Site icon TUNGATARANGA

ಜಂತುಹುಳು ಮಕ್ಕಳ ದೈಹಿಕ-ಮಾನಸಿಕ ಬೆಳವಣಿಗೆಯ ಕುಂಠಿತಕ್ಕೆ ಕಾರಣ/ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಜೇಶ್


ಶಿವಮೊಗ್ಗ,
     ಜಂತು ಹುಳು ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳೆವಣಿಗೆಯ ಕುಂಠಿತಕ್ಕೆ ಕಾರಣವಾಗುತ್ತದೆ ಆದ್ದರಿಂದ ಇದನ್ನು ಗುರುತಿಸಿ, ನಿಯಮಿತವಾಗಿ ಜಂತುಹುಳು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಜೇಶ್ ಹೇಳಿದರು.


     ನಗರದ ಗುರುಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು  ಮಾತನಾಡಿದರು.


     1 ವರ್ಷದಿಂದ 19 ವರ್ಷದ ಎಲ್ಲಾ ಮಕ್ಕಳಿಗೂ ಆಲ್ಬೆಂಡಜೋಲ್ ಮಾತ್ರೆಯನ್ನು ಅಂಗನವಾಡಿ, ಶಾಲೆ, ಪದವಿ ಪೂರ್ವ ಕಾಲೇಜುಗಳಲ್ಲಿ ಉಚಿತವಾಗಿ ವಿತರಿಸಲಾಗುವುದು. ಈ ವಯಸ್ಸಿನ ಶಾಲೆ ಬಿಟ್ಟ ಮಕ್ಕಳಿಗೂ ಸಹ ಅಂಗನವಾಡಿಗಳಲ್ಲಿ ಉಚಿತವಾಗಿ ಮಾತ್ರೆಯನ್ನು ನೀಡಲಾಗುವುದು ಎಂದರು.


      ಆಲ್ಬೆಂಡಜೋಲ್ ಮಾತ್ರೆಗಳನ್ನು ಮಕ್ಕಳಿಗೆ 6 ತಿಂಗಳಿಗೆ ಒಂದು ಸಲ ನೀಡಲಾಗುತ್ತದೆ. ಕಳೆದ ಸಾಲಿನಲ್ಲಿ ಜಿಲ್ಲೆಯಲ್ಲಿ ಒಟ್ಟು 4,52,075 ಮಕ್ಕಳಿಗೆ ನೀಡಲಾಗಿದೆ. ಇದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ.


      ಬೆಳೆಯುವ ಮಕ್ಕಳು, ಗರ್ಭಿಣಿಯರು ಮತ್ತು ಬಾಣಂತಿಯರಲ್ಲಿ ರಕ್ತಹೀನತೆ ಹೆಚ್ಚಾಗಿ ಕಾಣುತ್ತದೆ. ಶೇ.80 ರಷ್ಟು ರಕ್ತಹೀನತೆ ಜಂತು ಹುಳುಗಳಿಂದ ಉಂಟಾಗುತ್ತದೆ. ಹಾಗಾಗಿ ಕಡ್ಡಾಯವಾಗಿ ಪ್ರತಿಯೊಬ್ಬರು ಮಾತ್ರೆಯನ್ನು ತೆಗೆದುಕೊಳ್ಳಬೇಕು. ಮಾರ್ಚ್ ತಿಂಗಳ ಒಳಗೆ ಹಿಮೋಗ್ಲೋಬಿನ್ ಟೆಸ್ಟ್ ಮಾಡಲಾಗುವುದು ಎಂದು ತಿಳಿಸಿದ ಅವರು ಸುರಕ್ಷತಾ ಕ್ರಮಗಳ ಕುರಿತು ಹೇಳಿದರು.


      ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಸಿ.ಆರ್.ಪರಮೇಶ್ವರಪ್ಪ, ಆರ್‍ಸಿಹೆಚ್ ಅಧಿಕಾರಿ ಡಾ.ನಾಗರಾಜ ನಾಯ್ಕ, ತಾಲ್ಲೂಕು ವೈದ್ಯಾಧಿಕಾರಿ ಚಂದ್ರಶೇಖರ್, ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್, ಶಾಲಾ ಮುಖ್ಯೋಪಾಧ್ಯರಾದ ಮಂಜುನಾಥ ಸ್ವಾಮಿ, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಇತರರು ಉಪಸ್ಥಿತರಿದ್ದರು.

Exit mobile version