Site icon TUNGATARANGA

ಯುವತಿಯರು ಕ್ರಿಕೆಟ್ ಆಟದಲ್ಲಿ ಹೆಚ್ಚು ತೊಡಗಿಸಿಕೊಳ್ಳಲಿ/ ಅಧೀತಿ ರಾಜೇಶ್ ಅಭಿಪ್ರಾಯ

ಶಿವಮೊಗ್ಗ : ಮಹಿಳಾ ಕ್ರಿಕೆಟ್ ಆಟಕ್ಕೆ ದೇಶದಲ್ಲಿ ಹೆಚ್ಚು ಪ್ರೋತ್ಸಾಹ ದೊರಕುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದ್ದು, ಯುವತಿಯರು ಕ್ರಿಕೆಟ್ ಆಟಕ್ಕೆ ಹೆಚ್ಚು ತೊಡಗಿಸಿಕೊಳ್ಳಬೇಕಿದೆ ಎಂದು ಕರ್ನಾಟಕ ರಾಜ್ಯ ಮಹಿಳಾ ಕ್ರಿಕೆಟ್ ಆಟಗಾರ್ತಿ ಅಧೀತಿ ರಾಜೇಶ್ ಅಭಿಪ್ರಾಯಪಟ್ಟರು.

ನಗರದ ರಾಷ್ಟ್ರೀಯ ಔಷಧ ಮಹಾವಿದ್ಯಾಲಯದ ವತಿಯಿಂದ ಶನಿವಾರ ಏರ್ಪಡಿಸಿದ್ದ ‘ಫಾರ್ಮಾ ಕಪ್ – 2023’ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.

ಬಿಸಿಸಿಐ ಸಂಸ್ಥೆ ಮಹಿಳಾ ಕ್ರಿಕೆಟ್ ತಂಡಗಳಿಗೆ ಹೆಚ್ಚು ಬಲ ನೀಡುತ್ತಿದೆ. ಇದಕ್ಕೆ ಪೂರಕವಾಗಿ ಮಹಿಳಾ ಐಪಿಎಲ್ ಪಂದ್ಯಾವಳಿಗಳನ್ನು ಆಯೋಜಿಸುತ್ತಿರುವುದು ಆಶಾದಾಯಕ ಬೆಳವಣಿಗೆ. ಕ್ರಿಕೆಟ್ ಕೇವಲ ಪುರುಷರ ಆಟ ಎಂಬ ಭ್ರಮೆಯನ್ನು ಹೋಗಲಾಡಿಸಿ, ಮಹಿಳೆಯರ ಶಕ್ತಿಯನ್ನು ನಿರೂಪಿಸುವಲ್ಲಿ ಮಹಿಳಾ ಆಟಗಾರರು ಸಫಲರಾಗಿದ್ದಾರೆ.

ಮಹಿಳಾ ಆಟಗಾರರು ಪಡುವ ಪರಿಶ್ರಮ ಪುರುಷರನ್ನು ಮೀರಿಸುವಂತದ್ದು. ಮಹಿಳಾ ಕ್ರಿಕೆಟ್ ಮೊದಲಿನಿಂದಲೂ ಸಾರ್ವಜನಿಕ ಅಂಗೀಕಾರವನ್ನು ಪಡೆಯಲು ಇನ್ನಿಲ್ಲದ ಕಸರತ್ತು ಮಾಡಿದೆ. ಆದರೆ ಇತ್ತೀಚೆಗೆ ತಮ್ಮ ಅದ್ಭುತ ಪ್ರದರ್ಶನದಿಂದ ಕ್ರಿಕೆಟ್‌ ಪ್ರಿಯರು ತಲೆತೂಗುವಂತೆ ಹಾಗೂ ತಾವು ಪ್ರತಿನಿಧಿಸುವ ರಾಷ್ಟ್ರಗಳು ಹೆಮ್ಮೆಪಡುವಂತೆ ಮಾಡಿದ್ದಾರೆ.

ಕ್ರೀಡೆ ಎಂಬುದು ಮಾನಸಿಕ ಮತ್ತು ದೈಹಿಕ ಸಧೃಡತೆ ನೀಡುವ ವ್ಯಾಯಾಮ. ಕ್ರೀಡಾ ಮನೋಭಾವವೆಂಬುದು ಪ್ರತಿಯೊಬ್ಬರ ಮನಸ್ಸಿನಲ್ಲಿರಬೇಕಾದ ಶಕ್ತಿ. ಅಂತಹ ಶಕ್ತಿಯ ಪ್ರತಿಫಲವೇ ಯಶಸ್ಸಿನ ಹಾದಿಯಲ್ಲಿ ಮುನ್ನಡೆಸುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಔಷಧ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಜಿ.ನಾರಾಯಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಕ್ರೀಡಾ ವಿಭಾಗದ ಸಂಯೋಜಕರಾದ ಸಿದ್ದಲಿಂಗಸ್ವಾಮಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Exit mobile version