Site icon TUNGATARANGA

ಈಶ್ವರಪ್ಪರ ಖಡಕ್ ಧ್ವನಿಗೆ ಸಿಮ್ಸ್ ಹೊರಗುತ್ತಿಗೆ ನೌಕರರು ದರಣಿಯಿಂದ ವಾಪಾಸ್!


ಶಿವಮೊಗ್ಗ, ಸೆ.೩೦:
ಸಿಮ್ಸ್ ಆವರಣದಲ್ಲಿ ಕಳೆದ ೯ ದಿನಗಳಿಂದ ಹೊರಗುತ್ತಿಗೆ ನೌಕರರು ನಡೆಸುತ್ತಿರುವ ಧರಣಿ ಸ್ಥಳಕ್ಕೆ ಇಂದು ಸಚಿವ ಕೆ.ಎಸ್.ಈಶ್ವರಪ್ಪ ಭೇಟಿ ನೀಡಿ ಧರಣಿ ನಿರತ ನೌಕರರ ಮನವೊಲಿಸಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಿದ ಮೇರೆಗೆ ಧರಣಿನಿರತ ಹೊರಗುತ್ತಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗುವುದಾಗಿ ತಿಳಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ಸಚಿವರು ಕಾರ್ಮಿಕ ಮುಖಂಡರೊಂದಿಗೆ ಮಾತನಾಡಿ, ಕರೋನಾ ಸಂಕಷ್ಟದ ಸಂದರ್ಭದಲ್ಲಿ ತಾವುಗಳು ಈ ರೀತಿ ಧರಣಿ ಮಾಡಿ ಕರ್ತವ್ಯಕ್ಕೆ ಗೈರು ಹಾಜರಾಗಿರುವುದು ಕಾನೂನುಬಾಹಿರ. ರಾಜ್ಯದಲ್ಲಿ ಎಲ್ಲ ಹೊರಗುತ್ತಿಗೆ ನೌಕರರಿಗೆ ಅನ್ವಯಿಸುವ ಕಾನೂನೇ ನಿಮಗೂ ಕೂಡ ಅನ್ವಯಿಸುವುದರಿಂದ ನಿಮಗೆ ಮಾತ್ರ ಒಳಗುತ್ತಿಗೆ ಮಾಡಲು ಅಥವಾ ವೇತನ ಹೆಚ್ಚಿಸಲು ಸಾಧ್ಯವಿಲ್ಲ. ಇದು ಲಕ್ಷಾಂತರ ಹೊರಗುತ್ತಿಗೆ ಕಾರ್ಮಿಕರ ಸಮಸ್ಯೆ ಎಂದರು.
ಸರ್ಕಾರಕ್ಕೆ ನಿಮ್ಮ ಸಂಕಷ್ಟದ ಅರಿವು ಇದೆ. ಈ ಬಗ್ಗೆ ನಿಮ್ಮ ಪರವಾಗಿಯೇ ಸರ್ಕಾರ ಚಿಂತನೆ ಮಾಡಿದ್ದು, ಹಿರಿಯ ಐಎಎಸ್ ಅಧಿಕಾರಿ ಶ್ರೀನಿವಾಸ್ ನೇತೃತ್ವದಲ್ಲಿ ಶಾಸಕ ಆಯನೂರು ಮಂಜುನಾಥ್ ಒಳಗೊಂಡ ಸಮಿತಿ ರಚಿಸಿದ್ದು, ಅವರ ವರದಿಗಾಗಿ ಕಾಯುತ್ತಿದೆ. ಅಲ್ಲಿಯವರೆಗೆ ನೀವು ಅತಿರೇಕದ ವರ್ತನೆ ನಿಲ್ಲಿಸಿ ಕರ್ತವ್ಯಕ್ಕೆ ಹಾಜರಾಗಿ. ಇಲ್ಲವಾದಲ್ಲಿ ಟೆಂಡರ್‌ದಾರರ ಮೇಲೆ ಕ್ರಮ ಕೈಗೊಳ್ಳಲಾಗುವುದು. ನೀವು ಇರುವ ಕೆಲಸ ಕಳೆದುಕೊಂಡು ಬೀದಿಪಾಲಾಗುತ್ತೀರಿ. ಈಗಾಗಲೇ ಸಿಮ್ಸ್‌ನಲ್ಲಿ ಹೊರಗುತ್ತಿಗೆಯಲ್ಲಿ ಕೆಲಸ ಮಾಡುವ ೧೩೦ ಸೆಕ್ಯೂರಿಟಿಯವರು ಟೆಂಡರ್ ಬದಲಾಗಿದ್ದರಿಂದ ಕೆಲಸ ಕಳೆದುಕೊಂಡಿದ್ದಾರೆ. ಅವರಿಗೂ ಕೂಡ ಮಾನವೀಯ ದೃಷ್ಟಿಯಿಂದ ಅನ್ಯಾಯವಾಗಬಾರದು ಎನ್ನುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಟೆಂಡರ್‌ದಾರರ ಜೊತೆ ಚರ್ಚಿಸಿ ಮರುನೇಮಕಾತಿ ಮಾಡುವಂತೆ ಸೂಚಿಸಿದ್ದೇನೆ. ನಿಮ್ಮ ಬಡತನ ನನಗೆ ಅರ್ಥವಾಗುತ್ತದೆ. ಕೋವಿಡ್ ಸಂದರ್ಭದಲ್ಲಿ ಯಾರದೋ ಪ್ರಚೋದನೆಗೆ ಒಳಗಾಗಿ ಈ ರೀತಿ ಧರಣಿ ಕುಳಿತಿರುವುದು ತಪ್ಪು. ಇನ್ನು ಮುಂದೆ ಈಗಾಗದಂತೆ ನೋಡಿಕೊಳ್ಳಿ ಎಂದರು.
ಒಟ್ಟು ೯೨ ನರ್ಸ್‌ಗಳು, ೧೮೩ ಜನ ಸ್ವಚ್ಚತಾ ಕಾರ್ಮಿಕರು ಕೆಲಸಕ್ಕೆ ಗೈರು ಆಗಿದ್ದು, ಧರಣಿಯಲ್ಲಿ ಪಾಲ್ಗೊಂಡ ೭೮ ಲ್ಯಾಬ್ ಟೆಕ್ನಿಷಿಯನ್‌ಗಳು ಮೊನ್ನೆಯಿಂದಲೇ ಕೆಲಸಕ್ಕೆ ಹಾಜರಾಗಿದ್ದಾರೆ. ಇವರು ಕೂಡ ಇಂದಿನಿಂದ ಹಾಜರಾಗುವುದಾಗಿ ತಿಳಿಸಿ ಧರಣಿ ಹಿಂಪಡೆದರು. ಈ ಸಂದರ್ಭದಲ್ಲಿ ಮೂರು ದಿನಗಳ ಹಿಂದೆ ಬಂಧನಕ್ಕೊಳಗಾಗಿದ್ದ ವೆಂಕಟೇಶ್ ಎನ್ನುವವರ ಮತ್ತು ಸ್ಟಾಪ್ ನರ್ಸ್ ತನ್ನ ಗಂಡನನ್ನು ಜೈಲಿನಿಂದ ಬಿಡಿಸುವಂತೆ ಈಶ್ವರಪ್ಪನವರನ್ನು ಅಂಗಲಾಚಿ ಬೇಡಿಕೊಂಡರು. ಅವರಿಗೂ ಕೂಡ ಸೂಕ್ತ ಆಶ್ವಾಸನೆ ನೀಡಿದ ಈಶ್ವರಪ್ಪನವರು ಧರಣಿ ನಿರತರಿಗೆ ಬುದ್ದಿ ಮಾತು ಹೇಳಿ ತೆರಳಿದರು.
ಈ ಸಂದರ್ಭದಲ್ಲಿ ಸಿಮ್ಸ್‌ನ ನಿರ್ದೇಶಕ ಸಿದ್ದಪ್ಪ, ಡಾ.ರಘುನಂದನ್ ಮೊದಲಾದವರಿದ್ದರು.

Exit mobile version