Site icon TUNGATARANGA

ಶಿವಮೊಗ್ಗ ಜನತೆಗೆ ವಿಮಾನ ಹಾರಾಟದ ಕನಸು ನನಸು/ ಪ್ರಧಾನಿ ಮೋದಿಯವರಿಂದ ಉದ್ಘಾಟನೆ : ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಸಂಭ್ರಮ

ಬಹುಜನರ ಬಹುದಿನದ ವಿಮಾನ ಹಾರಾಟದ ಕನಸು ನನಸಾಗುತ್ತಿದೆ. ವಿಶ್ವನಾಯಕ ಪ್ರಧಾನಿ ಮೋದಿಯವರೇ ವಿಮಾನ ನಿಲ್ದಾಣದ ಉದ್ಘಾಟನೆಗೆ ಆಗಮಿಸುತ್ತಿರುವುದು ಸಂಭ್ರಮದ ವಿಷಯವಾಗಿದೆ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿದರು.


ಅವರು ಇಂದು ಸೋಗಾನೆಯ ವಿಮಾನ ನಿಲ್ದಾಣಕ್ಕೆ ಸಂಸದ ಬಿ.ವೈ. ರಾಘವೇಂದ್ರ ಹಾಗೂ ಇಲಾಖೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಕಾರ್ಯಕ್ರಮದ ಹಿನ್ನೆಲೆಯಲ್ಲಿ ವೇದಿಕೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾಧ್ಯಮದವರ ಜೊತೆ ಮಾತನಾಡಿದರು.
ಶಿವಮೊಗ್ಗದ ವಿಮಾನ ನಿಲ್ದಾಣದ ಹಿಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ

ಹಾಗೂ ಸಂಸದ ಬಿ.ವೈ. ರಾಘವೇಂದ್ರ ಅವರ ಕೊಡುಗೆ ಅಪಾರವಾದುದು. ಈ ಇಬ್ಬರ ಹೆಸರು ವಿಮಾನ ನಿಲ್ದಾಣ ಇರುವವರೆಗೂ ಶಾಶ್ವತವಾಗಿ ಉಳಿಯುತ್ತದೆ. ಪ್ರಧಾನ ಮಂತ್ರಿಗಳು ಕೇವಲ ವಿಮಾನ ನಿಲ್ದಾಣವಲ್ಲದೆ ಇತರ ಕಾಮಗಾರಿಗಳ ಉದ್ಘಾಟನೆ ಹಾಗೂ ಕಾಮಗಾರಿಗಳ ಶಂಕುಸ್ಥಾಪನೆಯನ್ನು ನೆರವೇರಿಸುವರು. ಸ್ಮಾರ್ಟ್ ಸಿಟಿ ಸೇರಿದಂತೆ ಸುಮಾರು ೪೪ ಯೋಜನೆಗಳ ೫ಸಾವಿರ ಕೋಟಿ ವೆಚ್ಚದ ಕಾಮಗಾರಿಗಳಿಗೆ ಮೋದಿಯವರು ಚಾಲನೆ ನೀಡಲಿದ್ದಾರೆ ಎಂದರು.


ಶಿವಮೊಗ್ಗದಲ್ಲಿ ವಿಮಾನ ಹಾರಾಟ ಆರಂಭವಾದರೆ ಚಿತ್ರಣವೇ ಬದಲಾಗುತ್ತದೆ. ಜಗತ್ತಿನ ಉದ್ಯಮಿಗಳು ಶಿವಮೊಗ್ಗಕ್ಕೆ ಬರುತ್ತಾರೆ. ಉದ್ಯೋಗ ಅವಕಾಶಗಳು ಹೆಚ್ಚುತ್ತವೆ. ಉದ್ಘಾಟನಾ ಕಾರ್ಯಕ್ರಮಕ್ಕೆ ಸುಮಾರು ೨ಲಕ್ಷ ಜನರು ಕಣ್ತುಂಬಿಕೊಂಡು ಸಾಕ್ಷಿಯಾಗಲಿದ್ದಾರೆ ಎಂದರು.
ವಿಮಾನ ನಿಲ್ದಾಣಕ್ಕೆ ಯಾರ ಹೆಸರಿಡಬೇಕೆಂಬುದು ಇನ್ನೂ ಅಂತಿಮವಾಗಿಲ್ಲ. ಆದರೆ ನಾನು ವಿಮಾನ ನಿಲ್ದಾಣಕ್ಕಾಗಿ ಶ್ರಮಿಸಿದ ಬಿ.ಎಸ್. ಯಡಿಯೂರಪ್ಪ ಅವರ ಹೆಸರನ್ನು ಸೂಚಿಸಿದ್ದು ನಿಜ. ಇದು ಸಚಿವ ಸಂಪುಟದಲ್ಲೂ ಅನುಮೋದನೆ ಆಗಿತ್ತು. ಆದರೆ ಯಡಿಯೂರಪ್ಪನವರ ದೊಡ್ಡತನ ಅವರು ತಮ್ಮ ಹೆಸರು ಬೇಡ ಎಂದು ಕುವೆಂಪು ಅವರ ಹೆಸರನ್ನು ಸೂಚಿಸಿದ್ದಾರೆ. ಆದರೆ ಈ ಹೆಸರು ಕೂಡ ಅಂತಿಮವಲ್ಲ. ಯಡಿಯೂರಪ್ಪನವರ ಹೆಸರು ಮತ್ತೆ ಮುಂಚೂಣಿಗೆ ಬರಬಹುದು ನೋಡೋಣ ಎಂದರು.


ಈ ಸಂದರ್ಭದಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಎಸ್. ರುದ್ರೇಗೌಡ, ಕೆ.ಬಿ. ಅಶೋಕನಾಯ್ಕ, ಪ್ರಮುಖರಾದ ಎಸ್.ಎಸ್ ಜ್ಯೋತಿ ಪ್ರಕಾಶ್, ಪವಿತ್ರಾ ರಾಮಯ್ಯ, ಜಿಲ್ಲಾಧಿಕಾರಿ ಆರ್.ಸೆಲ್ವಮಣಿ, ಎಸ್‌ಪಿ ಮಿಥುನ್‌ಕುಮಾರ್, ಸಿ.ಎಸ್. ಷಡಾಕ್ಷರಿ ಹಾಗೂ ಏರ್‌ಪೋರ್ಟ್ ಅಧಿಕಾರಿಗಳು ಇದ್ದರು.

Exit mobile version