ಹೊಸನಗರ : ಕೊರೊನಾ ಮತ್ತು ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ದಿಗೆ ಹಿನ್ನಡೆಯಾಗಿತ್ತು ನಂತರದ ನಮ್ಮ ಎರಡು ಮೂರು ವರ್ಷದ ಬಿಜೆಪಿ ಸರ್ಕಾರದ ಆವಧಿಯಲ್ಲಿ ಸಾಕಷ್ಟು ಮೂಲಭೂತ ಸೌಲಭ್ಯಗಳ ಈಡೇರಿಸುವ ಮೂಲಕ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ಒತ್ತು ನೀಡಿರುವುದಾಗಿ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಅವರು ಕೋಡೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಗುರುವಾರ ಸುಮಾರು 6 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ದಿ ಕಾಮಗಾರಿಗಳ ಲೋಕಾರ್ಪಣೆ ಮತ್ತು ಗದ್ದಲಿ ಪೂಜೆ, ಕೋಡೂರು ಗ್ರಾಮ ಪಂಚಾಯಿತ್‌ನ ಡಿಜಿಟಲ್ ಗ್ರಂಥಾಲಯ ಉದ್ಘಾಟನೆ ನೆರವೇರಿಸಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಡಿಜಿಟಲ್ ಗ್ರಂಥಾಲಯದ ಮೂಲಕ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುವುದರೊಂದಿಗೆ ವಿವಿಧ ಸರ್ಕಾರಿ ಉದ್ಯೋಗದಂತಹ ಹಲವು ಉಪಯುಕ್ತ ಮಾಹಿತಿಯನ್ನು ಕ್ಷಣಾರ್ಧದಲ್ಲಿ ತಿಳಿದುಕೊಳ್ಳಲು ಇಂದೊಂದು ಉತ್ತಮ ಅವಕಾಶವನ್ನಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಗ್ರಾಮಾಡಳಿತದ ಮೂಲಕ ಡಿಜಿಟಲ್ ಗ್ರಂಥಾಲಯವನ್ನು ಆರಂಭಿಸುತ್ತಿರುವುದು ಹರ್ಷದಾಯಕವಾಗಿದೆ. ಈ ಸೌಲಭ್ಯದ ಸದುಪಯೋಗವನ್ನು ಗ್ರಾಮೀಣ ವಿದ್ಯಾರ್ಥಿಗಳು ಪಡೆದುಕೊಳ್ಳುವಂತೆ ಕರೆ ನೀಡಿದರು.
ಈಗಾಗಲೇ ನಾನು ತೀರ್ಥಹಳ್ಳಿ ಕ್ಷೇತ್ರದ ವ್ಯಾಪ್ತಿಗೆ 4 ಸಾವಿರ ಕೋಟಿ ರೂ.ಗಳಿಗೂ ಅಧಿಕ ಮೊತ್ತದ ವಿವಿಧ ಅಭಿವೃದ್ದಿ ಕಾಮಗಾರಿಗೆ ಸರ್ಕಾರದಿಂದ ಅನುದಾನ ತಂದಿರುವುದಾಗಿ ತಿಳಿಸಿ, ನಾನು ನುಡಿದಂತೆ ನಡೆದಿದ್ದೇನೆ. ಈ ಒಂದು ಅವಧಿಯಲ್ಲಿ ಕೋಡೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಅಭಿವೃದ್ಧಿಗೆ ಸುಮಾರು 52 ಕೋಟಿ ರೂ. ಅನುದಾನ ನೀಡಿದ್ದೇನೆ. ಲೋಕಸಭೆ ಬಜೆಟ್ ತಂದರು ತೀರ್ಥಹಳ್ಳಿ ಕ್ಷೇತ್ರದ ಅಭಿವೃದ್ಧಿಗೆ ಸಾಲದು. 3,269 ಕೋಟಿ ರೂ. ಕ್ಷೇತ್ರದ ಅಭಿವೃದ್ಧಿಗೆ ತಂದಿದೇನೆ. ಈ ಹಿಂದೆ ಇಂದ್ದಂತಹ ಮಾಜಿ ಸಚಿವರು ಏನು ಅಭಿವೃದ್ದಿ ಪಡಿಸಿದ್ದಾರೆಂದು ಪ್ರಶ್ನಿಸುವ ಕಾಲ ಸನ್ನಿಹಿತವಾಗಿದ್ದು ಸ್ವಾತಂತ್ರ್ಯ ಬಂದು 75 ವರ್ಷ ಕಳೆದಿದ್ದು ಒಂದೇ ಅವಧಿಯಲ್ಲಿ ಇಷ್ಟು ಹಣ ಯಾರಾದ್ರು ತಂದಿದ್ದಾರ ? ಎಂದು ಪ್ರಶ್ನಿಸಿದರು.
ಇದೇ ಮೊದಲ ಬಾರಿಗೆ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಅಭಿವೃದ್ಧಿ ಮಾಡಿದ್ದೇವೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ 24X7 ಹೊಸನಗರ ತಾಲೂಕಿಗೆ 422 ಕೋಟಿ ರೂ. ಮಂಜೂರಾಗಿದೆ.1994 ರಿಂದ ಅಡಿಕೆಗೆ ರಕ್ಷಾ ಕವಚವಾಗಿ ನಾನು ನಿಂತಿದ್ದೇನೆ. ನನ್ನಂತನು ಗೆದ್ದರೆ ಒಂದಿಷ್ಟು ಅಭಿವೃದ್ಧಿಯಾಗುತ್ತದೆ. ಬೇರೆಯವರು ಗೆದ್ದರೆ ಏನಾಗುತ್ತದೆ ಎಂದು ಕಳೆದ 10 ವರ್ಷ ನೋಡಿದ್ದೀರಿ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ರವರನ್ನು ಪರೋಕ್ಷವಾಗಿ ಟೀಕಿಸಿದರು.
ಇನ್ನಷ್ಟು ಅಭಿವೃದ್ಧಿ ನನ್ನಿಂದ ಆಗಬೇಕಿದ್ದರೆ ಮತ್ತೊಮ್ಮೆ ನನಗೆ ಅಧಿಕಾರ ನೀಡಿ ಮತದಾರರು ಚುನಾವಣೆಯ ಸಂದರ್ಭದಲ್ಲಿ ಅಭಿವೃದ್ದಿ ಮಾಡುವವರನ್ನು ಗುರುತಿಸಿ ಅಧಿಕಾರ ಕೊಟ್ಟರೆ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸುವುದರೊಂದಿಗೆ ಮಲೆನಾಡಿನ ಜ್ವಲಂತ ಸಮಸ್ಯೆಗಳಿಗೆ ಅಕ್ಷಯ ಕವಚವಾಗಿ ನಾನು ಸದಾ ಶ್ರಮಿಸುವುದಾಗಿ ಹೇಳಿದರು.
ಕೋಡೂರು ಗ್ರಾಮ ಪಂಚಾಯ್ತಿ ಆಧ್ಯಕ್ಷೆ ಸುನಂದ, ಉಪಾಧ್ಯಕ್ಷ ಜಯಪ್ರಕಾಶ್ ಶೆಟ್ಟಿ, ಶೇಖರಪ್ಪ, ಚಂದ್ರಕಲಾ, ಅನ್ನಪೂರ್ಣ ಮಹೇಶ, ಯೋಗೇಂದ್ರ, ಪ್ರೀತಿ, ಸವಿತಾ, ಮಂಜಪ್ಪ, ಉಮೇಶ್, ಮಾಜಿ ಸದಸ್ಯರಾದ ವಾಸುದೇವ್, ಗುರುಮೂರ್ತಿ, ಪುಟ್ಟಪ್ಪ, ರಮೇಶ್ ರಾವ್, ಕೋಡೂರು ವಿಜೇಂದ್ರ ರಾವ್, ಸುಧೀರ್ ಭಟ್, ಪಿಡಿಓ ನಾಗರಾಜ್ ಇನ್ನಿತರು ಹಾಜರಿದ್ದರು.
ಇದೇ ಸಂದರ್ಭದಲ್ಲಿ ಇತ್ತೀಚೆಗೆ ಕೋಡೂರು ಡಿಜಿಟಲ್ ಗ್ರಂಥಾಲಯಕ್ಕೆ ಪುಸ್ತಕ ಜೋಳಿಗೆ ಕಾರ್ಯಕ್ರಮದಡಿ ತಮ್ಮ ಹಳೆಯ ಪುಸ್ತಕಗಳನ್ನು ದಾನ ನೀಡಿದ ಹಿಂಡ್ಲೆಮನೆ ಕೆ.ಷಣ್ಮುಖಪ್ಪನವರನ್ನು ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಸನ್ಮಾನಿಸಿ ಗೌರವಿಸಿದರು.