ಸಾಗರ : ಒಂಬತ್ತು ದಿನಗಳ ಜಾತ್ರೆಯಲ್ಲಿ 18ಲಕ್ಷಕ್ಕೂ ಅಧಿಕ ಜನರು ಪಾಲ್ಗೊಂಡಿದ್ದರು. ಜಾತ್ರೆ ಸಂದರ್ಭದಲ್ಲಿ ಸ್ವಚ್ಚತೆ ಕಾಪಾಡಿದ ನಗರಸಭೆ ಹಾಗೂ ಸಮರ್ಥವಾಗಿ ರಕ್ಷಣಾ ಕಾರ್ಯ ನಿರ್ವಹಿಸಿದ ಪೊಲೀಸ್ ಇಲಾಖೆಗೆ ಕೃತಜ್ಞತೆ ಸಲ್ಲಿಸುವುದಾಗಿ ಶಾಸಕ ಹಾಲಪ್ಪ ಹರತಾಳು ತಿಳಿಸಿದರು.
ಇಲ್ಲಿನ ಗಾಂಧಿ ಮೈದಾನದಲ್ಲಿ ನಗರಸಭೆ ರಂಗಮಂದಿರದಲ್ಲಿ ಬುಧವಾರ ಮಾರಿಕಾಂಬಾ ವ್ಯವಸ್ಥಾಪಕ ಸಮಿತಿ ಮಾರಿಕಾಂಬಾ ಜಾತ್ರೆ ಸಾಂಸ್ಕೃತಿಕ ಸಮಾರೋಪ ಕಾರ್ಯಕ್ರಮದಲ್ಲಿ ಯೋಧರಿಗೆ ಸನ್ಮಾನಿಸಿ ಅವರು ಮಾತನಾಡುತ್ತಿದ್ದರು.
ಎಲ್ಲರ ಸಹಕಾರದಿಂದ ಜಾತ್ರೆ ಯಶಸ್ವಿಯಾಗಿದೆ. ಪ್ರತಿದಿನ ೩ ರಿಂದ ೪ ಲಕ್ಷ ಜನರು ಜಾತ್ರೆಗೆ ಬಂದು ಹೋಗಿದ್ದಾರೆ. ಜಾತ್ರೆ ಹಿನ್ನೆಲೆಯಲ್ಲಿ ರಸ್ತೆ, ಕುಡಿಯುವ ನೀರು, ಮೂಲಭೂತ ಸೌಲಭ್ಯವನ್ನು ಸಮರ್ಥವಾಗಿ ಕಲ್ಪಿಸಲಾಗಿದೆ. ನಾಡಿನ ಜನರ ಸಂಕಷ್ಟ ನಿವಾರಣೆಗಾಗಿ, ರೈತರು ಸದಾ ನೆಮ್ಮದಿಯಿಂದ ಇರುವಂತೆ ಶ್ರೀದೇವಿಗೆ ಪ್ರಾರ್ಥನೆ ಸಲ್ಲಿಸಲಾಗಿದೆ. ಸಂಕಷ್ಟ ನಿವಾರಣೆಗಾಗಿ ದೇವರಲ್ಲಿ ಪ್ರಾರ್ಥನೆ ಮಾಡಿದರೂ ಕೆಲವರು ಅದರಲ್ಲಿ ಹುಳುಕು ಹುಡುಕುತ್ತಾರೆ. ಟೀಕೆ ಏನೇ ಇದ್ದರೂ ನಾವು ಸನಾತನ ಧರ್ಮವನ್ನು ಪರಿಪಾಲನೆ ಮಾಡುತ್ತಾ ಬಂದಿದ್ದೇವೆ. ಜಾತ್ರಾ ಸಂದರ್ಭದಲ್ಲಿ ಯೋಧರನ್ನು ಗೌರವಿಸಿರುವುದು ಸಾರ್ಥಕ ಕ್ಷಣವಾಗಿದೆ ಎಂದು ಹೇಳಿದರು.
ಆಶಯ ನುಡಿಗಳನ್ನಾಡಿದ ಸಾಹಿತಿ ಡಾ. ನಾ.ಡಿಸೋಜ, ಎಲ್ಲರೂ ಸಂಘಟನಾತ್ಮಕವಾಗಿ ಕೆಲಸ ಮಾಡಿದಾಗ ಜಾತ್ರೆಯಂತಹ ಉತ್ಸವಗಳು ಅತ್ಯಂತ ಯಶಸ್ವಿಯಾಗುತ್ತದೆ. ಸಾಗರಕ್ಕೆ ೧೫೦೦ ವರ್ಷಗಳ ಇತಿಹಾಸವಿದೆ. ಜಾತ್ಯಾತೀತ ನೆಲಗಟ್ಟು ಹೊಂದಿರುವ ಸಾಗರದಲ್ಲಿ ಮೂರು ವರ್ಷಕ್ಕೊಮ್ಮೆ ನಡೆಯುವ ಮಾರಿಕಾಂಬಾ ಜಾತ್ರೆ ವೈಭವಕ್ಕೆ ಮತ್ತೊಂದು ಸಾಕ್ಷಿಯಾಗಿದೆ. ಸರ್ವಧರ್ಮ ಸಮಾಗಮಕ್ಕೆ ಜಾತ್ರೆ ಸ್ಪೂರ್ತಿಯಾಗಬೇಕು ಎಂದು ಹೇಳಿದರು.
ವಿಧಾನ ಪರಿಷತ್ ಮಾಜಿ ಸದಸ್ಯೆ ಪ್ರಫುಲ್ಲಾ ಮಧುಕರ್ ಮಾತನಾಡಿ, ಮಾರಿಕಾಂಬಾ ಜಾತ್ರೆ ಅತ್ಯಂತ ಯಶಸ್ವಿಯಾಗಿ ನಡೆದಿದೆ. ಅಮ್ಮನವರು ವನಕ್ಕೆ ಬಿಟ್ಟಾಗ ಕೆಲವು ದಿನ ಶೂನ್ಯ ಆವರಿಸುತ್ತದೆ. ಜಾತ್ರೆ ಯಶಸ್ಸಿಗೆ ಎಲ್ಲರೂ ಶ್ರಮಿಸಿದ್ದಾರೆ. ಶಾಸಕ ಹಾಲಪ್ಪ ಹರತಾಳು ಗಣಪತಿ ಕೆರೆ ಅಭಿವೃದ್ದಿಗೊಳಿಸಿದ್ದು ಜಾತ್ರೆ ಕಳೆ ಹೆಚ್ಚುವಂತೆ ಮಾಡಿದೆ ಎಂದರು.
ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಕೆ.ಎನ್.ನಾಗೇಂದ್ರ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ವಿ.ಟಿ.ಸ್ವಾಮಿ, ರಮೇಶ್ ಹೆಗಡೆ, ಬಿ.ಗಿರಿಧರ ರಾವ್, ನಾಗೇಂದ್ರ ಕುಮಟಾ, ಸುಂದರ ಸಿಂಗ್, ರಾಮಪ್ಪ, ವಿ.ಶಂಕರ್, ಎಸ್.ವಿ.ಕೃಷ್ಣಮೂರ್ತಿ, ಎಂ.ಡಿ.ಆನಂದ್, ವಿವಿಧ ಸಮಿತಿ ಸಂಚಾಲಕರು ಹಾಜರಿದ್ದರು. ಲೋಕೇಶಕುಮಾರ್ ಸ್ವಾಗತಿಸಿದರು. ಜಿ.ನಾಗೇಶ್ ವಂದಿಸಿದರು. ಸಂತೋಷ್ ಶೇಟ್ ನಿರೂಪಿಸಿದರು.)