Site icon TUNGATARANGA

ಕಾಲೇಜು ಹುಡುಗರ ಕನ್ನಡ ಪ್ರೇಮವನ್ನು ಬಿಂಬಿಸುವ ಕ್ಯಾಂಪಸ್ ಕ್ರಾಂತಿ ಫೆ.24 ರಂದು ಬಿಡುಗಡೆ

ಕಾಲೇಜು ಹುಡುಗರ ಕನ್ನಡ ಪ್ರೇಮವನ್ನು ಬಿಂಬಿಸುವ ಕ್ಯಾಂಪಸ್ ಕ್ರಾಂತಿ ಸಿನಿಮಾ ಫೆ.೨೪ರಂದು ರಾಜ್ಯಾದ್ಯಂತ ತೆರೆಕಾಣಲಿದೆ ಎಂದು ನಿರ್ದೇಶಕ ಹಾಗೂ ನಿರ್ಮಾಪಕ ಸಂತೋಷ್‌ಕುಮಾರ್ ಹೇಳಿದರು.


ಅವರು ಇಂದು ಪ್ರೆಸ್‌ಟ್ರಸ್ಟ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಲೇಜು ಹುಡುಗರೆಲ್ಲ ಸೇರಿಕೊಂಡು ಒಂದು ಹೊಸ ಕ್ರಾಂತಿಯನ್ನೆ ಮೂಡಿಸುವ ಸಿನಿಮಾ ಇದಾಗಿದ್ದು, ಮುಖ್ಯವಾಗಿ ಗಡಿಭಾಗದಲ್ಲಿ ಕನ್ನಡದ ಸಮಸ್ಯೆ ಹೇಗಿದೆ ಎಂಬುದನ್ನು ತಿಳಿಸುತ್ತದೆ. ಗಡಿಭಾಗದಲ್ಲಿರುವ ಅಗ್ನಿ ರಾಂಪುರ ಎಂಬ ಕಾಲ್ಪನಿಕ ಊರೊಂದರ ಸುತ್ತ ಚಿತ್ರದ ಕಥೆ ನಡೆಯುತ್ತದೆ. ಅಲ್ಲಿ ೨೧ ವರ್ಷಗಳಿಂದಲೂ ಕನ್ನಡ ರಾಜ್ಯೋತ್ಸವ ಆಚರಣೆ ನಿಂತಿರುತ್ತದೆ. ಅವರೆಲ್ಲ ಮತ್ತೆ ಹೇಗೆ ರಾಜ್ಯೋತ್ಸವ ಆಚರಿಸುತ್ತಾರೆ ಎಂಬುದು ಕಥೆಯ ತಿರುಳಾಗಿದೆ ಎಂದರು.


ಚಿತ್ರದ ಮೂಲಕ ಕನ್ನಡ ಭಾಷೆ, ಸಂಸ್ಕೃತಿ, ಕನ್ನಡವನ್ನು ಉಳಿಸುವ ಬಗೆ, ಗಡಿನಾಢಿನ ಸಮಸ್ಯೆ ಇವೆಲ್ಲವನ್ನೂ ಇಂದಿನ ಯುವಜgನರು ಹೇಗೆ ನಿಭಾಯಿಸುತ್ತಾರೆ, ಮತ್ತು ಕನ್ನಡ ಭಾಷೆ ಬೆಳೆಸಲು ಏನು ಮಾಡಬೇಕು ಎಂಬೆಲ್ಲಾ ವಿಷಯಗಳನ್ನು ಪ್ರಧಾನವಾಗಿಟ್ಟುಕೊಂಡು ನಡೆಯುವ ಈ ಸಿನಿಮಾ, ಪ್ರೀತಿ, ಹಾಸ್ಯ, ಥ್ರಿಲ್ಲರ್, ಆಕ್ಷನ್, ಸಾಹಸ, ಸುಮಧುರ ಸಂಗೀತ, ಅತ್ಯುತ್ತಮ ಛಾಯಾಗ್ರಹಣ ಹೀಗೆ ಎಲ್ಲಾ ವಿಭಾಗಗಳು ಅಚ್ಚುಕಟ್ಟಾಗಿ ಮೂಡಿ ಬಂದಿದ್ದು, ಕನ್ನಡಿರು ಈ ಚಿತ್ರವನ್ನು ಪ್ರೀತಿಯಿಂದ ಬರಮಾಡಿಕೊಳ್ಳುತ್ತಾರೆ ಎಂಬ ಭರವಸೆ ನಮ್ಮದು ಎಂದರು.


ನಾಯಕ ನಟ ಆರ‍್ಯ ಹಾಗೂ ನಾಯಕಿ ಈಶಾನಾ ಮಾತನಾಡಿ, ಯುವಕರನ್ನು ಪ್ರತಿಬಿಂಬಿಸುವ ಈ ಸಿನಿಮಾವನ್ನು ಕುಟುಂಬದ ಜೊತೆ ನೋಡಬಹುದಾಗಿದೆ. ವಿ. ಮನೋಹರ್ ಇದಕ್ಕೆ ಸಂಗೀತ ನೀಡಿದ್ದಾರೆ. ಮೂರು ಹಾಡುಗಳಿವೆ. ಭಾಷಾ ಪ್ರೇಮದ ಜೊತೆಗೆ ಮನರಂಜನೆಯನ್ನೂ ಈ ಚಿತ್ರ ನೀಡುತ್ತದೆ. ಫ್ಯಾಷನ್ ಮೂವೀ ಮೇಕರ್ಸ್ ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ಹಿರಿಯರಾದ ಕೀರ್ತಿರಾಜ್, ವಾಣಿಶ್ರೀ, ನಂದಗೋಪಾಲ್ ಮುಂತಾದವರು ಅಭಿನಯಿಸಿದ್ದಾರೆ. ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ನಟ ರಣವೀರ್, ಶಿವಮೊಗ್ಗದ ಕನ್ನಡ ಸಂಘಟನೆಯ ವಾಟಾಳ್ ಮಂಜುನಾಥ್ ಮುಂತಾದವರು ಇದ್ದರು.

Exit mobile version