ಇಲ್ಲಿ ಸರ್ಕಾರಿ ವಾಹನಗಳೇ ಟ್ರಾಪಿಕ್ ಜಾಗದಲ್ಲಿ ನಿಂತಿವೆ. ಇದು ಸರಿಯೇ?
ರಸ್ತೆಯಲ್ಲಿ ಓಡಾಡುತ್ತಿರುವ ಸಾರ್ವಜನಿಕರು | ಫುಟ್‌ಪಾತ್ ಮೇಲೆ ವಾಹನಗಳ ಪಾರ್ಕಿಂಗ್ | ಹೆಲ್ಮೆಟ್ ಹಾಕದವರನ್ನು ಹಿಡಿಯುವ ಕಾಯಕದಲ್ಲೇ ಮಗ್ನರಾದರೇ ಟ್ರಾಫಿಕ್ ಪೊಲೀಸರು.? | ಜಾಗ ತೆರವಿಗೆ ಸಾರ್ವಜನಿಕರ ಆಗ್ರಹ
ರಾಕೇಶ್ ದೊಡ್ಮನೆ
ಶಿವಮೊಗ್ಗ,ಮಾ.20: ನಗರದ ಕುವೆಂಪು ರಸ್ತೆಯಲ್ಲಿರುವ ಹೋಟೇಲ್ ಎಂಬಸ್ಸಿ ಮಾಲೀಕರು ಫುಟ್‌ಪಾತ್ ಜಾಗವನ್ನು ವಾಹನಗಳ ಪಾರ್ಕಿಂಗ್ ಜಾಗವನ್ನಾಗಿಸಿಕೊಂಡು ಪಾದಚಾರಿಗಳು ರಸ್ತೆಯ ಮೇಲೆ ಓಡಾಡುತ್ತಿದ್ದು, ಅಪಾಯಕಾರಿ ಸ್ಥಿತಿ ನಿರ್ಮಾಣವಾಗಿದೆ ಎಂದು ಇಲ್ಲಿನ ಸಾರ್ವಜನಿಕರು ಆರೋಪಿಸಿದ್ದಾರೆ.
ನಗರದ ಕೆಲವು ಅಂಗಡಿ ಮಾಲೀಕರು ಫುಟ್ ಜಾಗಗಳನ್ನು ಸ್ವಂತ ಆಸ್ತಿ ಎಂಬಂತೆ ಒತ್ತುವರಿ ಮಾಡಿಕೊಂಡು ನಾಗರೀಕರು, ವೃದ್ಧರು, ಮಕ್ಕಳು ರಸ್ತೆಯಲ್ಲಿ ಓಡಾಡುವುದನ್ನು ಪತ್ರಿಕೆಗೆ ಬಂದ ಫೋಟೊದಲ್ಲಿ ಕಾಣಬಹುದು. ಸ್ಮಾರ್ಟ್‌ಸಿಟಿ ಯೋಜನೆಯ ಅನುದಾನದಡಿ ಪಾದಚಾರಿಗಳ ಸುರಕ್ಷಿತ ಓಡಾಟಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ನಿರ್ಮಿಸಿರುವ ಫುಟ್‌ಪಾತ್‌ಗಳು ನಗರದ ಬಹುತೇಕ ಕಡೆಗಳಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಲು, ಬೇರೆ ಉದ್ದೇಶಕ್ಕೆ ಬಳಕೆಯಾಗುತ್ತಿರುವುದು ಸಾರ್ವಜನಿಕರಿಗೆ ತೊಂದರೆಯುಂಟು ಮಾಡುತ್ತಿರುವುದು ಪೊಲೀಸರಿಗೆ, ಪಾಲಿಕೆಯ ಸಂಬಂಧಿಸಿದ ಅಧಿಕಾರಿಗಳಿಗೆ ಗೊತ್ತಿದ್ದರೂ ಸಹ ಸುಮ್ಮನೆ ನೋಡಿ ಹೋಗುವುದರ ಒಳಮರ್ಮವೇನು ತಿಳಿಯುತ್ತಿಲ್ಲ.
ತುಂಗಾತರಂಗದ ಟ್ರಾಫಿಕ್ ಕಳಕಳಿಯ ವರದಿ-_2:
ತುಂಗಾತರಂಗ ದಿನಪತ್ರಿಕೆ ಇಂತಹ ಟ್ರಾಪಿಕ್ ಕಿರಿಕಿರಿ ಹಾಗೂ ಪುಟ್ಪಾತ್ ಒತ್ತುವರಿ ಬಗ್ಗೆ ನಿರಂತರ ಮಾಹಿತಿ ನೀಡುತ್ತಾ ಬಂದಿದೆ. ಇಲ್ಲಿ ಪಾದಾಚಾರಿಗಳು, ವೃದ್ಧರು, ಮಕ್ಕಳು ಓಡಾಡಲು ಫುಟ್‌ಪಾತ್ ವ್ಯವಸ್ಥೆ ಮಾಡಲಾಗಿದ್ದು, ಈ ಫುಟ್‌ಪಾತ್ ಒತ್ತುವರಿ ತೆರವುಗೊಳಿಸಲು, ಸರಕುಗಳನ್ನು ಇಟ್ಟು, ವಾಹನಗಳನ್ನು ನಿಲ್ಲಿಸಲು ಬಳಕೆಮಾಡುವವರ ಮಾಲೀಕರ ವಿರುದ್ಧ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿ ಫುಟ್‌ಪಾತ್ ಒತ್ತುವರಿ ಮಾಡುವವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂಬುದು ಪ್ರಜ್ಞಾವಂತ ನಾಗರೀಕರ ಆಗ್ರಹ.
ಇದೇ ಟ್ರಾಫಿಕ್ ಪೊಲೀಸರು ಯಾರಿಗೂ ಕಾಣದ ಹಾಗೇ ಬಚ್ಚಿಟ್ಟುಕೊಂಡು ಹೆಲ್ಮೆಟ್ ಹಾಕದ ವಾಹನ ಸವಾರನನ್ನು ಕಳ್ಳನ ಹಾಗೇ ಹಿಡಿದು ದಂಡ ಹಾಕುವುದನ್ನು ನೋಡಿದರೆ ವಾಹನ ಸವಾರನೇ ಭಯಪಡುವಂತೆ ಮಾಡುತ್ತಾರೆ. ಏನಾದರೂ ಸ್ವಲ್ಪ ಪ್ರಶ್ನಿಸಲು ಹೋದರೆ ಸಾಕು ಬೈಕ್ ಸವಾರ ಎಣ್ಣೆ ಹೊಡೆಯದಿದ್ದರೂ ಸಹ ಡ್ರಿಂಕ್&ಡ್ರೈವ್ ಕೇಸ್ ಹಾಕಲು ಮುಂದಾಗುತ್ತಾರೆ. ಆದರೆ ನಗರದ ಹಲವು ಭಾಗಗಳಲ್ಲಿ ಫುಟ್‌ಪಾತ್ ಜಾಗವನ್ನು ಅತಿಕ್ರಮಿಸಿಕೊಂಡಿರುವುದು ಟ್ರಾಫಿಕ್ ಪೊಲೀಸರಿಗೆ ಕಾಣುತ್ತಿಲ್ಲವೇ ಎಂಬುದು ವಾಹನ ಸವಾರರ ಪ್ರಶ್ನೆ?॒