Site icon TUNGATARANGA

ಬಿ.ಜೆ.ಪಿ.ಶಾಸಕ ಮಾಡಳ್ ವಿರುದ್ದ ಕಾಂಗ್ರೇಸ್ ಅಕ್ರೋಶ/ಸಿಎಂ ಬೊಮ್ಮಯಿ ರಾಜೀನಾಮೆಗೆ ಒತ್ತಾಯ/ ಮಾ.9 ಸಾಗರ ಬಂದ್

ಸಾಗರ : ಬಿಜೆಪಿ ಶಾಸಕ ವಿರೂಪಾಕ್ಷಪ್ಪ ಮಾಡಾಳ್ ಮತ್ತು ಪುತ್ರ ಪ್ರಶಾಂತ್ ಮಾಡಾಳ್ ನಡೆಸಿರುವ ಅವ್ಯವಹಾರದ ನೈತಿಕಹೊಣೆ ಹೊತ್ತು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ರಾಜಿನಾಮೆ ನೀಡುವಂತೆ ಒತ್ತಾಯಿಸಿ ಮಾ. ೯ರಂದು ಬೆಳಿಗ್ಗೆ ೯ ರಿಂದ ೧೧ರವರೆಗೆ ಸಾಗರ ಬಂದ್‌ಗೆ ಕರೆ ನೀಡಲಾಗಿದ್ದು, ಸಾರ್ವಜನಿಕರು ಸಹಕರಿಸುವಂತೆ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬಿ.ಆರ್.ಜಯಂತ್ ಮನವಿ ಮಾಡಿದ್ದಾರೆ.
ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಇದಕ್ಕೆ ಸಣ್ಣ ಉದಾಹರಣೆ ಎನ್ನುವಂತೆ ಬಿಜೆಪಿ ಶಾಸಕರ ಪುತ್ರ ಕೋಟಿಕೋಟಿ ರೂಪಾಯಿ ಲಂಚ ಪಡೆಯುತ್ತಿರುವಾಗಲೇ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಇದರ ನೇರ ಹೊಣೆಯನ್ನು ಮುಖ್ಯಮಂತ್ರಿಗಳು ಹೊತ್ತುಕೊಳ್ಳಬೇಕು ಎಂದು ಹೇಳಿದರು.


ಪ್ರಧಾನಿ ನರೇಂದ್ರ ಮೋದಿಯವರು ತಾನು ತಿನ್ನುವುದಿಲ್ಲ, ತಿನ್ನುವವರಿಗೂ ಬಿಡುವುದಿಲ್ಲ ಎನ್ನುವ ಮಾತು ಆಡಿದ್ದರು. ಗೃಹಮಂತ್ರಿ ಅಮಿತ್ ಷಾ ಭ್ರಷ್ಟಾಚಾರಮುಕ್ತ ಆಡಳಿತ ನೀಡುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ ತಮ್ಮದೇ ಪಕ್ಷದ ಶಾಸಕರ ಪುತ್ರ ಕೋಟ್ಯಾಂತರ ರೂಪಾಯಿ ಲಂಚ ಪಡೆಯುವಾಗ ರೆಡ್‌ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಇನ್ನು ಎಷ್ಟು ಜನ ಶಾಸಕರು, ಸಚಿವರು ಇಂತಹ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದರೋ ಗೊತ್ತಿಲ್ಲ. ಈ ಹಿನ್ನೆಲೆಯಲ್ಲಿ ಸಾಗರ ಬಂದ್‌ಗೆ ಕರೆ ನೀಡಿದ್ದು, ೧೧ ಗಂಟೆಗೆ ಉಪವಿಭಾಗಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುತ್ತದೆ ಎಂದರು.


ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ. ರಾಜನಂದಿನಿ ಕಾಗೋಡು ಮಾತನಾಡಿ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ. ರಾಜ್ಯದ ಜನರಿಗೆ ಬಿಜೆಪಿ ಸರ್ಕಾರದ ಜನವಿರೋಧಿನೀತಿ ತಿಳಿಸುವ ಜೊತೆಗೆ ಕಾಂಗ್ರೇಸ್ ಗ್ಯಾರಂಟಿ ಕಾರ್ಡ್ ವಿತರಣೆ ಮಾಡಲಾಗುತ್ತಿದೆ. ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ ಅವರು ಸಾಗರ ಕ್ಷೇತ್ರವ್ಯಾಪ್ತಿಯಲ್ಲಿ ಗ್ಯಾರಂಟಿ ಕಾರ್ಡ್ ಬಿಡುಗಡೆ ಮಾಡಿದ್ದಾರೆ. ಗ್ಯಾರಂಟಿ ಕಾರ್ಡ್ ಪ್ರತಿಮನೆಗೆ ತಲುಪಿಸಲಾಗುತ್ತಿದೆ. ಕುಟುಂಬದ ಮಹಿಳೆಗೆ ಗೃಹಲಕ್ಷ್ಮೀ ಯೋಜನೆಯಡಿ ಪ್ರತಿತಿಂಗಳು ೨ಸಾವಿರ ರೂ., ೨೦೦ ಯೂನಿಟ್ ಉಚಿತ ವಿದ್ಯುತ್, ಪ್ರತಿಯೊಬ್ಬರಿಗೂ ೧೦ಕೆ.ಜಿ. ಉಚಿತ ಅಕ್ಕಿ ನೀಡಲಾಗುತ್ತದೆ. ಈ ಭರವಸೆಯನ್ನು ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬಂದ ತಕ್ಷಣದಿಂದಲೇ ಜಾರಿಗೆ ಬರುತ್ತದೆ ಎಂದು ತಿಳಿಸಿದರು.


ಗೋಷ್ಟಿಯಲ್ಲಿ ಐ.ಎನ್.ಸುರೇಶಬಾಬು, ಮಧುಮಾಲತಿ, ಮಹಾಬಲ ಕೌತಿ, ವೆಂಕಟೇಶ್ ಮೆಳವರಿಗೆ, ಗಣಪತಿ ಮಂಡಗಳಲೆ, ದಿನೇಶ್ ಡಿ., ಸಂಜು, ಗಲ್ಲಿ ವೆಂಕಟೇಶ್ ಹಾಜರಿದ್ದರು.

Exit mobile version