Site icon TUNGATARANGA

ಭದ್ರಾವತಿಯ ವಿಐಎಸ್‌ಎಲ್ ಕಾರ್ಖಾನೆ ಬಗ್ಗೆ ಸಂಸದ ಬಿ.ವೈ.ರಾಘವೇಂದ್ರ ಏನು ಹೇಳಿದ್ರು ?

ಭದ್ರಾವತಿಯ ವಿಐಎಸ್‌ಎಲ್ ಕಾರ್ಖಾನೆಯನ್ನು ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ. ಕಾರ್ಮಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಸಂಸದ ಬಿ.ವೈ. ರಾಘವೇಂದ್ರ ಅಭಯ ನೀಡಿದ್ದಾರೆ.


ಅವರು ಇಂದು ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ನಷ್ಟದಲ್ಲಿದ್ದ ವಿಐಎಸ್‌ಎಲ್ ಕಾರ್ಖಾನೆ ಯನ್ನು ಮುಚ್ಚುವ ನಿರ್ಧಾರ ಕೈಗೊಂಡಿತ್ತು. ಭದ್ರಾವತಿ ಕಾರ್ಖಾನೆ ಸೇರಿದಂತೆ ಹಲವು ಕಾರ್ಖಾನೆಗಳು ಕೂಡ ಈ ಪಟ್ಟಿಯಲ್ಲಿದ್ದವು. ಆದರೆ ಕೇಂದ್ರ ಉಕ್ಕು ಸಚಿವ ಹಾಗೂ ಗೃಹಸಚಿವರು ರಾಜ್ಯಕ್ಕೆ ಬಂದಾಗ ಕಾರ್ಖಾನೆಯನ್ನು ಮುಚ್ಚದಂತೆ ಮನವಿ ಮಾಡಲಾಗಿತ್ತು. ತಾವೂ ಸಹ ಕೇಂದ್ರದ ಮೇಲೆ ಒತ್ತಡ ತಂದು ಕಾರ್ಖಾನೆಯನ್ನು ಮುಚ್ಚಿದರೆ ಸುಮಾರು ೧೦ಸಾವಿರ ಜನರು ಉದ್ಯೋಗ ಕಳೆದುಕೊಳ್ಳುತ್ತಾರೆ. ಹಾಗಾಗಿ ಮುಚ್ಚಬಾರದು ಎಂದು ಮನವಿ ಮಾಡಿದ್ದೆವು. ಹೀಗಾಗಿ ಕೇಂದ್ರ ಸರ್ಕಾರ ಈಗ ವಿಐಎಸ್‌ಎಲ್ ಕಾರ್ಖಾನೆಯನ್ನು ಸದ್ಯಕ್ಕೆ ಮುಚ್ಚುವ ನಿರ್ಧಾರದಿಂದ ಹಿಂದಕ್ಕೆ ಸರಿದಿದೆ. ಬೀಸುವ ದೊಣ್ಣೆಯಿಂದ ನಾವು ಪಾರಾಗಿದ್ದೇವೆ ಎಂದರು.


ಕೇಂದ್ರ ಸರ್ಕಾರ ಕಾರ್ಖಾನೆಯನ್ನು ಮುಚ್ಚದಿರುವ ಬಗ್ಗೆ ಮತ್ತು ಸೈಲ್‌ಮುಂದುವರಿಸಿಕೊಂಡು ಹೋಗುವ ಬಗ್ಗೆ ಮೌಖಿಕವಾಗಿ ಒಪ್ಪಿಗೆ ನೀಡಿದೆ. ನೀತಿಸಂಹಿತೆ ಹಿನ್ನೆಲೆಯಲ್ಲಿ ಲಿಖಿತವಾಗಿ ತಿಳಿಸಲು ಆಗುತ್ತಿಲ್ಲ. ಆದರೆ ಬಿಜೆಪಿ ಕೊಟ್ಟ ಮಾತಿಗೆ ತಪ್ಪುವುದಿಲ್ಲ. ಹಾಗಾಗಿ ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವುದಿಲ್ಲ. ಮತ್ತು ಕಾರ್ಮಿಕರು ಭಯಪಡುವ ಅಗತ್ಯವೂ ಇಲ್ಲ ಎಂದರು.


ಶಿಕಾರಿಪುರದಲ್ಲಿ ನಡೆದ ಘಟನೆ ಬೇಸರ ತಂದಿದೆ. ಇದು ಮೀಸಲಾತಿ ಹೋರಾಟದ ನೆಪ ಅಷ್ಟೆ. ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಮೀಸಲಾತಿ ವಿಷಯವನ್ನು ಚುನಾವಣೆ ಸಂದರ್ಭದಲ್ಲಿ ಬೇಳೆ ಬೇಯಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದಾರೆ. ವಿರೋಧ ಪಕ್ಷದ ಪ್ರಾಯೋಜಕತ್ವದಲ್ಲಿ ಪ್ರತಿಭಟನೆಗೆ ಸಿದ್ಧರಿದ್ದಾರೆ. ಇದು ನಡೆಯುವುದಿಲ್ಲ. ಸಹಿಸಿಕೊಳ್ಳಲು ಆಗದ ಕೆಟ್ಟ ಮನಸ್ಸಿನವರು ನಮ್ಮ ಮನೆಮೇಲೆ ಕಲ್ಲು ಹೊಡೆದಿದ್ದಾರೆ ಎಂದರು.


ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಎಸ್. ರುದ್ರೇಗೌಡ, ಪ್ರಮುಖರಾದ ಜ್ಯೋತಿಪ್ರಕಾಶ್, ದತ್ತಾತ್ರಿ, ಧರ್ಮಪ್ರಸಾದ್, ಜಗದೀಶ್, ರಾಮಲಿಂಗಪ್ಪ, ಎಸ್. ಕುಮಾರ್, ಬುಳ್ಳಾಪುರ ಬಸವರಾಜಪ್ಪ ಮತ್ತಿತರರು ಇದ್ದರು.

Exit mobile version