Site icon TUNGATARANGA

ಸಿದ್ದರಾಮಯ್ಯರವರನ್ನು “ಕೊಲೆ ಮಾಡುವಂತೆ” ಭಾಷಣ ಮಾಡಿರುವ ಸಚಿವ ಡಾ. ಅಶ್ವತ್ಥ ನಾರಾಯಣರವರನ್ನು ಬಂಧಿಸುವಂತೆ ಮನವಿ

ಸಾಗರ : ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಕೊಲೆ ಮಾಡುವಂತೆ ಪ್ರಚೋದನೆ ನೀಡಿ ಭಾಷಣ ಮಾಡಿರುವ ಸಚಿವ ಡಾ. ಅಶ್ವತ್ಥ ನಾರಾಯಣ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಮತ್ತು ತಕ್ಷಣ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಶುಕ್ರವಾರ ಕಾಂಗ್ರೇಸ್ ಪಕ್ಷದಿಂದ ಉಪವಿಭಾಗಾಧಿಕಾರಿಗಳ ಕಚೇರಿ ಮೂಲಕ ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಲಾಯಿತು.


ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬಿ.ಆರ್.ಜಯಂತ್, ರಾಜ್ಯ ಸರ್ಕಾರದ ಸಚಿವ ಡಾ. ಅಶ್ವತ್ಥ ನಾರಾಯಣ್ ಮಂಡ್ಯದಲ್ಲಿ ನಡೆದ ಸಭೆಯಲ್ಲಿ ನಿಮಗೆ ಟಿಪ್ಪು ಬೇಕಾ, ಸಾರ್ವಕರ್ ಬೇಕಾ ಎಂದು ಪ್ರಶ್ನಿಸುತ್ತಾ, ಟಿಪ್ಪುವನ್ನು ಉರಿಗೌಡ ಮತ್ತು ನಂಜೆಗೌಡ ಹೇಗೆ ಕೊಂದರೋ ಹಾಗೆ ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಬೇಕು ಎಂದು ಪ್ರಚೋದನಾಕಾರಿಯಾಗಿ ಕಾರ್ಯಕರ್ತರಿಗೆ ಕರೆ ಕೊಟ್ಟಿರುವುದನ್ನು ಕಾಂಗ್ರೇಸ್ ಪಕ್ಷ ತೀವೃವಾಗಿ ಖಂಡಿಸುತ್ತದೆ. ಸಂವಿಧಾನದ ಮೇಲೆ ಕೈಯಿಟ್ಟು ಪ್ರತಿಜ್ಞೆ ಮಾಡಿ ಸಚಿವರಾಗಿರುವ ಡಾ. ಅಶ್ವತ್ಥ ನಾರಾಯಣ ಅವರ ಇಂತಹ ಪ್ರಚೋದನಾಕಾರಿ ಹೇಳಿಕೆ ಕ್ರಿಮಿನಲ್ ಅಪರಾಧವಾಗಿದೆ ಎಂದರು


ಕೊಲೆ ಮಾಡುವುದು ಎಷ್ಟು ತಪ್ಪೊ, ಪ್ರಚೋದನೆ ನೀಡುವುದು ಸಹ ಅಷ್ಟೆ ಘೋರ ತಪ್ಪಾಗಿರುತ್ತದೆ. ಕಾನೂನು ಪ್ರಕಾರ ಎರಡೂ ಪ್ರಕರಣದಲ್ಲಿ ಒಂದೇ ರೀತಿಯ ಶಿಕ್ಷೆ ಕಾನೂನಿನಲ್ಲಿದೆ. ಕೊಲೆ ಮಾಡಿ ಎಂಬಂತಹ ಹೇಳಿಕೆ ನೀಡಿದ ಡಾ. ಅಶ್ವತ್ಥ ನಾರಾಯಣ ಅವರನ್ನು ರಾಜ್ಯ ಸರ್ಕಾರ ರಕ್ಷಣೆ ಮಾಡುತ್ತಿದೆ. ಪೊಲೀಸ್ ಇಲಾಖೆ ಈತನಕ ಡಾ. ಅಶ್ವತ್ಥ ನಾರಾಯಣ ಅವರನ್ನು ಬಂಧಿಸದೆ ಇರುವ ಕ್ರಮ ಖಂಡನೀಯ. ಕೂಡಲೆ ಅಶ್ವತ್ಥ ನಾರಾಯಣ ಅವರನ್ನು ಬಂಧಿಸಿ ಸೂಕ್ತ ಕಾನೂನುಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.


ನಗರ ಕಾಂಗ್ರೇಸ್ ಅಧ್ಯಕ್ಷ ಸುರೇಶಬಾಬು, ಪ್ರಧಾನ ಕಾರ್ಯದರ್ಶಿ ಮಹಾಬಲ ಕೌತಿ, ಮಹಿಳಾ ಕಾಂಗ್ರೇಸ್ ಅಧ್ಯಕ್ಷರಾದ ಮಧುಮಾಲತಿ, ಸುಮಂಗಲ, ಪ್ರಮುಖರಾದ ಕೆ.ಹೊಳೆಯಪ್ಪ, ತಸ್ರೀಫ್, ಗಣಪತಿ ಮಂಡಗಳಲೆ, ಯಶವಂತ ಪಣಿ, ತುಕಾರಾಮ್, ಅಣ್ಣಪ್ಪ ಭೀಮನೇರಿ, ಅನ್ವರ್ ಭಾಷಾ, ಹಮೀದ್, ವೆಂಕಟೇಶ್ ಮೆಳವರಿಗೆ, ಸರಸ್ವತಿ ನಾಗರಾಜ್, ಗಣಾಧೀಶ್, ಕನ್ನಪ್ಪ ಮುಳಕೇರಿ ಇನ್ನಿತರರು ಹಾಜರಿದ್ದರು

Exit mobile version