Site icon TUNGATARANGA

ಇಪ್ಪತೈದು ವರುಷ ಚಲನಚಿತ್ರ ರಂಗದ ಸೇವೆಗೆ ಸಮನ್ವಯದಿಂದ ಪ್ರೇಮಾಗೆ “ಶ್ರೀಗಂಧದ ಬೊಂಬೆ” ಬಿರುದು ಪ್ರಧಾನ


ಸಮನ್ವಯ ಟ್ರಸ್ಟ್ ನಿಂದ ಕಾರ್ಯಕ್ರಮ ಆಯೋಜನೆ

ಶಿವಮೊಗ್ಗ: ಒಬ್ಬ ವ್ಯಕ್ತಿಯು ಸಾಧನೆ ಮಾಡುವ ಹಾದಿಯಲ್ಲಿ ಸಂತೋಷ, ನೋವು, ಸಂಕಷ್ಟ ಸೇರಿ ಅನೇಕ ಏರುಪೇರುಗಳನ್ನು ದಾಟಿ ಹೋರಾಟಗಳನ್ನು ಎದುರಿಸುತ್ತಾರೆ. ಇಂತಹ 25 ವರ್ಷಗಳ ಹೋರಾಟದ ಬದುಕು ನಡೆಸಿ ಸಾಧನೆ ಶಿಖರ ಏರಿದವರು ನಟಿ ಪ್ರೇಮಾ ಎಂದು ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಹೇಳಿದರು.
ನಟಿ ಪ್ರೇಮಾ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ 25 ವರ್ಷ ಪೂರೈಸಿ ಬೆಳ್ಳಿ ಹಬ್ಬ ಸಂಭ್ರಮದಲ್ಲಿರುವ ಪ್ರಯುಕ್ತ ಶಿವಮೊಗ್ಗ ನಗರದ ಕುವೆಂಪು ರಂಗಮಂದಿರದಲ್ಲಿ ಸಮನ್ವಯ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಟಿ ಪ್ರೇಮಾ ಅವರಿಗೆ “ಶ್ರೀಗಂಧದ ಗೊಂಬೆ” ಬಿರುದು ನೀಡಿ ಸನ್ಮಾನಿಸಿ ಗೌರವಿಸಿ ಮಾತನಾಡಿದರು.


ನಟಿ ಪ್ರೇಮಾ ಪ್ರತಿಯೊಂದು ಸಿನಿಮಾದ ಪಾತ್ರದ ಬಗ್ಗೆ ಸಂಪೂರ್ಣ ತಿಳಿದು ಪಾತ್ರದ ಪರಕಾಯ ಪ್ರವೇಶಿಸಿ ಅದ್ಭುತವಾಗಿ ಅಭಿನಯಿಸುತ್ತಿದ್ದರು. ನಮ್ಮೂರ ಮಂದಾರ ಹೂವೇ ಸಿನಿಮಾ ಚಿತ್ರೀಕರಣದ ಘಟನೆಗಳು ಇಂದಿಗೂ ನೆನಪಿನಲ್ಲಿವೆ. ಕ್ಲೈಮಾಕ್ಸ್ ದೈಶ್ಯದ ಅಭಿನಯಕ್ಕೆ ಇಡೀ ಪ್ರೇಕ್ಷಕ ವರ್ಗ ಅತ್ಯಂತ ಮೆಚ್ಚುಗೆ ವ್ಯಕ್ತಪಡಿಸಿತ್ತು. ಪ್ರತಿಯೊಂದು ಚಿತ್ರದ ಅಭಿನಯವೂ ಅದ್ಭುತ ಎಂದು ತಿಳಿಸಿದರು.
ಶ್ರೀಗಂಧದ ಗೊಂಬೆ ಬಿರುದು ಸ್ವೀಕರಿಸಿದ ನಟಿ ಪ್ರೇಮಾ ಮಾತನಾಡಿ, ನಿರ್ದೇಶಕರು ಕೊಟ್ಟ ಉತ್ತಮ ಪಾತ್ರಗಳ ಮೂಲಕ ನನ್ನ ಪ್ರತಿಭೆ ವಿಶ್ವಕ್ಕೆ ಪರಿಚಯವಾಯಿತು. ಉಪೇಂದ್ರ, ಸುನೀಲ್ ಕುಮಾರ್ ದೇಸಾಯಿನಂತಹ ನಿರ್ದೇಶಕರು ನಂಬಿಕೆಯಿಟ್ಟು ಪಾತ್ರ ಕೊಡುತ್ತಿದ್ದರು. ಎಲ್ಲ ನಿರ್ದೇಶಕರು ನೀಡಿದ ಅವಕಾಶಗಳಿಂದ ಸಿನಿಮಾ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳಿದರು.


ನಮ್ಮೂರ ಮಂದಾರ ಹೂವೇ ಸಿನಿಮಾ ಅವಕಾಶ ಬಂದ ಸಂದರ್ಭದಲ್ಲಿ ಕಥೆ ಕೇಳದೆಯೇ ಒಪ್ಪಿಕೊಂಡೆ. ಸುನೀಲ್ ಕುಮಾರ್ ದೇಸಾಯಿ ಅವರಂತಹ ನಿರ್ದೇಶನದಲ್ಲಿ ನಟಿಸುವುದೇ ದೊಡ್ಡ ಅವಕಾಶ. ಮುಂದಿನ ವರ್ಷಗಳಲ್ಲಿ ನಿರ್ದೇಶಕರ ಮೆಚ್ಚಿನ ನಟಿಯಾಗಿ ರೂಪುಗೊಂಡೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಮಾತನಾಡಿ, ಅನೇಕ ಸವಾಲುಗಳನ್ನು ಎದುರಿಸಿ ಸಮರ್ಥವಾಗಿ ಬದುಕು ಕಟ್ಟಿಕೊಂಡ ನಟಿ ಪ್ರೇಮಾ. ಅವರು ಅಭಿನಯಿಸಿದ ಎಲ್ಲ ಚಿತ್ರಗಳು ಅದ್ಭುತವಾಗಿ ಮೂಡಿಬರುತ್ತಿದ್ದವು. ನಟಿ ಪ್ರೇಮಾ ನೂರಾರು ಚಿತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಉತ್ತಮ ಅವಕಾಶಗಳು ಸಿಗುವಂತಾಗಲಿ ಎಂದು ಆಶಿಸಿದರು.
ಸಮನ್ವಯ ಟ್ರಸ್ಟ್ ನಿರ್ವಾಹಕ ನಿರ್ದೇಶಕ ಸಮನ್ವಯ ಕಾಶಿ ಮಾತನಾಡಿ, ನಮ್ಮ ಸಂಸ್ಥೆಯು ಸಮಾಜಮುಖಿಯಾಗಿ ವಿಶೇಷ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಿಕೊಂಡು ಬರುತ್ತಿದ್ದು, 25 ವರ್ಷ ಚಿತ್ರರಂಗದಲ್ಲಿ ನಾಯಕ ನಟಿಯಾಗಿ ಪೂರೈಸಿರುವ ನಟಿ ಪ್ರೇಮಾ ಅವರಿಗೆ ಶ್ರೀಗಂಧದ ಗೊಂಬೆ ಬಿರುದು ನೀಡಿ ಸನ್ಮಾನಿಸಲಾಗುತ್ತಿದೆ ಎಂದು ತಿಳಿಸಿದರು.


ಸಭಾ ಕಾರ್ಯಕ್ರಮದ ನಂತರ ನೃತ್ಯ ಗಾಯನ ಕಾರ್ಯಕ್ರಮ ನಡೆಯಿತು. ಹಾರ್ಟ್ ಫುಲ್‌ನೆಸ್ ರಾಜ್ಯ ಸಂಚಾಲಕ ಕೆ.ಮಧುಸೂದನ್, ಕಾರ್ಯನಿರ್ವಾಹಕ ನಿರ್ದೇಶಕ ಅರವಿಂದ್ ಶಶಿ, ಸಮನ್ವಯ ಸ್ವಯಂಸೇವಕರು ಉಪಸ್ಥಿತರಿದ್ದರು.

Exit mobile version