ಶಿವಮೊಗ್ಗ: ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅಕ್ರಮ ಲಂಚ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿ ಜನರಿಗೆ ಕಾನೂನಿನ ಬಗ್ಗೆ ಇರುವ ಗೌರವವನ್ನು ಕಾಪಾಡಬೇಕು ಎಂದು ಆಮ್ ಆದ್ಮಿ ಪಾರ್ಟಿಯ ಜಿಲ್ಲಾಧ್ಯಕ್ಷ ಕಿರಣ್ ಒತ್ತಾಯಿಸಿದರು.
ಅವರು ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಶಾಸಕರೊಬ್ಬರ ಮನೆಯಲ್ಲಿ ಕಂತೆ ಕಂತೆ ನೋಟುಗಳು ಸಿಕ್ಕ ನಂತರವೂ ಕಾನೂನು ಕ್ರಮ ಜರುಗಿಸಲು ಆಗದೆ ನಿಸ್ಸಹಾಯಕರಾಗಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
ರಾಜ್ಯದ ಚುನಾವಣೆ ಹೊತ್ತಿನಲ್ಲಿರುವಾಗಲೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪರ ಮಗ ಗುತ್ತಿಗೆದಾರರೊಬ್ಬರಿಂದ ಕಂತೆ ಕಂತೆ ಹಣ ಪಡೆಯುವಾಗ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ದಾಳಿಯ ಸಂದರ್ಭದಲ್ಲಿ ಸಿಕ್ಕ ಹಣ ಕಂಡು ಜನ ಸಾಮಾನ್ಯರು ಬೆಚ್ಚಿ ಬಿದ್ದಿದ್ದಾರೆ ಎಂದ ಅವರು, ಚುನಾವಣೆ ಸಂದರ್ಭದಲ್ಲಿ ಅಕ್ರಮ ಹಣ ಸಂಗ್ರಹದಲ್ಲಿ ತೊಡಗಿರುವ ರಾಜ್ಯದ ಎಲ್ಲಾ ಶಾಸಕರು ಹಾಗೂ ಮಂತ್ರಿಗಳ ಮನೆ ಹಾಗೂ ಕಚೇರಿಯನ್ನು ತಪಾಸಣೆಗೆ ಒಳಪಡಿಸಬೇಕೆಂದು ಒತ್ತಾಯಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮುಖಂಡರಾದ ಬಿ.ಆರ್.ಮನೋಹರಗೌಡ, ಹರೀಶ್, ಲಿಂಗರಾಜು, ಶಿವಕುಮಾರ್ಗೌಡ, ನಜೀರ್ ಅಹಮದ್ ಇನ್ನಿತರರು ಉಪಸ್ಥಿತರಿದ್ದರು.