ಶಿವಮೊಗ್ಗ, ಅ.01:
ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಯುವತಿಯೊಬ್ಬಳ ಮೇಲಿನ ಘನಘೋರ ಅತ್ಯಾಚಾರ ಮತ್ತು ಸಾವು ಕಂಡ ಸಂತ್ರಸ್ಥೆಯ ಶವವನ್ನು ಕುಟುಂಬದವರ ಗಮನಕ್ಕೆ ತಾರದೆ ಪೊಲೀಸರೇ ಸುಟ್ಟು ಹಾಕಿರುವ ಪೈಶಾಚಿಕ ಕೃತ್ಯವು ನಾಗರೀಕ ಸಮಾಜ ತಲೆ ತಗ್ಗಿಸುವ ಪ್ರಕರಣವಾಗಿದ್ದು ಇದರ ಹೊಣೆಹೊತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ತಕ್ಷಣವೇ ರಾಜೀನಾಮೆ ನೀಡಬೇಕು ಮತ್ತು ಪ್ರಕರಣದ ನ್ಯಾಯಾಂಗ ತನಿಖೆ ನಡೆಸಬೇಕೆಂದು ಕೆಪಿಸಿಸಿ ವಕ್ತಾರ ಹಾಗೂ ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಒತ್ತಾಯಿಸಿದ್ದಾರೆ.
ಸೆಪ್ಟೆಂಬರ್ 14ರಂದು ಠಾಕೂರ್ ಜನಾಂಗದ ನಾಲ್ವರು ಯುವಕರು 19 ವರ್ಷದ ವಯಸ್ಸಿನ ದಲಿತ ಯುವತಿಯನ್ನು ಸಾಮೂಹಿಕವಾಗಿ ಅತ್ಯಾಚಾರ ಮಾಡಿದ್ದರು. ಸೂಕ್ತ ಚಿಕಿತ್ಸೆ ನೀಡದೆ ಯುವತಿ ಸ್ಥಿತಿ ಚಿಂತಾ ಜನಕವಾದಾಗ ನವದೆಹಲಿಯ ಸಪ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಯುವತಿ ಸೆ.26ರಂದು ಅಸುನೀಗಿದ್ದಳು. ಘಟನೆ ನಡೆದು 15ದಿನಗಳೇ ಕಳೆದಿದ್ದರೂ, ದೂರು ದಾಖಲಿಸಿ ಆರೋಪಿಗಳನ್ನು ಬಂಧಿಸದೆ, ಯುವತಿಯ ಶವವನ್ನು ಕುಟುಂಬದವರಿಗೆ ನೀಡದೆ ಪೊಲಿಸರೇ ರಾತ್ರೊರಾತ್ರಿ ಹತ್ರಾಸ್ ಗ್ರಾಮಕ್ಕೆ ಒಯ್ದು ಸುಟ್ಟು ಹಾಕಿದ್ದಾರೆ. ಗ್ರಾಮಸ್ಥರು ಮತ್ತು ಕುಟುಂಬದವರು ಶವವನ್ನು ತಮಗೆ ನೀಡಲು ಕೇಳಿಕೊಂಡರೂ ದೌರ್ಜನ್ಯದಿಂದ ಪೊಲೀಸರು ಶವದಹನ ನಡೆಸಿದ್ದು ಯಾರೂ ಕೇಳರಿಯದ ನಾಗರೀಕ ದೌರ್ಜನ್ಯ ಇದಾಗಿದೆ ಎಂದಿದ್ದಾರೆ.
ಯುವತಿಯ ಮೇಲಿನ ಅತ್ಯಾಚಾರ ಪ್ರಕರಣದ ದೂರು ದಾಖಲಿಸಿಕೊಳ್ಳಲೂ ಹಿಂದೇಟು ಹಾಕಿದ್ದ ಉತ್ತರ ಪ್ರದೇಶದ ಪೊಲೀಸರು, ಪ್ರಕರಣದ ತನಿಖೆಗೆ ಅಡ್ಡಗಾಲು ಹಾಕಲೆಂದೇ ತರಾತುರಿಯಲ್ಲಿ ಶವವನ್ನು ಸುಟ್ಟು ಹಾಕಿ ನೀಚತನ ಪ್ರದರ್ಶಿಸಿದ್ದಾರೆ. ಇಡೀ ಘಟನೆ ನಾಗರೀಕ ಸಮಾಜ ತಲೆ ತಗ್ಗಿಸುವಂತಹುದಾಗಿದೆ.
ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಕಾವಿ ಪರಂಪರೆಗೆ ಭಂಗ ತರುವಂತಹ ಕೆಲಸದಲ್ಲಿ ತೊಡಗಿದ್ದು ಆಡಳಿತ ನಡೆಸುವಲ್ಲಿ ವಿಫಲವಾಗಿದ್ದಾರೆ . ಉತ್ತರ ಪ್ರದೇಶ ರಾಜ್ಯವನ್ನೂ ಕೊಲೆ, ಸುಲಿಗೆ, ಅತ್ಯಾಚಾರದ ರಾಜಧಾನಿಯನ್ನಾಗಿ ಮಾಡುತ್ತಿರುವ ಮುಖ್ಯಮಂತ್ರಿಗಳು ಕೂಡಲೇ ರಾಜೀನಾಮೇ ನೀಡಿ ಅತ್ಯಾಚಾರ ಪ್ರಕರಣದ ನ್ಯಾಯಾಂಗ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.
–