Site icon TUNGATARANGA

ಜೀವನದ ಪ್ರತಿ ಹಂತದಲ್ಲಿ ವಿಜ್ಞಾನವಿದೆ: ರಾಷ್ಟ್ರೀಯ ಶಿಕ್ಷಣ ಸಮಿತಿ ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್ ಅಭಿಪ್ರಾಯ

ಶಿವಮೊಗ್ಗ : ವಿಜ್ಞಾನದ ಆಧಾರದ ಮೇಲೆಯೇ ಜೀವನದ ಪ್ರತಿಯೊಂದು ಆಗುಹೋಗುಗಳು ಅವಲಂಬಿತವಾಗಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್ ಅಭಿಪ್ರಾಯಪಟ್ಟರು

ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮಂಗಳವಾರ ಮೂಲ ವಿಜ್ಞಾನ ವಿಭಾಗಗಳ ವತಿಯಿಂದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಪ್ರಯುಕ್ತ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಎರಡು ದಿನಗಳ ಅನ್ವಯಿಕ ವಿಜ್ಞಾನಗಳ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಜೀವನದ ಪ್ರತಿಯೊಂದು ಹಂತದಲ್ಲಿ ವಿಜ್ಞಾನವಿದೆ. ಆಧುನಿಕ ಜಗತ್ತಿನಲ್ಲಿ ವಿಜ್ಞಾನ ಅನ್ವೇಷಣೆಗಳಿಲ್ಲದೆ ಜೀವನವಿಲ್ಲವೆಂಬಂತಾಗಿದೆ. ಜಾಗತಿಕ ಯೋಗ ಕ್ಷೇಮಕ್ಕಾಗಿ ಜಾಗತಿಕ ವಿಜ್ಞಾನ ಎಂಬ ವಾಕ್ಯದೊಂದಿಗೆ ಇಡೀ ದೇಶ ವಿಜ್ಞಾನ ದಿನವನ್ನು ಆಚರಿಸುತ್ತಿದೆ. ನೂತನ ಎನ್ಇಪಿ ಮೂಲಕ ಅನ್ವಯಿಕ ವಿಜ್ಞಾನಗಳ ಕಲಿಕೆಯಲ್ಲಿ ಹೊಸತನದ ಬದಲಾವಣೆ ತರಲು ಹೊರಟಿದ್ದಾರೆ. ಇದರ ಸಂಪೂರ್ಣ ಲಾಭವನ್ನು ವಿದ್ಯಾರ್ಥಿಗಳು ಪಡೆದು ಭವಿಷ್ಯ ಭಾರತದ ವಿಜ್ಞಾನಿಗಳು ನೀವಾಗಿ ಎಂದು ಹೇಳಿದರು.

ಪ್ರಾಂಶುಪಾಲರಾದ ಡಾ.ಕೆ.ನಾಗೇಂದ್ರ ಪ್ರಸಾದ್ ಮಾತನಾಡಿ,

ಭಾರತೀಯ ಭೌತಶಾಸ್ತ್ರಜ್ಞ ಸರ್ ಸಿ.ವಿ ರಾಮನ್ ಅವರ ರಾಮನ್ ಪರಿಣಾಮದ ಆವಿಷ್ಕಾರವನ್ನು ಗುರುತಿಸಲು ಪ್ರತಿ ವರ್ಷ ಭಾರತದಲ್ಲಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತದೆ. ಅಂದಿನ ದಿನಮಾನದಲ್ಲಿಯೇ ಸುಮಾರು ಏಳು ನೂರು ಸಂಶೋಧನಾ ಲೇಖನಗಳನ್ನು ಪ್ರಕಟಿಸಿ, ಅವಿಸ್ಮರಣೀಯ ಕೊಡುಗೆ ನೀಡಿದವರು ಸಿ.ವಿ.ರಾಮನ್. 

ವಿದ್ಯಾರ್ಥಿ ಕೇಂದ್ರಿತ ಕಾರ್ಯಾಗಾರಗಳು ವಿದ್ಯಾರ್ಥಿಗಳಲ್ಲಿನ ವೈಜ್ಞಾನಿಕ ‌ಚಿಂತನೆಗಳ ವೃದ್ಧಿಗೆ ಹಾಗೂ ಕೌಶಲ್ಯಾಧಾರಿತ ಕಲಿಕೆಯ ದೂರದೃಷ್ಟಿ ಹೊಂದಿರುತ್ತದೆ. ಯಾರು ಹೆಚ್ಚು ಜ್ಞಾನವಂತನಾಗುತ್ತಾನೆ, ಆತ ಮತ್ತಷ್ಟು ವಿನಯವಂತನಾಗುತ್ತಾನೆ. ಅಂತಹ ವ್ಯಕ್ತಿತ್ವ ಬದಲಾವಣೆಯ ಶಕ್ತಿ ವಿದ್ಯೆಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ  ರೇವಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ‌.ಸುಶಾಂತ್, ಜೆಎನ್ಎನ್ ಎಂಜಿನಿಯರಿಂಗ್ ಕಾಲೇಜಿನ ಶೈಕ್ಷಣಿಕ ಡೀನ್ ಡಾ.ಪಿ.ಮಂಜುನಾಥ, ಭೌತವಿಜ್ಞಾನ ವಿಭಾಗ ಮುಖ್ಯಸ್ಥರಾದ ಡಾ.ಆನಂದರಾಮ್, ರಸಾಯನವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ.ಮೋಯಿನುದ್ದಿನ್ ಖಾನ್, ಗಣಿತ ವಿಭಾಗದ ಮುಖ್ಯಸ್ಥರಾದ ಡಾ.ನಿರ್ಮಲಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಸಹ ಪ್ರಾಧ್ಯಾಪಕರಾದ ಡಾ.ಸಚಿನ್ ಸ್ವಾಗತಿಸಿ, ಡಾ.ರಾಜ್ ಪ್ರಕಾಶ್ ವಂದಿಸಿ, ಬಿಂದು ಪವನ್ ನಿರೂಪಿಸಿದರು.

Exit mobile version