Site icon TUNGATARANGA

ರಕ್ತದಾನ ಶ್ರೇಷ್ಟ: ಎಸ್ಪಿ. ದಿನೇಶ್, ರಕ್ತದಾನಿಗಳಿಗೆ ಗೌರವ ಸಮರ್ಪಣೆ

ಶಿವಮೊಗ್ಗ, ಅ.01:

ಕ್ತದಾನ ಅತ್ಯಂತ ಶ್ರೇಷ್ಠ ದಾನವಾಗಿದ್ದು, ಆರೋಗ್ಯ ತೊಂದರೆಯಲ್ಲಿರುವವರ ಜೀವ ಉಳಿಸುವುದಕ್ಕೆ ಇದೊಂದು ಮಹತ್ವದ ದಾರಿಯಾಗಿದೆ ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಎಸ್.ಪಿ. ದಿನೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.

ಇಂದು ರಾಷ್ಟ್ರೀಯ ರಕ್ತದಾನ ದಿನಾಚರಣೆ ಅಂಗವಾಗಿ, ನಗರದ ಜೆ.ಪಿ.ಎನ್. ರಸ್ತೆಯಲ್ಲಿರುವ ರೆಡ್ ಕ್ರಾಸ್ ಸಂಜೀವಿನಿ ರಕ್ತನಿಧಿ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರ ಮತ್ತು ಅತಿಹೆಚ್ಚು ಬಾರಿ ರಕ್ತದಾನ ಮಾಡಿದ ದಾನಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಕೋವಿಡ್ ಸಂಕಷ್ಟದ ಸಮಯದಲ್ಲಿ ರಕ್ತದಾನಿಗಳ ಕೊರತೆಯಿಂದಾಗಿ ಅನೇಕ ರೋಗಿಗಳು ನಲುಗುವಂತಾಗಿದ್ದು, ಇಂತಹ ಕ್ಲಿಷ್ಟ ಸಂದರ್ಭದಲ್ಲಿಯೂ ಹಲವರು ರಕ್ತದಾನಿಗಳಾಗಿ ಮುಂದೆ ಬಂದಿದ್ದಾರೆ. ರಕ್ತದಾನ ಮಾಡಿದರೆ, ಏಕಾಗ್ರತೆ ಹೆಚ್ಚಾಗುತ್ತದೆ. ಇತ್ತೀಚಿನ ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ರಕ್ತದಾನ ಮಾಡಿದರೆ, ಶೇ. 80 ರಷ್ಟು, ಹೃದಯಾಘಾತ ಕಡಿಮೆಯಾಗಲಿದೆ. ಹೀಗಾಗಿ, ತಾವು ರಕ್ತದಾನ ಮಾಡುವುದರ ಜೊತೆಗೆ, ಇತರರನ್ನು ಪ್ರೇರೇಪಿಸಿ ಎಂದು ಕರೆ ನೀಡಿದರು. ನಿರಂತರವಾಗಿ ರಕ್ತದಾನ ಮಾಡುತ್ತಿದ್ದರೆ, ನಾವು ಆರೋಗ್ಯವಾಗಿರಲು ಸಹಕಾರಿಯಾಗುತ್ತದೆ ಎಂದು ಹೇಳಿದರು

ಇದೇ ವೇಳೆ, ಶಿವಮೊಗ್ಗ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಹೆಚ್.ಸಿ ಯೋಗಿಶ್ 50 ಬಾರಿ ರಕ್ತದಾನ ಮಾಡಿದ ಹಿನ್ನೆಲೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಅಂಗಾಂಗ ದಾನಿಗಳು ಹೆಚ್ಚಾಗುತ್ತಿದ್ದಾರೆ. ದಾನಗಳಲ್ಲಿ ಶ್ರೇಷ್ಠ ದಾನವಾಗಿರುವ ರಕ್ತದಾನ ಆಗಿದ್ದು, ಅನೇಕ ರೋಗಿಗಳು ಇತ್ತೀಚಿನ ದಿನಗಳಲ್ಲಿ ರಕ್ತದ ಕೊರತೆ ಎದುರಿಸುತ್ತಿದ್ದಾರೆ. ಯುವಕರು ಅರಿತು ಈ ನಿಟ್ಟಿನಲ್ಲಿ ಮುಂದೆ ಬರಬೇಕಿದೆ. ಈ ಮೂಲಕ ರಕ್ತದ ಕೊರತೆ ನೀಗಿಸಬೇಕಿದೆ. ಅದರಲ್ಲೂ, ಒಬ್ಬರು ರಕ್ತದಾನ ಮಾಡಿದಲ್ಲಿ ಅನೇಕರ ಜೀವ ಉಳಿಯಲಿದ್ದು, ಪುರುಷ, ಮಹಿಳೆ ಎಂಬ ಭೇದ ತೋರದೆ, ಪ್ರತಿಯೊಬ್ಬರು ರಕ್ತದಾನಕ್ಕೆ ಮುಂದಾಗಿ ಎಂದು ಕರೆ ನೀಡಿದರು.

ಈ ವೇಳೆ ಕಾರ್ಯಕ್ರಮದಲ್ಲಿ, ಅತಿ ಹೆಚ್ಚು ಬಾರಿ ರಕ್ತದಾನ ಮಾಡಿದ, ಪಾಲಿಕೆ ವಿಪಕ್ಷ ನಾಯಕ ಯೋಗಿಶ್ (50 ಬಾರಿ), ಪತ್ರಕರ್ತರಾದ ಗೋ.ವ. ಮೋಹನಕೃಷ್ಣ (62 ನೇ ಬಾರಿ), ಇನ್ಸುರೆನ್ಸ್ ಉದ್ಯೋಗಿ ವಿನಯ್ (98 ಬಾರಿ) ಖಾಸಗಿ ಸಂಸ್ಥೆ ಉದ್ಯೋಗಿ ರಾಜುಗೌಡ (37 ಬಾರಿ) ಇವರಿಗೆ ಸನ್ಮಾನಿಸಿ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ರಕ್ತದಾನಿಗಳ ಸಂಘದ ಅಧ್ಯಕ್ಷ ಧರಣೇಂದ್ರ ದಿನಕರ್, ಮಾಜಿ ಅಧ್ಯಕ್ಷ ಜಿ. ವಿಜಯ್ ಕುಮಾರ್, ರೆಡ್ ಕ್ರಾಸ್ ಸಂಜಿವಿನಿ ರಕ್ತನಿಧಿ ಸಂಸ್ಥೆ ಕಾರ್ಯದರ್ಶಿ ಮಂಜುನಾಥ್ ಅಪ್ಪಾಜಿ, ರೆಡ್ ಕ್ರಾಸ್ ಸಂಸ್ಥೆ ಕಾರ್ಯದರ್ಶಿ ಡಾ. ದಿನೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Exit mobile version