್ಟ ಜಮೀನಿ ನಲ್ಲಿಯೇ ಮಾಲೀಕನ ಆಳಾಗಿ ದುಡಿಯು ವಂತಹ ಪರಿಸ್ಥಿತಿ ಬಂದಿದೆ ಎಂದು ಮನವಿ ದಾರರು ತಿಳಿಸಿದರು.


ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಹೆಚ್.ಆರ್. ಬಸವರಾಜಪ್ಪ, ಪದಾಧಿಕಾರಿಗಳಾದ ಇ.ಬಿ. ಜಗದೀಶ್, ಎಸ್. ಶಿವಮೂರ್ತಿ, ಟಿ.ಎಂ. ಚಂದ್ರಪ್ಪ, ಹಿಟ್ಟೂರು ರಾಜು, ಪಂಚಾಕ್ಷರಿ, ಜ್ಞಾನೇಶ್, ಚಂದ್ರಪ್ಪ, ರುದ್ರೇಶ್, ಪಿ.ಡಿ. ಮಂಜಪ್ಪ, ಕೆ. ರಾಘವೇಂದ್ರ ಸೇರಿದಂತೆ ಹಲವರಿದ್ದರು.

Exit mobile version