Site icon TUNGATARANGA

ಶರಾವತಿ ಕಣಿವೆಯ ಸರ್ಕಾರಿ ಶಾಲೆ ಸೇರಿ, ದೀಪದ ಬುಡ್ಡಿಯ ಬೆಳಕಿನಲ್ಲಿ ಓದಿದ ವಿವೇಕ್ ದೊರೈ ಈಗ ರಾಜ್ಯ ವೈದ್ಯರ ಸಂಘದ ಅಧ್ಯಕ್ಷ


ಶರಾವತಿ ಕಣಿವೆಯ ಶಕ್ತಿ, ಅಗಾಧತೆ, ಸಾಧನೆ ಒಂದಿಲ್ಲೊಂದು ಬಗೆಯ ರೋಚಕತೆ, ಸ್ವಾರಸ್ಯಕರಕ್ಕೆ ಕಾರಣವಾಗುತ್ತಾ ಬರುತ್ತಿರುವುದು ಕಣ್ಣ ಮುಂದಿನ ಸಾಕ್ಷಿಗೆ ಹಿಡಿದ ಕನ್ನಡಿಯಾಗಿದೆ. ದೇಶದ ಮೂಲೆ ಮೂಲೆಗಳಿಂದ ವಲಸೆ ಬಂದ ಬೇರೆ ಬೇರೆ ರಾಜ್ಯದ ಜನಾಂಗದವರು ನಾಡಿಗೆ ಬೆಳಕು ನೀಡುವ ಶರಾವತಿ ಯೋಜನೆಯನ್ನು ಅರಸಿ ಬಂದವರು.

ಅಣೆಕಟ್ಟು ನಿರ್ಮಾಣ ಕಾಲದಲ್ಲಿ ಪ್ರಮುಖವಾಗಿ ಕಲ್ಲು ಹೊಡೆದು ಕಡಿಯುವ ಕೆಲಸಕ್ಕೆ ಆಂಧ್ರ ಮೂಲದವರು, ಕಲ್ಲನ್ನು ನುಣುಪಾಗಿ ಜೋಡಿಸಿ ಕಟ್ಟಡ ಕಟ್ಟಲು ತಮಿಳುನಾಡು ಮೂಲದವರು, ಕಬ್ಬಿಣವನ್ನು ಬಗ್ಗಿಸಿ ಕಾಂಕ್ರೀಟ್ ಕೆಲಸಗಳನ್ನು ಮಾಡಲು ಕೇರಳ ಮೂಲದವರು, ಮಣ್ಣು ಕೆಲಸ ಮತ್ತು ತಾಂತ್ರಿಕ ಕೆಲಸಗಳಿಗೆ ಪ್ರಮುಖವಾಗಿ ಮೈಸೂರು, ಮಳವಳ್ಳಿ, ಮಂಡ್ಯ ಮೂಲದವರು ಹೆಚ್ಚಾಗಿ ಬಂದಿದ್ದರು ಎನ್ನುವುದು ಹಿರಿಯರ ಮಾತು. ಆ ದಿನಗಳಲ್ಲಿ ತಮಿಳುನಾಡಿನಿಂದ ವಲಸೆ ಬಂದ ಪಳನಿಸ್ವಾಮಿ ಕುಟುಂಬದ ದಂಪತಿಗಳ 9 ಮಕ್ಕಳಲ್ಲಿ 4 ಹೆಣ್ಣು 5 ಗಂಡು. ಬಡತನದ ನಡುವೆಯೇ ಈ ತಂದೆ ತಾಯಂದಿರು ಮಕ್ಕಳಿಗೆ ಸ್ಥಳೀಯ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಕೊಡಿಸಲು ಮುಂದಾದರು.

ದೀಪದ ಬುಡ್ಡಿಯ ಬೆಳಕಿನಲ್ಲಿ ಓದ ತೊಡಗಿದ 3 ಗಂಡು ಮಕ್ಕಳಲ್ಲಿ ಹಿರಿಯವರು ಇಂಜಿನಿಯರ್ ಆಗಿ ಕೆಇಬಿಯಲ್ಲಿ ಚೀಪ್ ಇಂಜಿನಿಯರ್ ಹುದ್ದೆ ಪಡೆದರು. 2 ನೇ ಎಂ.ಎ. ಗ್ರಾಜ್ಯುಯೇಟ್ ಆಗಿ ಲೆಕ್ಚರರ್ ಆದರು. 3ನೇಯವರು ಅಮೂಲ್ಯವಾದ ಜೀವ ಉಳಿಸುವ ವೈದ್ಯರಾಗಿ ಇಂದು ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆಯ ಡೆಪ್ಯುಟಿ ಡೈರೆಕ್ಟರ್ ಆಗಿ ಬೆಂಗಳೂರಿನಲ್ಲಿ ಸೇವೆ ಮಾಡುತ್ತಿರುವ ನಮ್ಮ ಹೆಮ್ಮೆಯ ಶರಾವತಿ ಕಣಿವೆಯ ಕೂಸು ಡಾ. ವಿವೇಕ್ ದೊರೈ ಇಂದು ಕರ್ನಾಟಕ ರಾಜ್ಯದ ಸರ್ಕಾರಿ ವೈದ್ಯರ ಸಂಘದ ಅಧ್ಯಕ್ಷರಾಗಿ ಆಯ್ಕೆ ಆಗಿ ಶರಾವತಿ ಕಣಿವೆಯ ಹೆಮ್ಮೆಯನ್ನು ಹೆಚ್ಚಿಸಿದ್ದಾರೆ ಎಂದು ತಿಳಿಸಲು ಹರ್ಷವೆನಿಸುತ್ತದೆ. ಡಾ. ವಿವೇಕ್ ದೊರೈ ಅವರಿಗೆ ಸಮಸ್ತ ಕಣಿವೆಯ ಜನತೆಯ ಪರವಾಗಿ ಅಭಿನಂದನೆಗಳು.

ಆರೋಗ್ಯ ಇಲಾಖೆ, ತುಂಗಾತರಂಗ ಪತ್ರಿಕಾ ಬಳಗ ಸಾಧಕರಾದ ವಿವೇಕ್ ದೊರೈ ಅವರನ್ನು ಅಭಿನಂದಿಸಿದೆ.

Exit mobile version