ಶಿವಮೊಗ್ಗ, ಮಾ.08:
ಪ್ರಣಾಳಿಕಾ ಸಲಹಾ ಅಭಿಯಾನದಲ್ಲಿ ಸಾರ್ವಜನಿಕರು ಸಲಹೆ ನೀಡಬಹುದಾಗಿದೆ. ತಮಗೆ ಅಗತ್ಯವಿರುವ ಅಭಿವೃದ್ಧಿಯ ಬಗ್ಗೆ ಗಮನಕ್ಕೆ ತರಲು ಅವಕಾಶವಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಶಾಸಕ ಕೆ.ಎಸ್.ಈಶ್ವರಪ್ಪ ತಿಳಿಸಿದರು. ಕಾಂಗ್ರೆಸ್‌ನ ಬಂದ್ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಬಂದ್ ಯಾರ ವಿರುದ್ಧ ಯಾತಕ್ಕಾಗಿ ಮಾಡುತ್ತಾರಂತೆ? ಭ್ರಷ್ಟಾಚಾರದ ವಿರುದ್ಧ ಬಂದ್ ಮಾಡಲು ಕಾಂಗ್ರೆಸ್‌ಗೆ ನೈತಿಕತೆಯಿಲ್ಲ. ಏಕೆಂದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಚೇರಿಯಲ್ಲಿ ಕೋಟ್ಯಾಂತರ ರೂ.ಗಳು ಸಿಕ್ಕಿದ್ದು, ಅವರು ಜೈಲ್ ವಾಸ ಅನುಭವಿಸಿ ಈಗ ಬೇಲ್ ಮೇಲೆ ಹೊರಗಿದ್ದಾರೆ ಎಂದರು.
ಸಿದ್ಧರಾಮಯ್ಯನವರ ಅಧಿಕಾರಾವಧಿಯಲ್ಲಿ ಅರ್ಕಾವತಿ ಬಡಾವಣೆಗೆ ಸಂಬಂಧಿಸಿದಂತೆ ೮ ಸಾವಿರ ಕೋಟಿ ಲೂಟಿಯಾಗಿದೆ ಎಂದು ನ್ಯಾಯಾಧೀಶರಿಂದಲೇ ವರದಿಯಿದೆ. ಕಾಂಗ್ರೆಸ್ಸಿಗರು ಭ್ರಷ್ಟಾಚಾರದ ಬಗ್ಗೆ ಮಾತನಾಡಿದರೆ ಜನ ಒಪ್ಪುವುದಿಲ್ಲ. ಬಿಜೆಪಿಯಿಂದ ವಿ.ಸೋಮಣ್ಣ, ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ಕಾಂಗ್ರೆಸ್‌ಗೆ ಹೋಗುತ್ತಾರೆ ಎಂಬ ಡಿಕೆಶಿ ಹೇಳಿಕೆ ಶುದ್ಧ ಸುಳ್ಳು. ನಿನ್ನೆ ಕೂಡ ನಾರಾಯಣಗೌಡರು ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿದ್ದರು.
ಕಾಂಗ್ರೆಸ್ ಸತ್ತು ಹೋಗುತ್ತಿರುವ ಪಕ್ಷ. ಆ ಪಕ್ಷಕ್ಕೆ ಯಾರು ಹೋಗಲ್ಲ. ಈಶಾನ್ಯ ರಾಜ್ಯ ಚುನಾವಣೆಗಳಲ್ಲಿ ೧೮೦ ಸ್ಥಾನಗಳಲ್ಲಿ ಕಾಂಗ್ರೆಸ್‌ಗೆ ದೊರೆತಿದ್ದು ಬರಿ ೭ ಸ್ಥಾನ ಮಾತ್ರ ಎಂದರು. ಮಾಡಾಳ್ ವಿರುಪಾಕ್ಷಪ್ಪನವರ ವಿರುದ್ದ ಆರೋಪಕ್ಕೆ ಉತ್ತರಿಸಿದ ಅವರು, ಪ್ರಾರಂಭಿಕ ಹಂತದಲ್ಲಿ ಏನೂ ಹೇಳಲು ಬರುವುದಿಲ್ಲ ಕಾದು ನೋಡೋಣ. ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ಬಿಜೆಪಿ ನೇತೃತ್ವ, ಸಂಘಟನೆ, ಅಭಿವೃದ್ಧಿ ಮತ್ತು ಭಾರತೀಯ ಸಂಸ್ಕೃತಿ ಈ ೪ ಅಂಶಗಳ ಮೂಲಕ ಚುನಾವಣೆ ಮಾಡುತ್ತದೆ. ಪ್ರತಿ ವಿಧಾನ ಸಭಾ ಕ್ಷೇತ್ರದಿಂದ ೫ ಜನರ ಕೇಂದ್ರ ತಂಡ ಆಗಮಿಸಿ ಸರ್ವೇ ಮಾಡಿ ವರದಿ ನೀಡಿದೆ. ಈ ಆಧಾರದ ಮೇಲೆ ಅಂತಿಮವಾಗಿ ಕೇಂದ್ರದ ನಾಯಕರು ಅಭ್ಯರ್ಥಿ ಘೋಷಣೆ ಮಾಡುತ್ತಾರೆ ಎಂದರು.
ಬಿಜೆಪಿ ರಾಷ್ಟ್ರೀಯ ನಾಯಕತ್ವವನ್ನು ಜನ ಒಪ್ಪಿದ್ದಾರೆ. ಕಾಂಗ್ರೆಸ್‌ನಲ್ಲಿ ಯಾವ ನಾಯಕರೂ ಇಲ್ಲ. ಸಿದ್ಧರಾಮಯ್ಯ ಒಬ್ಬ ಮಿಮಿಕ್ರಿ ಆರ್ಟಿಸ್ಟ್ ಎಂದರು.