Site icon TUNGATARANGA

ವಿಐಎಸ್‌ಎಲ್ ಕಾರ್ಖಾನೆ| ಸರ್ಕಾರವೇ ನಡೆಸಲಿ| ಮುಚ್ಚಲು ಹೊರಟಿರುವುದು ಖಂಡನೀಯ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ

ವಿಐಎಸ್‌ಎಲ್ ಕಾರ್ಖಾನೆ ನಡೆಸಲು ಖಾಸಗಿಯವರು ಮುಂದೆ ಬಂದಿಲ್ಲವೆಂದರೆ ಸರ್ಕಾರವೇ ನಡೆಸಲಿ. ಅದನ್ನು ಬಿಟ್ಟು ಮುಚ್ಚಲು ಹೊರಟಿರುವುದು ಖಂಡನೀಯ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ ಹೇಳಿದರು.


ಇಂದು ಪ್ರೆಸ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಪತ್ರಿಕಾ ಸಂವಾದದಲ್ಲಿ ಮಾತನಾಡಿದ ಅವರು, ಈ ಕಾರ್ಖಾನೆ ಕನ್ನಡ ನಾಡಿನ ಅಸ್ಮಿತೆಯ ಪ್ರಶ್ನೆಯಾಗಿದೆ. ಇಲ್ಲಿ ಎಲ್ಲಾ ಮೂಲ ಸೌಕರ್ಯಗಳಿರುವುದರಿಂದ ಸರ್ಕಾರವೇ ಒಂದಿಷ್ಟು ಹಣ ಹಾಕಿ ನಡೆಸಲಿ ಎಂದು ಆಗ್ರಹಿಸಿದರು.
ವಿಮಾನ ನಿಲ್ದಾಣ ಉದ್ಘಾಟನೆಗೆ ಬರುವ ಪ್ರಧಾನಿ ಮೋದಿಯವರು ಅವರ ಅಹವಾಲು ಮಾತ್ರ ಹೇಳುವುದಲ್ಲ. ಜನರ ಅಳಲನ್ನು ಆಲಿಸಬೇಕಿದೆ. ಕಾರ್ಖಾನೆ ಬಗ್ಗೆ ಹೇಳಬೇಕಿದೆ. ಕಾರ್ಖಾನೆ ಉಳಿಸುವ ಬದಲಾಗಿ ರ‍್ಯಾಪಿಡ್ ಆಕ್ಷನ್ ಪೋರ್ಸ್ ಆರಂಭಿಸಲಾಗಿದೆ. ಇದರ ಅಗತ್ಯ ಇಲ್ಲಿಗೆ ಇತ್ತೆ ॒ ಇಲ್ಲೇನು ಸಮುದ್ರ ಇದೆಯಾ ಎಂದು ಪ್ರಶ್ನಿಸಿದರು.


ಪ್ರಧಾನ ಮಂತ್ರಿ ಹಾಗೂ ಮುಖ್ಯಮಂತ್ರಿ ಸುಮ್ಮನೆ ಬಂದು ಹೋಗುವುದಲ್ಲ. ನಮ್ಮ ಅಳಲನ್ನು ಕೇಳಬೇಕು. ಮೈಸೂರು ಒಡೆಯರ ಕಾಲದಲ್ಲಿ ಆರಂಭಿಸಿ ಜನರಿಗೆ ಉದ್ಯೋಗ ನೀಡಿದ ಕಾರ್ಖಾನೆಯನ್ನು ಮುಚ್ಚುವ ಮೂಲಕ ನಾಡಿನ ಅಸ್ಮಿತೆಯನ್ನೇ ಬುಡಮೇಲು ಮಾಡುವುದು ಸರಿಯಲ್ಲ ಎಂದರು.
ಬೇರೆ ವಿಷಯಕ್ಕೆ ತಲೆ, ಕೈ ಕತ್ತರಿಸಿ ಎನ್ನುವ ಇಲ್ಲಿನ ಶಾಸಕ ಈಶ್ವರಪ್ಪನವರಿಗೆ ಕಾರ್ಖಾನೆ ಪರವಾಗಿ ಹಾಗೂ ಮೋದಿ ವಿರುದ್ಧ ಮಾತನಾಡುವ ಧೈರ್ಯವಿಲ್ಲ. ಯಡಿಯೂರಪ್ಪನವರು ಜಿಂದಾಲ್‌ಗೆ ವಿಐಎಸ್‌ಎಲ್ ಕಾರ್ಖಾನೆ ಕೊಡಿಸಿ ತಮ್ಮ ಪಾಲು ಪಡೆಯಲು ಹವಣಿಸುತ್ತಿದ್ದಾರೆ ಎಂದು ಹೇಳಿದರು.


ಹಿಂದಿನ ಮುಖ್ಯಮಂತ್ರಿಗಳು ಒಂದೊಂದು ಯೋಜನೆಗಳನ್ನು ಆರಂಭಿಸುವ ಮೂಲಕ ಮಹತ್ವದ ಹೆಜ್ಜೆ ಗುರುತು ಬಿಟ್ಟು ಹೋಗಿದ್ದಾರೆ. ಆದರೆ ಈಗಿನ ಮುಖ್ಯಮಂತ್ರಿಗಳು ಏನನ್ನೂ ಮಾಡಿಲ್ಲ. ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ಬಡತನ ನಿವಾರಣೆಯ ಕಾರ್ಯಕ್ರಮ ಜಾರಿಯಾಗುತ್ತಿಲ್ಲ. ಇಡೀ ರಾಜ್ಯ ಇಂದು ಲ್ಯಾಂಡ್ ಮಾಫಿಯಾದಲ್ಲಿ ಮುಳುಗಿ ಹೋಗಿದೆ. ಬಿಜೆಪಿಯವರು ಮಠಾಧೀಶರಿಗೆ ಟಿಕೆಟ್ ನೀಡಲು ಹೊರಟಿzರೆ. ಇಂದಿನ ರಾಜಕೀಯ ರಿಯಲ್ ಎಸ್ಟೇಟ್ ಆಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.


ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ನಾನು ಕಾಂಗ್ರೆಸ್ ಸೇರುವ ಪ್ರಶ್ನೆಯೇ ಇಲ್ಲ. ಅದು ನನ್ನ ತವರು ಮನೆ. ನಾನಿರುವುದು ಅಲ್ಲಿಯೇ. ವಿಧಾನ ಪರಿಷತ್‌ಗೆ ಯಾವ ಪಕ್ಷದಿಂದಲೂ ನನ್ನನ್ನು ನೇಮಕ ಮಾಡಿಲ್ಲ. ಬದಲಾಗಿ ಸಾಹಿತ್ಯ ಕೃತಿಗಳನ್ನು ಬರೆದಿರುವುದರಿಂದ ಸಾಹಿತ್ಯ ಕ್ಷೇತ್ರದಿಂದ ಆಯ್ಕೆ ಮಾಡಲಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ಕೋಲಾರಕ್ಕೂ ಹೋಗುತ್ತೇನೆ ಎಂದರು.
ಈ ಸಂದರ್ಭದಲ್ಲಿ ಪ್ರಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ, ಕಾರ್ಯದರ್ಶಿ ನಾಗರಾಜ್ ಎಸ್., ಗೋಪಾಲ ಯಡಗೆರೆ, ಸಂತೋಷ್ ಇದ್ದರು.

Exit mobile version