: ಬಿಜೆಪಿಯ ಒಬ್ಬ ಶಾಸಕನ ಮನೆಯಲ್ಲೇ ಆರೇಳು ಕೋಟಿ ರೂಪಾಯಿ ಹಣ ಸಿಕ್ಕಿದೆ ಎಂದರೆ, ಉಳಿದ ಬಿಜೆಪಿ ಶಾಸಕರ ಮನೆಯ ಮೇಲೆ ಲೋಕಾಯುಕ್ತ ದಾಳಿ ನಡೆಸಿದರೆ ಇನ್ನೆಷ್ಟು ಹಣ ಸಿಗಬಹುದು ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಪ್ರಶ್ನಿಸಿದ್ದಾರೆ.
ತಾಲ್ಲೂಕಿನ ತಾಳಗುಪ್ಪದ ಪಡಗೋಡು ಗ್ರಾಮದಲ್ಲಿ ಸೋಮವಾರ ಕಾಂಗ್ರೇಸ್ ಗ್ಯಾರೆಂಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರಿಗೆ ಭರವಸೆ ನೀಡುತ್ತಿದೆಯೆ ವಿನಃ ಅನುಷ್ಟಾನಕ್ಕೆ ಯಾವುದೇ ಪ್ರಯತ್ನ ನಡೆಸುತ್ತಿಲ್ಲ ಎಂದು ಹೇಳಿದರು.
ಕಾಂಗ್ರೇಸ್ ಪಕ್ಷ ಗ್ಯಾರೆಂಟಿ ಕಾರ್ಡ್ ಮನೆಮನೆಗೆ ತಲುಪಿಸು ಮೂಲಕ ತನ್ನ ಬದ್ದತೆಯನ್ನು ಪ್ರಚುರಪಡಿಸಿದೆ. ಒಂದೊಮ್ಮೆ ಕಾಂಗ್ರೇಸ್ ಅಧಿಕಾರಕ್ಕೆ ಬಂದ ನಂತರ ಗ್ಯಾರೆಂಟಿ ಕಾರ್ಡ್‌ನಲ್ಲಿ ನೀಡಿದ ಭರವಸೆ ಈಡೇರಿಸದೆ ಹೋದಲ್ಲಿ ನಾವು ಅವರನ್ನು ಪ್ರಶ್ನೆ ಮಾಡಲು ಅವಕಾಶ ಇದೆ. ಈ ಬಾರಿ ನಡೆಯುವ ವಿಧಾನಸಭಾ ಚುನಾವಣೆ ಅತ್ಯಂತ ಮುಖ್ಯವಾಗಿದೆ. ರಾಜಕೀಯ ಕ್ಷೇತ್ರ ಎನ್ನುವುದು ಸಾಮಾಜಿಕ ಸೇವಾ ಕ್ಷೇತ್ರವಾಗಿದೆ. ಅಧಿಕಾರ ಹಿಡಿಯಲು, ಹಣ ಮಾಡಲು ರಾಜಕೀಯವನ್ನು ಬಳಸಿಕೊಳ್ಳುತ್ತಿರುವವರಿಗೆ ತಕ್ಕಪಾಠ ಕಲಿಸಬೇಕು ಎಂದು ಹೇಳಿದರು.
ಮಧು ಬಂಗಾರಪ್ಪ ಕಾಂಗ್ರೇಸ್ ಪಕ್ಷದಲ್ಲಿ ಅನೇಕ ಸ್ಥಾನಮಾನ ಪಡೆದಿದ್ದಾರೆ. ಅವರ ಪಕ್ಷನಿಷ್ಟೆ ಹಿನ್ನೆಲೆಯಲ್ಲಿ ವರಿಷ್ಟರು ಅವರಿಗೆ ಬೇರೆಬೇರೆ ಅವಕಾಶ ಕಲ್ಪಿಸಿದ್ದಾರೆ. ಜಿಲ್ಲೆಯಲ್ಲಿ ಕಾಂಗ್ರೇಸ್‌ನ ಸಮರ್ಥ ನಾಯಕರಾಗಿ ಬೆಳೆಯುವ ಶಕ್ತಿ ಮಧು ಬಂಗಾರಪ್ಪ ಅವರಿಗೆ ಇದ್ದು, ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬಂದರೆ ಮಧು ಬಂಗಾರಪ್ಪ ಸಚಿವರಾಗಿ ಬಂದು ಜಿಲ್ಲೆಯ ಅಭಿವೃದ್ದಿಗೆ ತಮ್ಮದೆ ಕೊಡುಗೆ ನೀಡಲಿದ್ದಾರೆ
ಎಂದು ಹೇಳಿದರು.
ಕಾಂಗ್ರೇಸ್ ಪ್ರಚಾರ ಸಮಿತಿ ಉಪಾಧ್ಯಕ್ಷ ಹಾಗೂ ಹಿಂದುಳಿದ ವರ್ಗ ವಿಭಾಗದ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ಮಾತನಾಡಿ, ಜಿಲ್ಲೆಯಲ್ಲಿ ಕಾಂಗ್ರೇಸ್ ಪಕ್ಷ ಗೆಲ್ಲುವ ಉತ್ತಮ ಅವಕಾಶವಿದೆ. ಬಿಜೆಪಿಯ ಭ್ರಷ್ಟಾಚಾರದಿಂದ ಜನ ಬೇಸತ್ತಿದ್ದಾರೆ. ಚನ್ನಗಿರಿ ಶಾಸಕರ ಪುತ್ರನ ಮನೆಯಲ್ಲಿ ಸಿಕ್ಕಿರುವ ಹಣದಿಂದ ಬಿಜೆಪಿಯವರು ನಮ್ಮ ದುಡ್ಡಿನಲ್ಲಿ ದರ್ಭಾರ್ ಮಾಡುತ್ತಿದ್ದಾರೆ ಎಂದು ಜನ ಅರ್ಥ ಮಾಡಿಕೊಂಡಿದ್ದು, ಕಾಂಗ್ರೇಸ್ ಬೆಂಬಲಿಸಲು ಸಜ್ಜಾಗಿದ್ದಾರೆ. ಕಾಂಗ್ರೇಸ್ ಗ್ಯಾರೆಂಟಿ ಕಾರ್ಡ್ ಮೂಲಕ ಸದ್ಯ ಮೂರು ಯೋಜನೆ ಘೋಷಣೆ ಮಾಡಿದೆ.
ಇನ್ನು ಅನೇಕ ಜನಪರವಾದ ಕಾರ್ಯಕ್ರಮವನ್ನು ಪ್ರಣಾಳಿಕೆಯಲ್ಲಿ ಘೋಷಣೆ ಮಾಡಲಾಗುತ್ತದೆ. ಮನೆಮನೆಗೆ ಗ್ಯಾರೆಂಟಿ ಕಾರ್ಡ್ ಕೊಟ್ಟು ಜನರನ್ನು ಕಾಂಗ್ರೇಸ್‌ನತ್ತ ಸೆಳೆಯುವ ಕೆಲಸ ಮಾಡಲು ಕರೆ ನೀಡಿದ ಅವರು, ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ನಾನು ಗೆಲ್ಲುವ ಸೂಕ್ತ ವಾತಾವರಣ ಇದೆ ಎಂದು ಹೇಳಿದರು.
ವೇದಿಕೆಯಲ್ಲಿ ರಮೇಶ್ ಎನ್., ತಬಲಿ ಬಂಗಾರಪ್ಪ, ಮಂಡಗಳಲೆ ಹುಚ್ಚಪ್ಪ, ಲೋಕೇಶ ಗಾಳಿಪುರ, ಅಣ್ಣಪ್ಪ ಮರಗಿ, ಶಿವಮೂರ್ತಿ, ಕೆ.ವಿ.ಗೌಡ, ಗಣಪತಿ, ಸುಧಾಕರ ಕುಗ್ವೆ, ಮಹಾಬಲೇಶ್ವರ ಇನ್ನಿತರರು ಹಾಜರಿದ್ದರು.