Site icon TUNGATARANGA

ಭದ್ರಾವತಿ ಬಂದ್ ಎಲ್ಲೆಲ್ಲೂ ಜೋರೋ ಜೋರು…, ಟೈರ್ ಸುಟ್ಟು ಪ್ರತಿಭಟನೆ- ಎಲ್ಲೆಲ್ಲೂ ವಾಹನಗಳಿಲ್ಲ


ಭದ್ರಾವತಿ,ಫೆ.24:
ಇಲ್ಲಿನ ವಿಐಎಸ್ಎಲ್ ಉಳಿವಿಗಾಗಿ ಇಂದು ಭದ್ರಾವತಿ ಬಂದ್ ಗೆ ಕರೆ ನೀಡಿದ್ದು, ಬೆಳಗಿನಿಂದಲೇ ಬಂದ್ ಕರೆಗೆ ಒಳ್ಳೆಯ ಪ್ರತಿಕ್ರಿಯೆ ದೊರೆತಿದೆ. ಇದರ ಬಿಸಿ ಸಾರ್ವಜನಿಕರಿಗೆ ತಟ್ಟಿದೆ.


ವಿಐಎಸ್ಎಲ್ ಕಾರ್ಖಾನೆಯನ್ನು ಮುಚ್ಚುವ ನಿರ್ಧಾರವನ್ನು ಕೈಬಿಟ್ಟು, ಬಂಡವಾಳ ತೊಡಗಿಸಿ ಮುಂದುವರೆಸುವಂತೆ ಆಗ್ರಹಿಸಿ ಇಂದು ಭದ್ರಾವತಿ ಬಂದ್ ಗೆ ಕರೆ ನೀಡಲಾಗಿತ್ತು.
ಭದ್ರಾವತಿಯ ಜೀವನಾಡಿಯಾಗಿರುವ ಕಾರ್ಖಾನೆಯ ಉಳಿವಿಗಾಗಿ ಕರೆ ನೀಡಲಾಗಿರುವ ಬಂದ್ ಗೆ ಬಹುತೇಕ ವ್ಯವಹಾರಸ್ಥರು ಸ್ವಯಂ ಪ್ರೇರಿತರಾಗಿ ಬೆಂಬಲ ನೀಡುತ್ತಿದ್ದಾರೆ.


ಬಸ್ ನಿಲ್ದಾಣದ ಎದುರಿನ ವೃತ್ತ ಹಾಗೂ ಅಂಡರ್ ಬ್ರಿಡ್ಜ್ ಬಳಿಯ ಅಂಬೇಡ್ಕರ್ ವೃತ್ತವನ್ನು ಸಂಪೂರ್ಣ ಬಂದ್ ಮಾಡಿ ಟೈರ್ ಸುಟ್ಟು ಪ್ರತಿಭಟನೆ ನಡೆಸಲಾಗುತ್ತಿದೆ.
ಎರಡೂ ವೃತ್ತವನ್ನು ಬಂದ್ ಮಾಡಿ ಟೈರ್’ಗೆ ಬೆಂಕಿ ಹಚ್ಚಿರುವ ಕಾರ್ಮಿಕರು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ವಿಐಎಸ್ ಎಲ್ ನ
ಅಪಾರ ಕಾರ್ಮಿಕರ ಕುಟುಂಬಗಳ ಜೀವನ ನಿರ್ವಹಣೆಗೆ ಕಾರಣವಾಗಿದ್ದ ಈ ಕಾರ್ಖಾನೆ ದೇಶದ ಪ್ರಗತಿಗೆ ತನ್ನದೇ ಆದ ಕೊಡುಗೆಯನ್ನು ನೀಡಿದೆ. ನೂರು ವರ್ಷಗಳ ಇತಿಹಾಸವನ್ನು ಹೊಂದಿರುವ ಕರ್ನಾಟಕದ ಹೆಮ್ಮೆಯ ಆಸ್ತಿಯನ್ನು ತನ್ನ ನೀತಿಯ ಹೊರತಾಗಿಯು ಈಗಿನ ತಂತ್ರಜ್ಞಾನ ಬಳಸಿ, ಆಧುನೀಕರಣಗೊಳಿಸಿ ಮುಂದಿನ ಪೀಳಿಗೆಗೆ ಉಳಿಸಿಕೊಳ್ಳುವುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿರುತ್ತದೆ. ಕಾರ್ಖಾನೆಯನ್ನು ಮುಚ್ಚುವ ನಿರ್ಧಾರವನ್ನು ಬದಲಿಸಿ, ಹೆಚ್ಚಿನ ಬಂಡವಾಳ ತೊಡಗಿಸಿ, ಸರ್ಕಾರಿ ಸ್ವಾಮ್ಯದಲ್ಲೇ ಮುಂದುವರೆಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.


ಬಂದ್ ಗೆ ಸ್ವಯಂ ಪ್ರೇರಿತವಾಗಿ ವ್ಯಾಪಾರ ಹಾಗೂ ವ್ಯವಹಾರಸ್ಥರು ಬೆಂಬಲ ನೀಡಿರುವ ಹಿನ್ನೆಲೆಯಲ್ಲಿ ಯಾವುದೇ ಅಂಗಡಿ ಮುಂಗಟ್ಟುಗಳು ತೆರೆದಿಲ್ಲ.
ಅಲ್ಲದೇ, ಬಸ್ ನಿಲ್ದಾಣ ಹಾಗೂ ಅಂಬೇಡ್ಕರ್ ವೃತ್ತವನ್ನು ಬಂದ್ ಮಾಡಿರುವ ಹಿನ್ನೆಲೆಯಲ್ಲಿ ಬಸ್ ಹಾಗೂ ವಾಹನ ಸಂಚಾರಕ್ಕೆ ಅಡಚಣೆಯಾಗಿದ್ದು, ಇದರ ಬಿಸಿ ಸಾರ್ವಜನಿಕರಿಗೆ ತಟ್ಟುತ್ತಿದೆ. ಬಸ್, ಟ್ಯಾಕ್ಸಿ, ಆಟೋ ಸಂಚಾರ ನಗರದಲ್ಲಿ ಕಂಡುಬರಲಿಲ್ಲ.
ಇದರೊಂದಿಗೆ ರಂಗಪ್ಪ ವೃತ್ತದಲ್ಲೂ ಸಹ ಪ್ರತಿಭಟನೆ ನಡೆಸಿದ ಕಾರ್ಮಿಕರು ಟೈರ್ ಸುಟ್ಟು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Exit mobile version