Site icon TUNGATARANGA

ಮಾ. 25 ರಂದು ದಾವಣಗೆರೆಯಲ್ಲಿ ಬಿಜೆಪಿ ಮಹಾ ಸಂಗಮ ಸಮಾವೇಶ 10 ಲಕ್ಷಕ್ಕೂ ಅಧಿಕ ಜನ ಭಾಗಿ : ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ

ಶಿವಮೊಗ್ಗ: ದಾವಣಗೆರೆಯಲ್ಲಿ ಮಾ. 25 ರಂದು ಬಿಜೆಪಿ ಮಹಾ ಸಂಗಮ ಸಮಾವೇಶ ನಡೆಯಲಿದ್ದು, 10 ಲಕ್ಷಕ್ಕೂ ಅಧಿಕ ಜನ ಭಾಗವಹಿಸಲಿದ್ದು, ಪ್ರಧಾನಿ ಮೋದಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ಸೇರಿದಂತೆ ಎಲ್ಲಾ ಸಂಘಟನಾತ್ಮಕ ಕಾರ್ಯಕ್ರಮಗಳಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ನಿರೀಕ್ಷೆಗೂ ಮೀರಿ ಜನ ಬೆಂಬಲಿಸಿದ್ದಾರೆ. ಪೂರ್ಣ ಬಹುಮತ ಪಡೆದು ಬಿಜೆಪಿ ಅಧಿಕಾರಕ್ಕೆ ಬರುವುದು ನಿಚ್ಚಳವಾಗಿದೆ ಎಂದರು.

 ವಿಪಕ್ಷ ನಾಯಕ ಸಿದ್ಧರಾಮಯ್ಯ ವಿರುದ್ಧ ಮತ್ತೆ ಟೀಕಾಪ್ರಹಾರ ನಡೆಸಿದ ಈಶ್ವರಪ್ಪ, ವಿಪಕ್ಷ ನಾಯಕರಾಗಿ ಇರುವರೆಗೂ ರಾಜ್ಯದಲ್ಲಿ ಎಲ್ಲೂ ಅವರಿಗೆ ಚುನಾವಣೆಗೆ ನಿಲ್ಲಲು ಜಾಗ ದೊರೆತಿಲ್ಲ.224 ಕ್ಷೇತ್ರಗಳಲ್ಲೂ ನಿಂತರೂ ಸೋಲುವುದು ನಿಶ್ಚಿತ. ಕೋಲಾರ, ಬಾದಾಮಿ, ವರುಣಾ, ಕುಷ್ಟಗಿ ಎಲ್ಲಾ ಕ್ಷೇತ್ರ ಆಯ್ತು. ಈಗ ಮನೆಯವರನ್ನು ಕೇಳಿ ಹೇಳುತ್ತೇನೆ ಎನ್ನುತ್ತಿದ್ದಾರೆ. ಇನ್ನೊಂದೆಡೆ ಡಿಕೆಶಿ ಒಕ್ಕಲಿಗರು ಆಶೀರ್ವಾದ ಮಾಡಿದರೆ ನಾನೇ ಸಿಎಂ ಎನ್ನುತ್ತಿದ್ದಾರೆ. ಜಾತಿ ಲೆಕ್ಕಾಚಾರದಲ್ಲಿ ಮುಳುಗಿದ್ದಾರೆ. ಜಾತಿ ಜಾತಿ ಎನ್ನುತ್ತಲೇ ಜಾತಿ ರಾಜಕಾರಣ ಮಾಡುತ್ತಿರುವ ಪಕ್ಷ ಕಾಂಗ್ರೆಸ್. ಬಿಜೆಪಿಯನ್ನು ಕೋಮುವಾದಿಗಳು ಎನ್ನುತ್ತಾರೆ. ಈಗ ಹಿಂದುಳಿದವರ ಪರವಾಗಿ ಹೊರಟಿದ್ದಾರೆ ಎಂದರು. 

ಆಯನೂರು ಮಂಜುನಾಥ್ ಹೇಳಿಕೆಗಳಿಗೆ ನಾನು ಪ್ರತಿಕ್ರಿಯಿಸುವುದಿಲ್ಲ. ನಮ್ಮ ಪಕ್ಷದಲ್ಲಿ ಸ್ಪರ್ಧೆಯ ಬಗ್ಗೆ ಕೇಂದ್ರದ ನಾಯಕರು ತೀರ್ಮಾನಿಸುತ್ತಾರೆ. ಕೇಂದ್ರದ ನಾಯಕರ ಎಲ್ಲಾ ತೀರ್ಮಾನಕ್ಕೆ ಪಕ್ಷದ ಕಾರ್ಯಕರ್ತನಾಗಿ ನಾನು ಬದ್ಧನಾಗಿದ್ದೇನೆ. ವಿವಿಧ ಕಡೆಗಳಿಂದ ನೂರಾರು ಪ್ರತಿಕ್ರಿಯೆ ಬರುವುದು ಸ್ವಾಭಾವಿಕ. ಅದಕ್ಕೆ ನಮ್ಮ ಅಧ್ಯಕ್ಷರು ಉತ್ತರಿಸುತ್ತಾರೆ ಎಂದರು.

Exit mobile version