ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ತಿಳಿಸಿರುವಂತೆ ಪ್ರತಿ ಮನೆಗೂ ಗ್ಯಾರಂಟಿ ಕಾರ್ಡನ್ನು ನಾಳೆಯಿಂದಲೇ ವಿತರಿಸಲಾಗು ವುದು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಹೇಳಿದರು.
ಅವರು ಇಂದು ಜಿಲಾ ಕಾಂಗ್ರೆಸ್ ಕಚೇರಿಯಲ್ಲಿ ಮನೆಮನೆಗೆ ಗ್ಯಾರಂಟಿ ಕಾರ್ಡ್ ಹಂಚುವ ಸಂಬಂಧ ಕರೆಯಲಾ ಗಿದ್ದ ಕಾರ್ಯಕರ್ತರ ಸಭೆಯಲ್ಲಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು.
ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಬಡವರು ಮತ್ತಷ್ಟು ಸಂಕಷ್ಟದಲ್ಲಿದ್ದಾರೆ. ಬೆಲೆ ಏರಿಕೆಗೆ ತತ್ತರಿಸಿ ಹೋಗಿದ್ದಾರೆ. ಬಿಜೆಪಿ ಸರ್ಕಾರ ಆಹಾರ ಪದಾರ್ಥಗಳ ಮೇಲೂ ಜಿಎಸ್ಟಿ ವಿಧಿಸಿದೆ. ಭ್ರಷ್ಟಾಚಾರ ಮಿತಿ ಮೀರಿದೆ. ಬದುಕುವುದೇ ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಜನರಲ್ಲಿ ಹೊಸ ಚೇತನ ನೀಡಲು ಕ್ರಮ ಕೈಗೊಂಡಿದೆ ಎಂದರು.
ಕಾಂಗ್ರೆಸ್ ಪಕ್ಷವು ಕುಟುಂಬವನ್ನು ನಿರ್ವಹಿಸುವ ಪ್ರತಿ ಮಹಿಳೆಗೆ ತಿಂಗಳಿಗೆ ೨೦೦೦ ರೂಗಳನ್ನು ನೀಡುತ್ತದೆ. ಈ ಯೋಜನೆ ಪ್ರಿಯಾಂಕಾ ಗಾಂಧಿಯವರ ಕನಸಾಗಿದೆ. ಗೃಹಲಕ್ಷ್ಮಿ ಹೆಸರಿನಲ್ಲಿ ಕಾಂಗ್ರೆಸ್ ಈ ಗ್ಯಾರಂಟಿ ಕಾರ್ಡ್ ನೀಡುತ್ತದೆ. ನಮ್ಮ ನಾಯಕರುಗಳಾದ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಈ ಕಾರ್ಡಿಗೆ ಸಹಿ ಮಾಡಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಇದನ್ನು ಖಂಡಿತಾ ನೀಡುತ್ತದೆ. ಇಲ್ಲದಿದ್ದರೆ ಮತದಾರರು ಖಂಡಿತಾ ಪ್ರಶ್ನೆ ಮಾಡಬಹುದಾಗಿದೆ ಎಂದರು.
ಗೃಹಲಕ್ಷ್ಮಿ ಯೋಜನೆಯಲ್ಲಿ ಗ್ಯಾಸ್ ಸಿಲಿಂಡರ್‌ಗೆ ೫೦೦ರೂ. ಜಿಎಸ್‌ಟಿ ಪರಿಹಾರಕ್ಕೆ ೫೦೦ರೂ. ಬೆಲೆ ಏರಿಕೆ ಪರಿಹಾರಕ್ಕೆ ೧೦೦೦ರೂ. ಸೇರಿದಂತೆ ಪ್ರತಿ ಕುಟುಂಬಕ್ಕೆ ೨ಸಾವಿರ ನೀಡಲಾಗುವುದು. ಇದಲ್ಲದೆ ಬಡವ ಶ್ರೀಮಂತ ಎಂಬ ಭೇದವಿಲ್ಲದೆ ಪ್ರತಿ ಮನೆಗೂ ೨೦೦ ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡಲಾಗುವುದು. ಇದರಿಂದ ಬಡ ಮತ್ತು ಮಧ್ಯವಮ ವರ್ಗದ ಕುಟುಂಬಗಳು ನೆಮ್ಮದಿಯಿಂದ ಜೀವನ ಮಾಡುವ ಹಾಗಾಗುತ್ತದೆ. ಆದ್ದರಿಂದ ಕಾಂಗ್ರೆಸ್ ಅನ್ನು ಬೆಂಬಲಿಸಿ ಎಂದರು.
ನಾಳೆಯಿಂದಲೇ ಮುಂದಿನ ಹತ್ತು ದಿನಗಳಲ್ಲಿ ನಮ್ಮ ಕಾರ್ಯಕರ್ತರು ಇವುಗಳನ್ನು ಪ್ರತಿ ಮನೆಗೆ ತಲುಪಿಸಿ ಅವರಿಗೆ ಅಭಯ ನೀಡಿ ವಿವರ ಪಡೆದುಕೊಳ್ಳುವರು. ಬಿಜೆಪಿಯವರಂತೆ ಕಾಂಗ್ರೆಸ್‌ನವರು ಸುಳ್ಳು ಭರವಸೆ ನೀಡುವುದಿಲ್ಲ. ಇದು ನಮ್ಮ ಗ್ಯಾರಂಟಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಬಲದೇವ ಕೃಷ್ಣ, ಚಂದ್ರಭೂಪಾಲ್, ಪಲ್ಲವಿ, ತಿಮ್ಮಪ್ಪ, ಕೃಷ್ಣಪ್ಪ, ಚಂದನ್, ಶರತ್, ಅಪ್ರಿದಿ, ನವುಲೆ ಶ್ರೀಧರ ಮೂರ್ತಿ, ದೀಪಕ್ ಸಿಂಗ್ ಇತರರಿದ್ದರು.