ಶಿವಮೊಗ್ಗ: ಭಾರತ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಲು ರಾಷ್ಟ್ರೀಯ ಶಿಕ್ಷಣ ನೀತಿ ಸಹಕಾರಿಯಾಗಿದೆ ಎಂದು ಕುವೆಂಪು ವಿವಿ ಕುಲಪತಿ ಪ್ರೊ. ವೀರಭದ್ರಪ್ಪ ಹೇಳಿದರು.
ಅವರು ಇಂದು ಕುವೆಂಪು ವಿವಿ, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್, ಕುವೆಂಪು ವಿವಿ ರಾಜ್ಯಶಾಸ್ತ್ರ ಉಪನ್ಯಾಸಕರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಎರಡು ದಿನದ ರಾಷ್ಟ್ರೀಯ ಶಿಕ್ಷಣ ನೀತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಜಾಗತಿಕ ಮಟ್ಟದ ವಿಶ್ವವಿದ್ಯಾಲಯಗಳ ಸರಿಸಮನಾಗಿ ನಮ್ಮ ದೇಶದ ವಿಶ್ವವಿದ್ಯಾಲಯಗಳು ಬೆಳೆಯಲು ಈ ನೀತಿ ದಾರಿ ಮಾಡಿಕೊಡಲಿದೆ. ಆದ್ದರಿಂದ ಪರಿಣಾಮಕಾರಿ ಜಾರಿಗೆ ನಾವೆಲ್ಲ ಶ್ರಮಿಸಬೇಕಿದೆ ಎಂದರು.
ರಾಷ್ಟ್ರೀಯ ಶಿಕ್ಷಣ ನೀತಿಯ ಸುಧಾರಣೆಯನ್ನು ಕರ್ನಾಟಕ ರಾಜ್ಯವೇ ಪ್ರಥಮ ಬಾರಿಗೆ ಜಾರಿಗೆ ತಂದಿದೆ. ಕುವೆಂಪು ವಿವಿ ಕೂಡ ಇದಕ್ಕೆ ಸಾಕಷ್ಟು ಸ್ಪಂದಿಸಿದೆ. ಇದಕ್ಕೆ ಸಂಬಂಧಿಸಿದಂತೆ ಹಲವು ಕಾರ್ಯಾಗಾರಗಳು, ಸಭೆಗಳನ್ನು ನಡೆಸಲಾಗಿದೆ. ಮುಖ್ಯವಾಗಿ ಉಪನ್ಯಾಸಕರು ಈ ನೀತಿಯನ್ನು ಸರಿಯಾಗಿ ತಿಳಿದುಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ನಾವು ಕೆಲಸ ಮಾಡಿದ್ದೇವೆ. ವಿಶ್ವವಿದ್ಯಾಲಯದಲ್ಲಿನ ಅಧ್ಯಯನದ ಗುಣಮಟ್ಟ ವೃದ್ಧಿಸಲು ಸ್ಮಾರ್ಟ್ ಕ್ಲಾಸ್ ಗಳನ್ನು ಅಳವಡಿಸಲಾಗಿದೆ. ಸಂಶೋಧನೆಗೆ ಒತ್ತು ಕೊಡಲಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಯಚೂರು ವಿವಿ ಉಪ ಕುಲಪತಿ ಪ್ರೊ. ಹರೀಶ್ ರಾಮಸ್ವಾಮಿ ಮಾತನಾಡಿ, ಶಿಕ್ಷಣದ ಮೂಲಕ ಅನೇಕ ಅವಕಾಶ ದೊರೆಯುತ್ತವೆ. ಅದರಲ್ಲೂ ರಾಷ್ಟ್ರೀಯ ಶಿಕ್ಷಣ ನೀತಿ ಶಿಕ್ಷಣದ ಮೌಲ್ಯವನ್ನು ಹೆಚ್ಚಿಸುತ್ತದೆ. ನಾವು ಕಟ್ಟಡಗಳನ್ನು ಕಟ್ಟುವುದು ಮುಖ್ಯವಲ್ಲ, ವಿದ್ಯಾರ್ಥಿಗಳಲ್ಲಿ ಜ್ಞಾನದ ಕಟ್ಟಡ ಕಟ್ಟಬೇಕು. ಆ ಮೂಲಕ ರಾಷ್ಟ್ರದ ಕಟ್ಟಡ ಭದ್ರವಾಗುತ್ತದೆ ಎಂದರು.
ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಉಪನ್ಯಾಸಕರೇ ಹೆಚ್ಚಾಗಿ ಅರ್ಥ ಮಾಡಿಕೊಳ್ಳಬೇಕಾಗಿದೆ. ಆಗ ಮಾತ್ರ ವಿದ್ಯಾರ್ಥಿಗಳಿಗೆ ಕಲಿಸಲು ಸಾಧ್ಯ. ಬದಲಾವಣೆಗಳು ಅನಿವಾರ್ಯ. ಶಿಕ್ಷಣದಲ್ಲಿಯೂ ಕೂಡ ಹೊಸ ಸಂಚಲನ ಮೂಡಬೇಕಾಗಿದೆ. ಇದಕ್ಕೆ ರಾಷ್ಟ್ರೀಯ ಶಿಕ್ಷಣ ನೀತಿ ನೆರವಾಗುತ್ತದೆ. ನೆರವಾಗುವಂತಹ ಸನ್ನಿವೇಶವನ್ನು ಕೂಡ ಅಧ್ಯಾಪಕರೇ ರೂಪಿಸಬೇಕಾಗಿದೆ ಎಂದರು.
ಮೈಸೂರಿನ ಯುಜಿಸಿ ಹೆಚ್.ಆರ್.ಡಿ.ಸಿ. ನಿವೃತ್ತ ನಿರ್ದೇಶಕ ಪ್ರೊ. ರಾಜಶೇಖರ್ ಮಾತನಾಡಿ, ಇಂದಿಗೆ ಅಗತ್ಯವಾದ ಶಿಕ್ಷಣವನ್ನು ಎನ್ಇಪಿ ಅಡಿ ನೀಡಲಾಗಿದೆ. ದೇಶ ಬೆಳೆಯಲು, ಮುಂದುವರೆದ ರಾಷ್ಟ್ರಗಳೊಂದಿಗೆ ಸ್ಪರ್ಧೆ ಮಾಡಲು ವಿದ್ಯಾರ್ಥಿಗಳನ್ನು ತಯಾರು ಮಾಡಬೇಕಿದೆ. ಅಧ್ಯಾಪಕರನ್ನು ಸಾಂಪ್ರದಾಯಿಕ ಶೈಲಿಗಿಂತ ಭಿನ್ನವಾಗಿ ಗುರುತಿಸಲಾಗಿದೆ. ವಿದ್ಯಾರ್ಥಿಗಳ ಸರ್ವಾಂಗೀಣ ಬದಲಾವಣೆಗೆ ಸೂಚನೆ ನೀಡಿದೆ. ಹೊಸ ಮಾದರಿಯ ಕೋರ್ಸ್ಗಳನ್ನು ವಿದ್ಯಾರ್ಥಿಗಳು ಓದಲು ಅನುಕೂಲ ಮಾಡಿಕೊಡಲಾಗಿದೆ. ದೇಶದ ಭವಿಷ್ಯ ಶಾಲೆಗಳ ಕೋಣೆಗಳ ನಡುವೆ ಇರುತ್ತದೆ ಎಂಬ ಮಾತು ಸತ್ಯ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ. ಕೆ.ಬಿ. ಧನಂಜಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ತುಮಕೂರು ವಿವಿ ಕುಲಸಚಿವ ಡಾ. ಪ್ರಸನ್ನಕುಮಾರ್, ಕುವೆಂಪು ವಿವಿಯ ಇತಿಹಾಸ ವಿಭಾಗದ ಪ್ರಾಧ್ಯಾಪಕ ವೆಂಕಟೇಶ್ ಉದ್ದಗಟ್ಟಿ, ಕುವೆಂಪು ವಿವಿ ಇತಿಹಾಸ ಪ್ರಾಧ್ಯಾಪಕರ ಸಂಘದ ಅಧ್ಯಕ್ಷ ಡಾ.ಕೆ.ಎನ್. ಮಂಜುನಾಥ್, ಸಂಘಟನಾ ಕಾರ್ಯದರ್ಶಿ ಡಾ. ಚಂದ್ರಪ್ಪ, ಡಾ. ಜಯಪ್ರಕಾಶ್ ಆರ್. , ಲವ ಜಿ.ಆರ್. ಇದ್ದರು.