Site icon TUNGATARANGA

ನಗರದ ಏಕೈಕ ದಟ್ಟ ಹಸಿರಿನ ತಾಣ ರಾಗಿಗುಡ್ಡ ಉಳಿಸಲು ಮಾ.25 ರಂದು ಕಾಲ್ನಡಿಗೆ ಹಾಗೂ ಸೈಕಲ್ ಜಾಥಾ

ನಗರದ ಏಕೈಕ ದಟ್ಟ ಹಸಿರಿನ ತಾಣವಾದ ರಾಗಿಗುಡ್ಡ ಉಳಿಸಲು ಆಗ್ರಹಿಸಿ ಮಾ.೨೫ರಂದು ಬೆಳಿಗ್ಗೆ ೯-೩೦ಕ್ಕೆ ರಾಗಿಗುಡ್ಡದ ಉತ್ತರ ಭಾಗದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಕಾಲ್ನಡಿಗೆ ಹಾಗೂ ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ರಾಗಿಗುಡ್ಡ ಉಳಿಸಿ ಅಭಿಯಾನದ ಸಂಚಾಲಕ ಕೆ.ವಿ. ವಸಂತಕುಮಾರ್ ಹೇಳಿದರು.


ಅವರು ಇಂದು ನವ್ಯಶ್ರೀ ಸಭಾಂಗಣದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಶಿವಮೊಗ್ಗ ನಗರಕ್ಕೆ ರಾಗಿಗುಡ್ಡ ಒಂದು ಕಳಸಪ್ರಾಯದಂತೆ ಇದೆ. ನೀರಿನ ಸೆಲೆಯಾಗಿದೆ. ಹಸಿರಿನ ತಾಣವಾಗಿದೆ. ಧಾರ್ಮಿಕ ಪವಿತ್ರ ಕ್ಷೇತ್ರವೂ ಆಗಿದೆ. ಆದರೆ ಈಗ ಅದರ ನಾಶ ಆರಂಭವಾಗಿದೆ. ಶಿವಮೊಗ್ಗದ ಪರಿಸರಕ್ಕೆ ರಾಗಿಗುಡ್ಡ ನಾಶ ಘೋರ ಶಾಶ್ವತ ಅನ್ಯಾಯ ಮಾಡುತ್ತಿದೆ. ಇದನ್ನು ಉಳಿಸಲು ಪರಿಸರಾಸಕ್ತರು ಒಂದು ಅಭಿಯಾನವನ್ನೇ ಆರಂಭ ಮಾಡಿದ್ದೇವೆ. ಅಭಿಯಾನದ ಮುಂದುವರಿದ ಭಾಗವಾಗಿ ಈ ಜಾಥಾ ಹಮ್ಮಿಕೊಂಡಿದ್ದೇವೆ

ಎಂದರು.
ರಾಗಿಗುಡ್ಡ ೧೦೮ ಎಕರೆ ವಿಸ್ತೀರ್ಣ ಪ್ರದೇಶವಾಗಿದೆ. ಆದರೆ ಈಗಾಗಲೇ ವಿವಿಧ ಯೋಜನೆಗಳಿಗಾಗಿ ಸುಮಾರು ೭೪ ಎಕರೆ ಜಾಗವನ್ನು ಪರಭಾರೆ ಮಾಡಲಾಗಿದೆ. ಇದರಲ್ಲಿ ೫ ಎಕರೆ ಇಎಸ್‌ಐ ಆಸ್ಪತ್ರೆಗೆ ಬಳಸಿಕೊಂಡಿದ್ದು, ೫೦ ಅಡಿಯವರೆಗೆ ಗುಡ್ಡ ಕಡಿಯಲಾಗಿದೆ. ಲಕ್ಷಾಂತರ ರೂ. ಮೌಲ್ಯದ ಫಲವತ್ತಾದ ಮಣ್ಣು, ಕಲ್ಲು ಲೂಟಿಯಾಗಿದೆ. ಉಳಿದ ೬೯ ಎಕರೆ ಗುಡ್ಡವೂ ಸಹ ನೆಲಸಮವಾಗಲಿದೆ. ಒಟ್ಟಾರೆ ಇಡೀ ರಾಗಿಗುಡ್ಡವೇ ನಾಶವಾಗಲಿದೆ. ಹಾಗಾಗಿ ಈಗಲೇ ನಾವು ಎಚ್ಚೆತ್ತುಕೊಳ್ಳಬೇಕಾಗಿದೆ ಎಂದರು.


ವಿವಿಧ ಯೋಜನೆಗಳಿಗೆ ನೀಡಿರುವ ಜಾಗದ ಮಂಜೂರಾತಿ ಪತ್ರ ಕೂಡಲೇ ರದ್ದುಮಾಡಬೇಕು. ರಾಗಿಗುಡ್ಡ ಪ್ರದೇಶವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಿ ಸಂರಕ್ಷಿತ ಅರಣ್ಯವಾಗಿ ಘೋಷಿಸಬೇಕು. ರಾಗಿಗುಡ್ಡವನ್ನು ಗುಡ್ಡದ ಕಾಡಾಗಿಯೇ ಉಳಿಸಬೇಕು ಎಂಬುದು ನಮ್ಮ ಆಗ್ರಹ ಎಂದರು.
ಈ ಬೃಹತ್ ಜಾಥಾಕ್ಕೆ ಈಗಾಗಲೇ ಸುಮಾರು ೧೦ಸಾವಿರಕ್ಕೂ ಹೆಚ್ಚು ಪರಿಸರಾಸಕ್ತರು ಸಹಿ ಮಾಡಿದ್ದಾರೆ.

ಶಿವಮೊಗ್ಗದ ಹಲವಾರು ಸಂಘ ಸಂಸ್ಥೆಗಳು ಯೋಗಕೇಂದ್ರಗಳು, ಜಿಲ್ಲಾ ಮತ್ತು ವಾಣಿಜ್ಯ ಕೈಗಾರಿಕಾ ಸಂಘ ಮುಂತಾದ ಹಲವು ಸಂಸ್ಥೆಗಳು ಬೆಂಬಲ ನೀಡಿವೆ. ಸುಮಾರು ೧೦ಸಾವಿರ ಜನರು ಇದನ್ನು ವಿರೋಧಿಸಿ ಸಹಿ ಹಾಕಿದ್ದಾರೆ. ಸಂಘಸಂಸ್ಥೆಗಳು ಬೆಂಬಲ ನೀಡಿರುವ ಮನವಿ ಪತ್ರವನ್ನು ಜಾಥಾದ ನಂತರ ಜಿಲ್ಲಾಧಿಕಾರಿಗಳಿಗೆ ಸಲ್ಲಿಸುತ್ತೇವೆ ಎಂದರು.


ಜಾಥಾಕ್ಕೆ ಬರುವವರಿಗೆ ಸೂಚನೆ: ಜಾಥಾಕ್ಕೆ ಬರುವವರಿಗೆ ಅನುಕೂಲವಾಗುವಂತೆ ನೆಹರೂ ಸ್ಟೇಡಿಯಂನಿಂದ ಬೆಳಿಗ್ಗೆ ೯ಗಂಟೆಗೆ ವಾಹನ ವ್ಯವಸ್ಥೆ ಮಾಡಲಾಗಿದೆ. ಒಂದುಪಕ್ಷ ರಾಗಿಗುಡ್ಡದಲ್ಲಿಯೇ ತಮ್ಮ ವಾಹನ ನಿಲ್ಲಿಸಿ ಜಾಥಾದಲ್ಲಿ ಭಾಗವಹಿಸುವವರಿಗೆ ಜಾಥಾದ ನಂತರ ವಾಪಾಸು ಹೋಗಲು ಸಹ ವಾಹನ ವ್ಯವಸ್ಥೆ ಕಲ್ಪಿಸಲಾಗಿದೆ. ಜಾಥಾವು ಸುಮಾರು ೪.೫ಕಿಮೀ. ಉದ್ದದ ನಡಿಗೆಯಾಗಿದೆ.

ಬಿಸಿಲೂ ಇರುತ್ತದೆ ಹಾಗಾಗಿ ತಲೆಗೆ ಕ್ಯಾಪ್ ಮತ್ತು ವಾಕಿಂಗ್ ಶೂ ಧರಿಸಬೇಕು. ಸೈಕಲ್‌ನಲ್ಲಿ ಕೂಡ ಭಾಗವಹಿಸಬಹುದು. ಅಕಸ್ಮಾತ್ ನಡೆಯಲು ಸಾಧ್ಯವಾಗದವರು ಬೆಳಿಗ್ಗೆ ೧೦-೩೦ಕ್ಕೆ ಉಷಾ ನರ್ಸಿಂಗ್ ಹೋಂ ಸರ್ಕಲ್‌ನಿಂದ ಜಾಥಾಕ್ಕೆ ಸೇರಿಕೊಳ್ಳಬಹುದಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಭಿಯಾನದ ಪ್ರಮುಖರಾದ ನಾಗೇಶ್ ನವ್ಯಶ್ರೀ, ಶ್ರೀಪತಿ, ಪರಿಸರ ನಾಗರಾಜ್, ಶೇಖರಗೌಳೇರ್, ಜೋಯ್ಸ್., ಚನ್ನವೀರ ಗಾಮನಕಟ್ಟೆ ಇದ್ದರು.

Exit mobile version