Site icon TUNGATARANGA

ಕಲ್ಲುಗಣಿಗಾರಿಕೆ ಗುತ್ತಿಗೆ ನಿಯಮಗಳ ಸರಳೀಕರಣಕ್ಕೆ ಕ್ರಮ: ಸಚಿವ ಕೋಟಾ ಶ್ರೀನಿವಾಸ ಪೂಜಾರಿ

ಬೆಂಗಳೂರು,ಫೆ.16;

ಕಲ್ಲು ಗಣಿಗಾರಿಕೆ ಗುತ್ತಿಗೆ ನಿಯಮಗಳ ಪರಿಷ್ಕರಣೆಗೆ ಅಗತ್ಯ ಕ್ರಮ ವಹಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ವಿಧಾನಪರಿಷತ್ತಿನಲ್ಲಿಂದು ತಿಳಿಸಿದರು.


ಪ್ರಶ್ನೋತ್ತರ ಕಲಾಪದ ವೇಳೆ ವಿಧಾನ ಪರಿಷತ್ತಿನ ಸದಸ್ಯರಾದ ಎಸ್.ರವಿ ಅವರ ಪ್ರಶ್ನೆಗೆ ಗಣಿ ಮತ್ತು ಭೂವಿಜ್ಞಾನ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ವಿಕಲಚೇತನರ, ಹಿರಿಯ ನಾಗರೀಕರ ಸಬಲೀಕರಣ ಸಚಿವ ಹಾಲಪ್ಪ ಆಚಾರ್ ಅವರ ಪರವಾಗಿ ಉತ್ತರಿಸಿದ ಸಚಿವರು, ಪ್ರಸ್ತುತ ರಾಜ್ಯದಲ್ಲಿ 2700 ಕಟ್ಟಡ ಕಲ್ಲು ಗಣಿ ಗುತ್ತಿಗೆಗಳನ್ನು 10026-32 ಎಕರೆ ಪ್ರದೇಶದಲ್ಲಿ ಮಂಜೂರು ಮಾಡಿದ್ದು, ಅವುಗಳು ಚಾಲ್ತಿಯಲ್ಲಿವೆ ಎಂದರು.


ಕಲ್ಲು ಗಣಿ ಗುತ್ತಿಗೆಗಳ ಸಂಬಂಧ ರಾಜ್ಯ ಪರಿಸರ ಅಘಾತ ಅಂದಾಜೀಕರಣ ಪ್ರಾಧಿಕಾರದಿಂದ ಜಾರಿ ಮಾಡುವ ಪರಿಸರ ಅನುಮತಿ ಪತ್ರದಲ್ಲಿ ವಾರ್ಷಿಕವಾಗಿ ತೆಗೆಯುವ ಉಪಖನಿಜದ ಪ್ರಮಾಣದ ಮಿತಿಯನ್ನು ನಿಗದಿಪಡಿಸಲಾಗಿದ್ದು, ಸದರಿ ಕಲ್ಲುಗಣಿ ಗುತ್ತಿಗೆಗಳ ವಾರ್ಷಿಕ ಉಪಖನಿಜದ ಪ್ರಮಾಣದ ಮಿತಿಯು 199 ದಶಲಕ್ಷ ಟನ್‍’ಗಳಾಗಿದ್ದು, ಸದರಿ ಪ್ರಮಾಣದ ಕಟ್ಟಡ ಕಲ್ಲನ್ನು ಕಲ್ಲುಗಣಿ ಗುತ್ತಿಗೆ ಪ್ರದೇಶಗಳಿಂದ ಪೂರೈಸಲಾಗುತ್ತಿದೆ ಎಂದು ತಿಳಿಸಿದರು.
ಇದಲ್ಲದೆ ಪಕ್ಕದ ರಾಜ್ಯಗಳಾದ ತಮಿಳುನಾಡು, ಆಂದ್ರಪ್ರದೇಶ, ಮಹಾರಾಷ್ಟ್ರದಿಂದ ರಾಜ್ಯಕ್ಕೆ ಜಲ್ಲಿ ಮತ್ತು ಎಂ. ಸ್ಯಾಂಡ್ ಪೂರೈಕೆಯಾಗುತ್ತಿದೆ. ರಾಜ್ಯದಲ್ಲಿ ಎಂಸ್ಯಾಂಡ್ ಮತ್ತು ಕಟ್ಟಡ ಕಲ್ಲಿನ ಉತ್ಪನ್ನಗಳನ್ನು ಬೇಡಿಕೆಗೆ ಅನುಗುಣವಾಗಿ ಪೂರೈಕೆ ಮಾಡಲು ನಿಯಮಗಳನ್ನು ಸರಳೀಕರಣಗೊಳಿಸುವ ಕುರಿತು ಪರಾಮರ್ಶಿಸಿ ಸಚಿವ ಸಂಪುಟಕ್ಕೆ ಶಿಫಾರಸ್ಸು ಮಾಡಲು ಮಾನ್ಯ ಗಣಿ ಮತ್ತು ಭೂ ವಿಜ್ಞಾನ ಸಚಿವರ ಅಧ್ಯಕ್ಷತೆಯಲ್ಲಿ 2021 ರ ನವೆಂಬರ್ 16 ರಂದು ಸಚಿವ ಸಂಪುಟ ಉಪ ಸಮಿತಿಯನ್ನು ರಚಿಸಲಾಗಿರುತ್ತದೆ ಎಂದು ತಿಳಿಸಿದರು.
ಉಪ ಸಮಿತಿಯು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಎಂ. ಸ್ಯಾಂಡ್ ಮತ್ತು ಕಟ್ಟಡ ಕಲ್ಲಿನ ಉತ್ಪಾದನೆ ಮತ್ತು ಪೂರೈಕೆಯನ್ನು ಹೆಚ್ಚಿಸಲು ಕರ್ನಾಟಕ ಉಪಖನಿಜ ರಿಯಾಯತಿ ನಿಯಮಗಳು 1994ಕ್ಕೆ ಅಗತ್ಯ ತಿದ್ದುಪಡಿ ತಂದು ನಿಯಮಗಳನ್ನು ಸರಳೀಕರಣಗೊಳಿಸಲು ಶಿಫಾರಸ್ಸು ವರದಿಯನ್ನು ಸಲ್ಲಿಸಿದ್ದು, ನಿಯಮಗಳನ್ನು ಸರಳೀಕರಣಗೊಳಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ತಿಳಿಸಿದರು.

Exit mobile version