Site icon TUNGATARANGA

ಸಾಗರ: ಬಿಜೆಪಿ ಆಶ್ರಯ ನಿವೇಶನ ನೀಡುವುದಾಗಿ ಸುಳ್ಳು ಭರವಸೆ ನೀಡಿ ಜನರನ್ನು ದಿಕ್ಕುತಪ್ಪಿಸುತ್ತಿದೆ: ಐ.ಎನ್.ಸುರೇಶಬಾಬು ಆರೋಪ

Click

: ಚುನಾವಣೆ ನೀತಿ ಸಂಹಿತೆ ಜಾರಿಯಾಗುತ್ತಿರುವ ಹೊಸ್ತಿನಲ್ಲಿ ಬಿಜೆಪಿ ಆಶ್ರಯ ನಿವೇಶನ ನೀಡುವುದಾಗಿ ಸುಳ್ಳು ಭರವಸೆ ನೀಡಿ ಜನರನ್ನು ಸರದಿ ಸಾಲಿನಲ್ಲಿ ನಿಲ್ಲಿಸಿ ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಕಾಂಗ್ರೇಸ್ ನಗರ ಅಧ್ಯಕ್ಷ ಐ.ಎನ್.ಸುರೇಶಬಾಬು ದೂರಿದ್ದಾರೆ.
ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಆಶ್ರಯ ನಿವೇಶನಕ್ಕೆ ಸಂಬಂಧಪಟ್ಟಂತೆ ಅರ್ಜಿ ಕೊಡುತ್ತಿರುವುದು ಸ್ವತಃ ನಗರಸಭೆ ಅಧ್ಯಕ್ಷರಿಗೆ ಗೊತ್ತಿಲ್ಲ. ನಗರಸಭೆಯ ಆಡಳಿತ ಪಕ್ಷ ಸೇರಿದಂತೆ ವಿಪಕ್ಷ ಸದಸ್ಯರಿಗೂ ಮಾಹಿತಿ ನೀಡದೆ ತರಾತುರಿಯಲ್ಲಿ ಆಶ್ರಯ ನಿವೇಶನಕ್ಕೆ ಅರ್ಜಿ ಹಂಚುತ್ತಿರುವುದು ಅಕ್ರಮವಾಗಿದೆ. ಕಾಂಗ್ರೇಸ್ ಪಕ್ಷ ನಗರಸಭೆ ಆಡಳಿತದ ಧೋರಣೆಯನ್ನು ಖಂಡಿಸುತ್ತಿದೆ ಎಂದರು.


ಆಶ್ರಯ ನಿವೇಶನ ಹಂಚುವಲ್ಲಿ ಆಶ್ರಯ ಸಮಿತಿ ಸುಪ್ರೀಂ ಅಲ್ಲ. ಸಾಮಾನ್ಯಸಭೆಯಲ್ಲಿ ವಿಷಯ ಚರ್ಚೆಗೆ ತಂದು ಅರ್ಜಿ ಕರೆಯಬೇಕು. ಆದರೆ ಆಶ್ರಯ ಸಮಿತಿ ಇದ್ಯಾವುದನ್ನೂ ಮಾಡದೆ ಇರುವುದು ಅನೇಕ ಅನುಮಾನಕ್ಕೆ ಕಾರಣವಾಗಿದೆ. ನಗರಸಭೆ ಆಡಳಿತದ ಇದರ ನೈತಿಕ ಹೊಣೆಹೊತ್ತು ಎಷ್ಟು ಜನರಿಗೆ ನಿವೇಶನ ಕೊಡುತ್ತೀರಿ, ಭೂಮಿ ಎಲ್ಲಿ ಗುರುತಿಸಿದ್ದೀರಿ, ಆಶ್ರಯ ನಿವೇಶನ ಹಂಚುವಲ್ಲಿ ನಿಮ್ಮ ಮಾನದಂಡ ಏನು, ಹಿಂದೆ ನೀಡಿರುವ ಅರ್ಜಿಯ ಕಥೆ ಏನು ಎಂದು ಸಾರ್ವಜನಿಕರಿಗೆ ಸ್ಪಷ್ಟಪಡಿಸಲು ಒತ್ತಾಯಿಸಿದರು.


ವಿಪಕ್ಷ ನಾಯಕ ಗಣಪತಿ ಮಂಡಗಳಲೆ, ಸದಸ್ಯೆ ಎನ್.ಲಲಿತಮ್ಮ ಮಾತನಾಡಿ, ನಗರಸಭೆಯಲ್ಲಿ ನಾವು ೯ ಜನ ವಿಪಕ್ಷ ಸದಸ್ಯರು ಇದ್ದೇವೆ. ಆಶ್ರಯ ನಿವೇಶನಕ್ಕೆ ಅರ್ಜಿ ಕರೆಯುತ್ತಿರುವುದು ನಮ್ಮ ಗಮನಕ್ಕೆ ತಂದಿಲ್ಲ. ನಗರಸಭೆ ಆಡಳಿತ ವಿಪಕ್ಷವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ಆಡಳಿತ ಪಕ್ಷದ ಶಾಸಕರು ಮತ್ತು ನಗರಸಭೆ ಜನರಿಗೆ ನಿವೇಶನ ನೀಡುತ್ತೇವೆ ಎಂದು ಮೋಸ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ನಿವೇಶನಕ್ಕೆ ಅರ್ಜಿ ಸಲ್ಲಿಸಲು ಕನಿಷ್ಟ ಸಾರ್ವಜನಿಕ ಪ್ರಕಟಣೆ ಸಹ ನೀಡಿಲ್ಲ. ನಗರಸಭೆಯ ಜನವಿರೋಧಿ ನೀತಿಯನ್ನು ಖಂಡಿಸಿ ಕಾಂಗ್ರೇಸ್ ಪಕ್ಷ ಉಗ್ರ ಪ್ರತಿಭಟನೆ ನಡೆಸುತ್ತದೆ ಎಂದು ಎಚ್ಚರಿಕೆ ನೀಡಿದರು.


ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬಿ.ಆರ್.ಜಯಂತ್ ಮಾತನಾಡಿ, ದೆಹಲಿಯಿಂದ ಸಾಗರದವರೆಗೂ ಬಿಜೆಪಿಗೆ ಸುಶಾಸನ ನೀಡುವ ಇರಾದೆ ಇಲ್ಲ. ಕೋಮುಭಾವನೆ ಬಿತ್ತಿ ಒಡೆದು ಆಳುವ ಕೆಲಸ ಬಿಜೆಪಿ ಮಾಡುತ್ತಿದೆ. ಆಶ್ರಯ ನಿವೇಶನ ಹಂಚಿಕೆ ಸಹ ಚುನಾವಣೆ ಗಿಮಿಕ್. ಆಶ್ರಯ ಸಮಿತಿ ಅಧ್ಯಕ್ಷರಾಗಿರುವ ಶಾಸಕ ಹಾಲಪ್ಪ ಹರತಾಳು ಗಮನಕ್ಕೆ ಬಾರದೆ ಅರ್ಜಿ ತೆಗೆದುಕೊಳ್ಳಲಾಗುತ್ತಿದೆಯಾ, ಗಮನಕ್ಕೆ ಬಂದಿದ್ದರೆ ಶಾಸಕರು ಏಕೆ ಅದನ್ನು ಸಾರ್ವಜನಿಕ ಪ್ರಕಟಣೆ ನೀಡಲು ಆದೇಶ ಮಾಡಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಲು ಒತ್ತಾಯಿಸಿದರು.
ಗೋಷ್ಟಿಯಲ್ಲಿ ನಗರಸಭೆ ಸದಸ್ಯೆ ಶಬೀನಾ ತನ್ವಿರ್, ಡಿ.ದಿನೇಶ್ ಹಾಜರಿದ್ದರು.

Exit mobile version