ಪತ್ರಿಕಾ ರಂಗದ ನನ್ನ ಮೊದಲ ಗುರು ಜನವಾರ್ತೆಪತ್ರಿಕೆಯ ಸಂಪಾದಕರು ಆದ ಶ್ರೀ ಜಿ.ಎಸ್. ನಾಗರಾಜ್ ಅವರು ಇಂದು ಬೆಳಿಗ್ಗೆ ಬೆಂಗಳೂರಿನಲ್ಲಿ ನಿಧನ ಹೊಂದಿದ್ದಾರೆ. ಇತ್ತೀಚೆಗೆ ಅಪಘಾತದಿಂದ ಚೇತರಿಕೆ ಕಾಣುತ್ತಿದ್ದ, ಅವರು ಇಂದು ಮುಂಜಾನೆ ಮೂರು ಗಂಟೆಯ ಹೊತ್ತಿಗೆ ಹೃದಯಾಘಾತದಿಂದ ಸಾವು ಕಂಡಿದ್ದಾರೆ.
1996 97 ಸಾಲಿನಲ್ಲಿ ನಾನು ಪತ್ರಿಕಾ ರಂಗಕ್ಕೆ ಬರಲಿಚ್ಛಿಸಿ ಸೇರಿದ್ದ ಮೊದಲ ಪತ್ರಿಕೆಯೇ “ಜನ ವಾರ್ತೆ”
ಅಲ್ಲಿಂದ ಸುಮಾರು ಐದೂವರೆ ವರ್ಷ ಅಂದರೆ 2002ರ ವರೆಗೆ ಆ ಪತ್ರಿಕೆಯ ವರದಿಗಾರನಾಗಿ, ಸಾಕಷ್ಟು ಪತ್ರಿಕಾ ರಂಗದ ಚಟುವಟಿಕೆಗಳನ್ನು ಕಲಿತಿದ್ದೇನೆ. ಅದಕ್ಕೆ ಪೂರಕ ಹಾಗೂ ಪ್ರೇರಕರಾಗಿ ಹಾಗೂ ಅಂದು ಜಾಸ್ತಿಯೇ ಎನಿಸುವ ವೇತನ ನೀಡಿ ಹಳ್ಳಿಯಿಂದ ಬಂದಿದ್ದ ನನ್ನನ್ನು ಮುಕ್ತವಾಗಿ ಬೆಳೆಯಲು ಬರವಣಿಗೆಯಲ್ಲಿ ಗುರುತಿಸಿಕೊಳ್ಳಲು ಕಾರಣರಾದವರೇ ಈ ನಾಗರಾಜ್ ಅವರು ಎಂದರೆ ತಪ್ಪಾಗಲಿಕ್ಕಿಲ್ಲ.
ಇಂದಿಗೆ ಸುಮಾರು 25 ವರ್ಷಗಳಿಂದ ಮಾಡಿದ ಪತ್ರಿಕಾ ಅನುಭವಕ್ಕೆ ಮೂಲ ಪ್ರೇರಣೆ ಹಾಗೂ ಕಾರಣಕರ್ತರು ಅವರೇ ಎಂದರೆ ಅದು ಅತಿಶಯೋಕ್ತಿ ಆಗಲಾರದು.
ಅಂದು ಶಿವಮೊಗ್ಗ, ಹಾಸನ, ದಾವಣಗೆರೆ, ಚಿಕ್ಕಮಗಳೂರಿನ ಸಂಚಿಕೆಗಳನ್ನು ಪ್ರಕಟಿಸುತ್ತಿದ್ದ ಅಂದಿನ ಪತ್ರಿಕೆ ಜವಾಬ್ದಾರಿಗಳಲ್ಲಿ ನನ್ನನ್ನು ಸಹ ಗುರುತಿಸಿಕೊಳ್ಳುವಂತೆ ಶಿವಮೊಗ್ಗ ಜಗತ್ತಿನಲ್ಲಿ ಪರಿಚಿತರಾಗುವಂತೆ ಮಾಡಿದ ಕೀರ್ತಿಗೆ ಹಿರಿಮೆಗೆ ಸಾಕ್ಷಿ ಅಂದು ನನ್ನೊಂದಿಗೆ ಹಿರಿಯರಾಗಿದ್ದ ಹೊನ್ನಾಳಿ ಚಂದ್ರಶೇಖರ್ ಛಾಯಾಗ್ರಹಕರಾಗಿದ್ದ ವಿಜಯಕುಮಾರ್, ತಾರಾನಾಥ್ ಅವರ ಸಾತ್ ನನಗೆ ಸಿಕ್ಕಿದ್ದು ಎಂದರೆ ತಪ್ಪಾಗಲಿಕ್ಕಿಲ್ಲ.
ಪತ್ರಿಕೆ ಎಷ್ಟು ಸುಲಭವಾಗಿ, ಎಷ್ಟು ಬೇಗ, ಎಷ್ಟು ಒಳ್ಳೆಯ ಸುದ್ದಿ ಹಿಡಿದು, ಎಷ್ಟು ಜನರನ್ನು ತಲುಪಬೇಕು ಎಂಬುದನ್ನು ಅತ್ಯಂತ ವ್ಯವಸ್ಥಿತವಾಗಿ ರೂಪಿಸಿದ ಅಂದಿನ ಆ ಪತ್ರಿಕೆಯ ದಿನಮಾನಗಳಲ್ಲಿ ಸುಮಾರು 50ರಿಂದ 60 ಶಾಲೆ ಕಲಿಯುವ ಮಕ್ಕಳು ನಿತ್ಯ ಸಂಜೆ ಬಂದು ಪತ್ರಿಕೆಯನ್ನು ಅವರವರ ಬೀದಿಗೆ ಹಾಕಿಕೊಂಡು ಹೋಗುತ್ತಿದ್ದ ಸನ್ನಿವೇಶ ಈಗಲೂ ನನ್ನ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ಪತ್ರಿಕೆ ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯಲ್ಲಿ ಸಂಜೆ 4:30 ಒಳಗೆ ಬೆಣ್ಣೆ ದೋಸೆಯಂತೆ ಖಾಲಿಯಾಗಿ ಬಿಡುತ್ತಿತ್ತು. ಅದು ನಿಜಕ್ಕೂ ಅಂದಿನ ದಿನಮಾನದ ಜನ ವಾರ್ತೆಯ ವಿಶೇಷ.
ವಿಶೇಷವೆಂದರೆ ನನ್ನ ವಿವಾಹದಂದು ಪತ್ರಿಕೆಯಲ್ಲಿರುವ ಎಲ್ಲ ಮಿತ್ರರನ್ನು ಅದರಲ್ಲೂ ಪತ್ರಿಕೆಗೆ ಬುಡವಾಗಿದ್ದ ಎಸ್.ಪಿ. ಶೇಷಾದ್ರಿ ಸರ್ ಅವರನ್ನು ಸಹ ಸೇರಿದಂತೆ ನಾಗರಾಜ್ ಸರ್ ಬಂದು ನನಗೆ ಶುಭ ಹಾರೈಸಿದ್ದ ಕ್ಷಣಗಳು ಈಗಲೂ ನನ್ನೂರಿನ ನನ್ನ ಮನದ ಅಂಗಳದಲ್ಲಿ ಅಚ್ಚಳಿಯದೆ ಉಳಿದಿದೆ.
ಜಿಎಸ್ ಎನ್ ಅವರ ಕಾರಣಗಳು ಏನೇನೋ ಇರಬಹುದು. ನನ್ನ ಪಾಲಿಗೆ ಅವರೊಬ್ಬರು ಗ್ರಾಮೀಣ ಭಾಗದಿಂದ ಬಂದ ನನ್ನನ್ನು ತಿದ್ದಿ ತೀಡಲು ಸುಂದರವಾದ ವೇದಿಕೆಯನ್ನು ಕಟ್ಟಿ ಕೊಟ್ಟಂತಹ ಗುರುಗಳು. ಹೊನ್ನಾಳಿ ಚಂದ್ರಶೇಖರ್ ಸಹ ಇದೇ ಪತ್ರಿಕೆಯಲ್ಲಿ ನನಗೆ ಸಿಕ್ಕ ಮತ್ತೊಬ್ಬರು ಗುರುಗಳು ಎಂದು ಈಗಲೂ ಹೇಳುತ್ತೇನೆ.
ಕಾರಣವಿಷ್ಟೇ ಮೊದಲು ದಿನವೇ ಕಂದಾಯ ಸಚಿವರಾಗಿದ್ದ ಜೆ ಎಸ್ ಪಟೇಲ್ ಅವರು ಶಿಕಾರಿಪುರ ಹಾಗೂ ಶಿರಾಳಕೊಪ್ಪದ ಕಾರ್ಯಕ್ರಮಕ್ಕೆ ಬಂದಿದ್ದರು. ಇಲ್ಲಿಂದ ಅಲ್ಲಿಯವರೆಗೆ ವಿಜಯ್ ಕುಮಾರ್ ಚಾಲನೆಯ ಬೈಕ್ ನಲ್ಲಿ ಹೋಗಿ ಸುದ್ದಿ ಬರೆದುಕೊಂಡು ಬಂದದ್ದನ್ನು ಅಂದು ಅನುಭವಿಸಿದ್ದ ಖುಷಿಯನ್ನು ಮರೆಯಲಿಕ್ಕೆ ಸಾಧ್ಯವೇ ಇಲ್ಲ.
ಆ ಪತ್ರಿಕೆಯಲ್ಲಿ ನನಗೆ ನನ್ನದೇ ಆದ ಒಂದಿಷ್ಟು ಸ್ನೇಹದ ಬಳಗವನ್ನು ರೂಪಿಸಲು ಕಾರಣವಾಯಿತು. ಅಂತೇ ಇಂದು ಮಧ್ಯಾಹ್ನ 12:30 ಹೊತ್ತಿಗೆ ಅವರ ಪಾರ್ಥಿವ ಶರೀರ ಶಿವಮೊಗ್ಗದ ರವೀಂದ್ರ ನಗರದಲ್ಲಿರುವ ಅವರ ನಿವಾಸಕ್ಕೆ ಬರಲಿದೆ. ಗುರುಗಳ ನಿಧನ ಅತೀವ ದುಂಖ ತರಿಸಿದೆ. ಅವರ ಆತ್ಮಕ್ಕೆ ಶಾಂತಿ ಯನ್ನು ಭಗವಂತ ನೀಡಲೆಂದು ಕೋರುತ್ತೇನೆ. ಅವರ ಕುಟುಂಬಕ್ಕೆ ಅವರ ಅಗಲಿಕೆ ನೋವನ್ನು ಸಹಿಸುವ ಶಕ್ತಿಯನ್ನು ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.
ಗಜೇಂದ್ರ ಸ್ವಾಮಿ,
ಸಂಪಾದಕರು,
ತುಂಗಾತಂಗ ದಿನಪತ್ರಿಕೆ