Site icon TUNGATARANGA

“ಮೆಚ್ಚಿನ ಮಿಡ್ಡಿ” ಬಾಲ್ಯದ ನೆನಹುಗಳಿಗೆ ಭಾಷೆಯ ಬಂಧನದೊಂದಿಗೆ ಸಂಸ್ಕೃತಿ ನೀಡಿದ ಶಿಕ್ಷಕಿ ಅಶ್ವಿನಿಯವರ ಲೇಖನ

ಮೊನ್ನೆ ತವರೂರಿಗೆ ಹೋದಾಗ ಅಮ್ಮಾ “ಭಾರತ ಹುಣ್ಣಿಮೆ”ಬಂದಿದೆ ಸ್ವಲ್ಪ ಮನೆ ಸ್ವಚ್ಛ ಮಾಡಬೇಕು ಕೈಜೋಡಿಸು ಎಂದರು,ನಾನು ಹೂಂ ಎಂದು ಧೂಳನ್ನು ಗೊಡವಲು ಶುರುಮಾಡಿದೆ.ಮನೆಯ ಸಜ್ಜಾದ ಮೇಲಿದ್ದ ಒಂದು ಲಗೇಜು ಬ್ಯಾಗ್ ನನ್ನ ಕಣ್ಣಿಗೆ ಬಿದ್ದಿತು,ಅದನ್ನು ನೋಡುವ ಕುತೂಹಲ ಹೆಚ್ಚಾಗಿ ಕೆಳಗಿಸಿದೆ ಅದನ್ನು. ಅದರ ತುಂಬಾ ನನ್ನ,ಹಾಗೂ ನನ್ನ ತಮ್ಮನ ಹಳೆಯ ಬಟ್ಟೆಗಳು ಬೆಳಕು,ಗಾಳಿಯನ್ನು ಕಾಣದೇ ಸೊರಗಿ ಮಲಗಿದ್ದವು.ಮನದಲ್ಲಿ ಅವೆಲ್ಲವನ್ನು ನೋಡುವ ಉತ್ಕಟತೆ ಹೆಚ್ಚಾಗಿ ಅಮ್ಮ ವಹಿಸಿದ್ದ ಕೆಲಸ ಮೋಟುಕುಗೊಳಿಸಿ ,ನನ್ನ ಬಾಲ್ಯದ ನೆನಪನ್ನು ಸವಿಯುತ್ತಾ ಒಂದೊಂದೆ ಬಟ್ಟೆಯನ್ನು ನೋಡಹತ್ತಿದೆ.

ಬ್ಯಾಗಿನ ತಳ ಭಾಗದಲ್ಲಿ ನನ್ನ ಜೀವದ ಜೀವ ಅರಿಶಿಣ ಹಾಗೂ ತಿಳಿ ನೀಲಿ ಬಣ್ಣದ ಉದ್ದದ (ಲಾಂಗ್)ಮಿಡ್ಡಿಯು ನನ್ನ ಕಣ್ಣಿಗೆ ಬಿದ್ದಿತು,ಆ ಬಟ್ಟೆಯನ್ನು ಹಿಡಿಯುತ್ತಲೇ ನಾನು 5 ನೇ ತರಗತಿಯ ವಿದ್ಯಾರ್ಥಿ ಜೀವನಕ್ಕೆ ಹೋಗಿದ್ದೆ.
ಅದನ್ನು ನೋಡುತ್ತಲೇ ನನ್ನ ನೆಚ್ಚಿನ ಹಿಂದಿ ವಿಷಯದ ಗುರುಗಳಾದ ದಿ / ದೇವಪ್ಪ ಛಾವಣಿ ( ಗಜೇಂದ್ರಗಡ ) ಸರ್ ನೆನಪಿಗೆ ಬಂದರು, ಅಂದು ನನ್ನನ್ನು ತಮ್ಮೂರ ಜಾತ್ರೆಗೆಂದು ಕರೆದುಕೊಂಡು ಹೋಗಿದ್ದರು.ಜಾತ್ರೆಯೆಲ್ಲಾ ಮುಗಿಸಿ ನನ್ನನ್ನು ಬಟ್ಟೆ ಅಂಗಡಿಗೆ ಕರೆದೊಯ್ದರು,ಎಂತಹ ಒಳ್ಳೆ ಬಟ್ಟೆ ತೋರಿಸಿದರು ನನಗೆ ಹಿಡಿಸಲಿಲ್ಲಾ,ಅವಾಗ ಕಣ್ಣಿಗೆ ಬಿದ್ದದ್ದೇ ಈ “ಮಿಡ್ಡಿ”ನಾನು ಎರಡು ಮಾತಾಡದೆ ನನಗೆ ಈ ಮಿಡ್ಡಿ ಬೇಕು ಸರ್ ಎಂದೆ, ಆಗ ಅವರು ಬೇಡಮ್ಮಾ ಇದು ನಿನಗೆ ಉದ್ದ ಆಗುತ್ತೆ ಬೇಡಾ ಅಂದರು ನಾ ಕೆಳಲಿಲ್ಲಾ ಅದೇ ಬೇಕು ಎಂದು ಕೊಡಿಸಿಕೊಂಡೆ.

ಅದರಲ್ಲಿಯೂ ನನ್ನ ಸ್ವಾರ್ಥ್ ವಿತ್ತು ಅದೇನೆಂದರೆ ನಾನು “ಅಮೃತ ವರ್ಷಿಣಿ “ಸಿನೆಮಾದಲ್ಲಿ ನಟಿ ದಿ / ನಿವೇದಿತಾ ಜೈನ್ ಹಾಕಿದ ಮಿಡ್ಡಿಯೂ ಅದೇ ತೆರನಾಗಿತ್ತು ,ಹಾಗಾಗಿ ನಾನು ಅದಕ್ಕೆ ಮನಸೋತಿದ್ದೆ.ಜಾತ್ರೆಯೆಲ್ಲಾ ಮುಗಿಸಿಕೊಂಡು ನಮ್ಮೂರಿಗೆ ನಾನು, ಸರ್,ಮರಳಿದೆವು .ಶಾಲೆಯಲ್ಲಿ ನನ್ನ ಎಲ್ಲಾ ಸ್ನೇಹಿತೆಯರಿಗೆ ನನ್ನ ಮಿಡ್ಡಿಯ ವಿಷಯವನ್ನು ಡಂಗೂರವಿಲ್ಲದೆ ಸಾರಿ,ಸಾರಿ,ಹೇಳಿ ತೋರಿಸಿದೆ, ಯಾಕಂದರೆ ಅದು ನನ್ನ ಬಾಲ್ಯದ ಪ್ರಥಮ ಮಿಡ್ಡಿ ಡ್ರೆಸ್ ಆಗಿತ್ತು.ಅಮ್ಮಾ ಮೊದಲೇ ಆಜ್ಞೆ ಮಾಡಿದ್ದಳು ಹಬ್ಬ ಬಂದಾಗ ಮಾತ್ರ ಇದನ್ನು ಹಾಕಬೇಕೆಂದು,ಆದುದರಿಂದ ನಾನು ಹಬ್ಬ ಬರುವ ದಾರಿಯೆನ್ನೇ ಕಾಯುತ್ತಿದ್ದೆ ಅಂತೂ ಇಂತೋ ಗಣೇಶನ ಹಬ್ಬ ಬಂದೆ ಬಿಟ್ಟಿತು.ನಮ್ಮ ಶಾಲೆಯಲ್ಲಿ ಗಣೇಶನ ಮೂರ್ತಿಯನ್ನು ಕೂಡಿಸುವ ಪದ್ದತಿ ಇತ್ತು, ಅಂದು ಬೆಳಿಗ್ಗೆ ಬೇಗಾ ಎದ್ದು ಸ್ನಾನ, ದೇವರ ಪ್ರಾರ್ಥನೆ ಮುಗಿಸಿಕೊಂಡು ತಿಜೋರಿಯಲ್ಲಿದ್ದ ಮಿಡ್ಡಿಯನ್ನು ತಗೆದು ಹಾಕಿಕೊಂಡೆ,ಮಿಡ್ಡಿ ನನ್ನ ಮೈ ತಾಗುತ್ತಿದ್ದಂತೆ ಏನೋ ಒಂಥರಾ ಗಾಳಿಯಲ್ಲಿ ತೇಲಿದಂತಾಯಿತು,ಲಗು ಬಗೆಯನೇ ತಯಾರಾಗಿ ಶಾಲೆಗೆ ಹೋದೆ ಎಲ್ಲಾ ಗೆಳತಿಯರ ಮುಂದೆ ನನ್ನ ಉದ್ದವಾದ ಮಿಡ್ಡಿಯನ್ನು ಎತ್ತಿ ಹಿಡಿದು ,ಬಣ್ಣದ ಚಿಟ್ಟೆಯಂತೆ ಶಾಲೆಯ ಆವರಣದಲ್ಲೆಲ್ಲಾ ಓಡಾಡಿದೆ,ಇದನ್ನು ಕಂಡ ನನ್ನ ಸ್ನೇಹಿತೆಯರು ಎಷ್ಟು ಧೀಮಾಕು ಇವಳದು ಎಂದು ಕುಹಕವಾಡಿದ್ದರು. ಅಂದು ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲಾ .ಹಾಗೇಯೇ ನಾನು ಆ ಮಿಡ್ಡಿಯನ್ನು ತುಂಬಾ ಸ್ವಚ್ಛ,ಮತ್ತು ಜೋಪಾನವಾಗಿ ಇಟ್ಟುಕೊಂಡಿದ್ದೆ ಏಕೆಂದರೆ ಅದು ನನ್ನ ನೆಚ್ಚಿನ ಸರ್ ಕೊಡಿಸಿದ್ದು. ಮುಂದೆ ದೊಡ್ಡವಳಾದ ಮೇಲೆ , ಅಮ್ಮಾ ,ಈ ಮಿಡ್ಡಿಯನ್ನು ನೀನು ಹಾಕುವುದಿಲ್ಲಾ ಈಗಾ ಯಾರಿಗಾದರು ಕೊಡಲಾ ಎಂದು ಕೇಳಿದಾಗ ನಾನು ಸುತಾರಾಂ ಒಪ್ಪುತ್ತಿರಲಿಲ್ಲಾ ಮತ್ತೇ ಅದನ್ನು ಮಡಿಚಿ ಇಡುತ್ತಿದ್ದೆ. ಇಲ್ಲಿಯವರೆಗೂ ನನ್ನ ಅಮ್ಮ ಅದನ್ನ ಜೋಪಾನವಾಗಿಟ್ಟಿದ್ದಾಳೆ ಅದಕ್ಕಾಗಿ ಅವಳಿಗೊಂದು ಥಾಂಕ್ಸ್….

ಆದರೆ ಸ್ನೇಹಿತರೆ ಈಗಿನ “ಫ್ಯಾಶನ್ ಧಿರಿಸುಗಳನ್ನು”ನೋಡಿದಾಗ ಮನಸ್ಸಿಗೆ ತುಂಬಾ ಬೇಸರವುಂಟಾಗುತ್ತದೆ ಏಕೆ ಗೊತ್ತಾ ಇಂದಿನ ಪಾಲಕರೇ ಮಕ್ಕಳಿಗೆ ಚಿಕ್ಕಂದಿನಿಂದಲೇ ಫ್ಯಾಶನ್ ಭೂತ ಅಂಟಿಸಿಬಿಟ್ಟಿರುತ್ತಾರೆ,ಮಕ್ಕಳಿಗೆ ಅರೆ-ಬರೆ ಬಟ್ಟೆ,ಅಲ್ಲಲ್ಲಿ ಹರಿದ,ತುಂಡಾದ ತೋಳುಗಳ ಬಟ್ಟೆ, ಪ್ಯಾಂಟ್ ಶರ್ಟ್ ಗಳನ್ನು ಹಾಕಿಸಿ ರೂಢಿಮಾಡಿಬಿಡುತ್ತಾರೆ.ಮುಂದೆ ಅವರು ಬೆಳೆದು ದೊಡ್ಡವರಾದ ಮೇಲೆ ಅದೇ ಪದ್ಧತಿಯನ್ನು ಮುಂದುವರಿಸಿಕೊಂಡು ಹೋಗುತ್ತಾರಾಷ್ಟೇ. ನಾವೆಲ್ಲರೂ ಈಗಾ ಆಧುನಿಕ ಬದಲಾವಣೆಯ ಮೊರೆ ಹೋಗಿ ನಮ್ಮ ಹಳೆಯ ರೂಢಿ,ಪದ್ಧತಿಗಳನ್ನು ಗಾಳಿಗೆ ತೂರುತ್ತಿದ್ದೇವೆ, ಪಾಶ್ಚಾತ್ಯ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಅರೆ ಬರೆ ಬಟ್ಟೆ ಹಾಕಿ ಮೆರೆಯುತ್ತಿದ್ದೇವೆ. ಈಗಾ ದೇಶದ ಪ್ರಮುಖ ನಗರಗಳಲ್ಲಿಯಂತೂ ಸೀರೆ, ಲಂಗ ದಾವಣಿ,ಹಾಗೂ ಮೈತುಂಬಾ ಬಟ್ಟೆ ಹಾಕುವ ಯುವತಿಯರು ಸಿಗುವುದು ತುಂಬಾ ವಿರಳ ,ಬಣ್ಣ ಬಣ್ಣದ ಹರಿದ,ಮುರಿದ,ಅರ್ಬಂಬರ್ಧಾ ಡ್ರೆಸ್ಸು ಗಳನ್ನೇ ಹಾಕುತ್ತಿದ್ದಾರೆ .ಇದರಿಂದ ಅನ್ಯ ಲಿಂಗದ ಮನಸ್ಸುಗಳು ವಿಕೃತಗೊಂಡು, ಕಾಮ ಕೇಳಿ ಪ್ರಚೋದನೆಗಳು ಸಾಮಾನ್ಯವಾಗಿ ಬಿಟ್ಟಿವೆ .

ಅಲ್ಲದೆ ಈ ರೀತಿ ಮೈ ತೋರಿಸುವ ಬಟ್ಟೆಗಳಿಂದಾಗಿ ಅತ್ಯಾಚಾರದಂತಹ ಹೀನ ಕೃತ್ಯಗಳು ,ಸಮಾಜವನ್ನು ನಡುಗಿಸಿವೆ,ಇದಕ್ಕೆಲ್ಲಾ ನಾವೇ ಪರೋಕ್ಷವಾಗಿ ಪ್ರಚೋದನೆ ನೀಡಿದಂತಾಗಿದೆ.
ಒಬ್ಬ ಕನ್ನಡದ ಕವಿ ಹೀಗೆ ಹೇಳುತ್ತಾರೆ, “ಹೆಣ್ಣಿನ ಸೌಂದರ್ಯ ಎಂಟು ಮೊಳದ ಸೀರೆಯಲ್ಲಡಗಿದೆ,ಮುಖ ಕಾಂತಿಯು ಕಾಸಗಲ ಬೊಟ್ಟಲ್ಲಿದೆ,ಅವಳ ತನ್ಮಯತೆಯು ನೀಳ ಜಡೆಯಲ್ಲಡಗಿದೆ, ಅಂತಹ ಹೆಣ್ಣು ಓಣಿಯಲ್ಲಿ ಬಳುಕುತ್ತಾ ಓಡಾಡಿದರೆ,ಸಾವಿರ ಮಯೂರಗಳ ನರ್ತನವಾಗಿದೆ “ಎಂದಿದ್ದಾರೆ,ವಾಹ್ !! ಎಷ್ಟು ಮನೋಜ್ಞ ಭಾವನೆಯಲ್ಲವೆ. ಇಂದಿನ ಯುವತಿಯರು ಅನಿಷ್ಟ ಬಟ್ಟೆಗಳನ್ನು ವರ್ಜಿಸಿ, ನಮ್ಮ ಸಾಂಪ್ರದಾಯಿಕ ಉಡುಗೆಗಳನ್ನು ಹಾಕಿದರೆ ಎಷ್ಟು ಗಂಭೀರತೆಯಲ್ಲವೇ.ಆಧುನಿಕ ಜೀವನ ಶೈಲಿಯನ್ನು ಅಳವಡಿಸಿಕೊಳ್ಳುವುದರ ಭರದಲ್ಲಿ,ನಮ್ಮ ಸಂಪ್ರದಾಯವನ್ನು ಗಾಳಿಗೆ ತೂರಬಾರದು,ವೈಚಾರಿಕ,ಚಾರಿತ್ರಿಕ,ನೈತಿಕ ನೆಲಗಟ್ಟಿನ ಮೇಲೆ ನಮ್ಮ ಆಚಾರ,ವಿಚಾರ,ವಸ್ತ್ರ ಧಾರಣೆಗಳು ತುಂಬಿರಲಿ . ಅಲ್ಲದೆ ನಮ್ಮ ಮುಂದಿನ ಪೀಳಿಗೆಗೂ ನಮ್ಮ ಸಂಸ್ಕೃತಿಯನ್ನು ಧಾರೆ ಎರೆಯೋಣಾ, ಅವರಿಂದಲೂ ನಾವು ಉತ್ತಮ ಸಮಾಜ,ಹಾಗೂ ಜೀವನ ನಿರ್ಮಾಣ ಮಾಡುವ ಉತ್ತೇಜನ ನೀಡೋಣಾ.ಇಷ್ಟನ್ನು ಹೇಳುವುದರೊಂದಿಗೆ ನನ್ನ ಹಾಗೂ ನನ್ನ ಮಿಡ್ಡಿ ಯ ಭಾವನಾತ್ಮಕ ಸಂಬದವು ಈಗಲೂ ನನ್ನ ಕಣ್ಣಾಲೆಗಳನ್ನು ತಂಪುಮಾಡಿತ್ತು,ಬಾಲ್ಯದ ಆ ಸವಿ ನೆನಪು ನನ್ನ ಪುಳಕಿತಗೊಳಿಸುತ್ತಾ ಜೊತೆಗೆ ಕಾಲವಾದ ನನ್ನ ಗುರುಗಳು,ಹಾಗೂ ನೆಚ್ಚಿನ ನಟಿಯ ನೆನಪು ಮಾಡಿತ್ತು….


ಅಶ್ವಿನಿ ಅಂಗಡಿ.
ಶಿಕ್ಷಕಿ,ಸಾಹಿತಿ ಬದಾಮಿ…..

Exit mobile version