Site icon TUNGATARANGA

ಕೈಲಾಗದವನು ಮೈ ಪರಚಿಕೊಂಡ / ಶಾಸಕ ಕೆ.ಎಸ್ ಈಶ್ವರಪ್ಪ ವಿರುದ್ದ ವೈ.ಹೆಚ್.ನಾಗರಾಜ್ ಟೀಕೆ

ಶಿವಮೊಗ್ಗ: ಕೈಲಾಗದವನು ಮೈ ಪರಚಿಕೊಂಡ ಎನ್ನುವಂತೆ ಶಾಸಕ ಕೆ.ಎಸ್ ಈಶ್ವರಪ್ಪನವರು ಕಾಂಗ್ರೆಸ್ ಸತ್ತು ಹೋಗಿದೆ ಎಂದಿದ್ದಾರೆ. ಕಾಂಗ್ರೆಸ್ ಎಂದಿಗೂ ಸಾಯುವುದಿಲ್ಲ. ಈಶ್ವರಪ್ಪನವರನ್ನೇ ಈ ಬಾರಿ ಜನರು ಮನೆಗೆ ಕಳಿಸುತ್ತಾರೆ ಎಂದು ಕೆಪಿಸಿಸಿ ಸದಸ್ಯ ವೈ.ಹೆಚ್. ನಾಗರಾಜ್ ಟೀಕಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈಶ್ವರಪ್ಪನವರಿಗೆ ಕಾಂಗ್ರೆಸ್ನ ಇತಿಹಾಸ ಗೊತ್ತಿಲ್ಲ. ಇತಿಹಾಸವನ್ನು ತಿರುಚುವ ಇವರಿಗೆ ಹಪಾಹಪಿತನ ಹೆಚ್ಚಾಗಿದೆ. ಕಾಂಗ್ರೆಸ್ ಟೀಕಿಸಿದರೆ ಮುಖಂಡರಿಗೆ ಬೈದರೆ, ಮಾತ್ರ ತಮ್ಮ ಬೇಳೆ ಬೇಯುತ್ತದೆ ಎಂದುಕೊಂಡಿರುವ ಇವರಿಗೆ ಕಾಂಗ್ರೆಸ್ ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲ ಎಂದರು.

ಕಾಂಗ್ರೆಸ್ ಪಕ್ಷಕ್ಕೆ ಶತಮಾನದ ಇತಿಹಾಸವಿದೆ ಸ್ವಾತಂತ್ರ್ಯ ಪೂರ್ವದಲ್ಲಿ ಮತ್ತು ನಂತರದಲ್ಲಿ ರಾಷ್ಟ್ರವನ್ನು ಕಟ್ಟುವ ಕೆಲಸ ಮಾಡಿದೆ. ಕೈಗಾರಿಕಾ ಕ್ರಾಂತಿ, ಹಸಿರು ಕ್ರಾಂತಿ, ವಿದ್ಯುನ್ಮಾನ ಕ್ರಾಂತಿ, ಸಾಮಾಜಿಕ ಕ್ರಾಂತಿಯ ಮೂಲಕ ಭವ್ಯ ಭಾರತವನ್ನೇ ಕಟ್ಟಿದೆ. ಈಶ್ವರಪ್ಪ ಅದನ್ನು ಮರೆತಂತಿದೆ. ಕಾಂಗ್ರೆಸ್ ಬಡವರ ಪಕ್ಷವಾಗಿದೆ. ಅದು ಇಂದಿಗೂ ಎಂದಿಗೂ ಜೀವಂತವಾಗಿರುತ್ತದೆ. ಕಾಂಗ್ರೆಸ್ ಪಕ್ಷಕ್ಕೆ ಎಂದೂ ಸಾವು ಬರುವುದಿಲ್ಲ ಎಂದರು.

ಈಶ್ವರಪ್ಪನವರಿಗೆ ಕಾಂಗ್ರೆಸ್ ಕಂಡರೆ ಭಯವಾಗಿದೆ. ಜೊತೆಗೆ ತಮಗೆ ಟಿಕೆಟ್ ಸಿಗುವುದಿಲ್ಲ ಎಂಬ ಆತಂಕವೂ ಇದೆ. ಸಿಕ್ಕರೂ ಗೆಲ್ಲುವುದು ಕಷ್ಟ ಎಂಬ ಅರಿವೂ ಇದೆ. ಇವುಗಳ ಮಧ್ಯೆಯೇ ಧರ್ಮಗಳ ನಡುವೆ ವಿಷಬೀಜ ಬಿತ್ತುತ್ತಾ ಬೆಳಕಿಗೆ ಬರುತ್ತಿರುವ ಈಶ್ವರಪ್ಪನವರು ಈ ಬಾರಿಯ ಹೋಳಿ ಹಬ್ಬವನ್ನು ಕೂಡ ಹಿಂದು ಸಂಘಟನೆಗಳ ಮೂಲಕ ಭರ್ಜರಿಯಾಗಿ ಹಿಂದೆAದೂ ಇಲ್ಲದಂತೆ ಮಾಡಿಸಿ ಭಾವನಾತ್ಮಕವಾಗಿ ಜನರನ್ನು ಬಿಜೆಪಿಯತ್ತ ಸೆಳೆಯುವ ಹುನ್ನಾರ ಮಾಡಿದ್ದಾರೆ ಎಂದು ಆರೋಪಿಸಿದರು.

ಶಿವಮೊಗ್ಗದಲ್ಲಿ ಆಗಬೇಕಾದ ಕೆಲಸಗಳು ರಾಶಿ ರಾಶಿ ಇವೆ. ಆದರೂ ಕೂಡ ಹೊಸದಾಗಿ ಜನರ ನಡುವೆ ಕಾಣಿಸಿಕೊಳ್ಳಬೇಕೆಂದು ಇಲ್ಲದ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡುತ್ತಿದ್ದಾರೆ ಎಂದರು.

ಈಶ್ವರಪ್ಪನವರಿಗೆ ನಿಜವಾಗಿಯೂ ಪಕ್ಷದ ಮೇಲೆ ಅಭಿಮಾನವಿದ್ದರೆ ಬಿ.ಎಸ್. ಯಡಿಯೂರಪ್ಪನವರು ಪ್ರಕಟಿಸಿದಂತೆ ತಾವು ಚುನಾವಣೆಗೆ ನಿಲ್ಲುವುದಿಲ್ಲ. ಅದರ ಬದಲು ಬೇರೆಯವರಿಗೆ ಅವಕಾಶ ಮಾಡಿಕೊಡಿ ಎಂದು ಹೇಳಲಿ. ಅದನ್ನು ಬಿಟ್ಟು ತಮಗೇ ಟಿಕೆಟ್ ಕೊಡಿ ಎಂದು ಹಠ ಹಿಡಿಯುತ್ತಿರುವ ಅವರ ಧೋರಣೆ ಸರಿಯಲ್ಲ. ಶಿವಮೊಗ್ಗದ ನೆಮ್ಮದಿಗಾಗಿ ಆದರೂ ಅವರು ಮನೆಯಲ್ಲಿ ವಿಶ್ರಾಂತಿ ಪಡೆಯುವುದು ಒಳಿತು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಎಂ.ಪಿ.ದಿವಾಕರ್, ರುದ್ರೇಶ್ ಇದ್ದರು.

Exit mobile version