ಶಿವಮೊಗ್ಗ : ನಮ್ಮ ದೇಶದ ಧೀಮಂತ ನಾಯಕರ ಆದರ್ಶ ಯುವ ಸಮೂಹಕ್ಕೆ ಎಂದಿಗೂ ಪ್ರೇರಣೀಯವಾಗಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಹ ಕಾರ್ಯದರ್ಶಿಗಳಾದ ಡಾ.ಪಿ.ನಾರಾಯಣ್ ಅಭಿಪ್ರಾಯಪಟ್ಟರು
ನಗರದ ಜಯಪ್ರಕಾಶ್ ನಾರಾಯಣ್ ಪದವಿಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ವಿದ್ಯಾರ್ಥಿ ಸಂಘದ ಸಮಾರೋಪ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಯಪ್ರಕಾಶ್ ನಾರಾಯಣ್ ಈ ದೇಶ ಕಂಡ ಅದ್ಭುತ ಧೀಮಂತ ನಾಯಕ. ಯುವ ಸಮೂಹ ಅಂತಹ ನಾಯಕರ ಆದರ್ಶಗಳನ್ನು ಅರಿತು ದೇಶದ ಸುಭದ್ರತೆಯತ್ತ ಚಿಂತನೆ ನಡೆಸಬೇಕಿದೆ. ಶಿಕ್ಷಣವೆಂಬುದು ನಮ್ಮ ಬದುಕಿನ ಬುನಾದಿ, ಅಂತಹ ಶಿಕ್ಷಣದ ಜೊತೆಗೆ ನಮ್ಮಲ್ಲಿನ ಸೂಪ್ತ ಪ್ರತಿಭೆಗಳಿಗೆ ಪ್ರೇರಣೆ ನೀಡುವುದು ಶಾಲೆ ಕಾಲೇಜುಗಳ ವಿದ್ಯಾರ್ಥಿ ಸಂಘಗಳು. ಹೇಗೆ ಒಂದು ಮರ ಸೊಗಸಾಗಿ ಕಾಣಲು ಎಲೆ, ಬೇರು, ಹಸಿರು ಎಲ್ಲವೂ ಮುಖ್ಯವೋ, ಹಾಗೆಯೇ ಕೌಶಲ್ಯತೆ ಹಾಗೂ ಉತ್ತಮ ಜ್ಞಾನದಿಂದ ಸದಾ ನಿಮ್ಮ ಜೀವನ ನಲಿವಿನಿಂದ ಸೊಗಸಾಗಿ ಕೂಡಿರಲಿ ಎಂದು ವಿದ್ಯಾರ್ಥಿಗಳಿಗೆ ಹಾರೈಸಿದರು.
ಮಹಾನಗರ ಪಾಲಿಕೆ ಸದಸ್ಯರಾದ ಶಂಕರ್ ಗನ್ನಿ ಮಾತನಾಡಿ, ಮಹಾನಗರ ಪಾಲಿಕೆ ವತಿಯಿಂದ ಈ ಸಾಲಿನಲ್ಲಿ ಸುಮಾರು ಹತ್ತು ಲಕ್ಷ ರೂಪಾಯಿ ಅನುದಾನದಲ್ಲಿ ಕಾಲೇಜಿನ ಅಭಿವೃದ್ಧಿಗೆ ಅವಶ್ಯಕ ವಿವಿಧ ಕಾಮಗಾರಿಗಳನ್ನು ನಡೆಸಲಾಗುವುದು ಎಂದು ಹೇಳಿದರು.
ನಿವೃತ್ತ ಉಪನ್ಯಾಸಕರಾದ ಬಿ.ಕೆ.ವೆಂಕಟೇಶಮೂರ್ತಿ ಮಾತನಾಡಿ, ಮನುಷ್ಯನ ಜೀವನದಲ್ಲಿ ಎಲ್ಲರೂ ಸುಖವಯನ್ನು ಬಯುಸುತ್ತಾರೆ. ಅಂತಹ ಸುಖವನ್ನು ಪಡೆಯಲು ಶಿಕ್ಷಣದಿಂದ ಮಾತ್ರ ಸಾಧ್ಯ. ಯಾರು ವಿದ್ಯೆಯನ್ನು ಕಲಿಯುತ್ತಾರೆ ಅವರು ವಿನಯ ಮತ್ತು ವಿವೇಕವನ್ನು ಪಡೆಯುತ್ತಾರೆ. ಶಿಕ್ಷಣದ ಮೂಲ ಉದ್ದೇಶ ಮನುಷ್ಯನಲ್ಲಿರುವ ಇಚ್ಛಾಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು. ಆ ಮೂಲಕ ಜೀವನದ ಸ್ಪಷ್ಟತೆಯೊಂದಿಗೆ ಸರ್ವಾಂಗೀಣ ಅಭಿವೃದ್ಧಿ ಪಡೆಯಲು ಶಿಕ್ಷಣ ಶಕ್ತಿಯಾಗಿ ನಿಲ್ಲಲಿದೆ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಕೆ.ಕೆಂಚಪ್ಪ ಅಧ್ಯಕ್ಷತೆ ವಹಿಸಿದ್ದರು. ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕರಾದ ದಯಾನಂದ ನಾಯ್ಕ, ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸೌಂದರ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಶಿಕ್ಷಣ ಸಮಿತಿ ವತಿಯಿಂದ ವಿದ್ಯಾರ್ಥಿ ವೇತನ ಚೆಕ್ ವಿತರಿಸಲಾಯಿತು.