Site icon TUNGATARANGA

ಜೀವನದಲ್ಲಿ ಯಶಸ್ಸು ಕಾಣಲು ಗುರುಗಳನ್ನು ಗೌರವಿಸಿ: ಶಾಸಕ ಪಿ.ರಾಜೀವ್

: ಯಾರು ಗುರುಗಳನ್ನು ಹೃದಯದ ಅಂತರಾಳದಿಂದ ಗೌರವಿಸುತ್ತಾರೋ ಅವರು ಜೀವನದಲ್ಲಿ ಯಶಸ್ಸು ಕಾಣುತ್ತಾರೆ. ಗುರುಗಳನ್ನು ಅವಹೇಳನ ಮಾಡಿದವರು ಯಾವತ್ತು ಯಶಸ್ಸು ಕಾಣುವುದಿಲ್ಲ ಎಂದು ಕುಡುಚಿ ಶಾಸಕ ಪಿ.ರಾಜೀವ್ ಹೇಳಿದ್ದಾರೆ.
ಅವರು ಇಂದು ನಗರದ ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯದ ಬಿಎಡ್ ಕಾಲೇಜ್ ಸಭಾಂಗಣದಲ್ಲಿ ಇಂಡಿಯನ್ ಪ್ರೌಢ ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಯಾವ ವಿದ್ಯಾರ್ಥಿಯೂ ಕೂಡ ದುಶ್ಚಟಗಳನ್ನು ಕಲಿಯಬಾರದು. ನಾನು ಇಂಡಿಯನ್ ಪ್ರೌಢ ಶಾಲೆಯ ಹಳೆಯ ವಿದ್ಯಾರ್ಥಿಯಾಗಿದ್ದು, ಸೊರಬದ ಕುಪ್ಪೆಗುಡ್ಡೆ ಗ್ರಾಮದ ೮ನೇ ತರಗತಿಗೆ ಈ ಶಾಲೆಗೆ ಸೇರಿದ್ದೆ. ಇಲ್ಲಿನ ಗುರುವೃಂದ ನನಗೆ ಉತ್ತಮ ಶಿಕ್ಷಣ ಮತ್ತು ಸಂಸ್ಕಾರ ಕಲಿಸಿದ್ದರಿಂದ ನಾನು ಈ ಹಂತಕ್ಕೆ ಬೆಳೆದಿದ್ದೇನೆ ಎಂದರು.


ನಾನು ಎಂದು ನನ್ನ ಜೀವನದಲ್ಲಿ ಗುರುಗಳಿಗೆ ಟಿಂಗಲ್, ಅವಹೇಳನ ಮಾಡಿಲ್ಲ. ಅಂಬೇಡ್ಕರ್, ವಿವೇಕಾನಂದರ ಪುಸ್ತಕಗಳಿಂದ ಪ್ರೇರಣೆ ಪಡೆದು ೧೫ ಗಂಟೆಗಳ ಕಾಲ ನಿರಂತರ ಓದುತ್ತಿದ್ದೆ. ಇದು ನನಗೆ ಜೀವನದಲ್ಲಿ ಮೆಲೇರಲು ಸಾಧ್ಯವಾಯಿತು ಎಂದರು.


ಸಬ್‌ಇನ್ಸ್‌ಪೆಕ್ಟರ್ ಆಗಿ ಸೇವೆ ಸಲ್ಲಿಸಿದ ನನಗೆ ಕುಡುಚಿ ಕ್ಷೇತ್ರದಲ್ಲಿ ವೃತ್ತಿ ಸಂದರ್ಭದಲ್ಲಿ ರಾಜಕಾರಣಿಗಳೊಂದಿಗೆ ಸಂಘರ್ಷ ಉಂಟಾಗಿ ಸೇವೆಗೆ ರಾಜೀನಾಮೆ ಸಲ್ಲಿಸಿ ಸವಾಲಾಗಿ ಸ್ವೀಕರಿಸಿ ರಾಜಕಾರಣಕ್ಕೆ ಬಂದೆ. ಮೊದಲ ಪ್ರಯತ್ನದಲ್ಲಿ ಶಾಸಕ ಸ್ಥಾನಕ್ಕೆ ನಿಂತಾಗ ಸೋಲುಂಟಾಯಿತು. ಆದರೂ ೨ನೇ ಪ್ರಯತ್ನದಲ್ಲಿ ಯಶಸ್ಸು ಕಂಡು ಸತತ ೨ ಬಾರಿಗೆ ಶಾಸಕನಾಗಿದ್ದೇನೆ. ಇದಕ್ಕೆ ನನ್ನ ಗುರುಗಳ ಆಶೀರ್ವಾದವೇ ಕಾರಣ ಎಂದರು.
ಪ್ರತಿಯೊಬ್ಬನಿಗೂ ಆತ್ಮವಿಶ್ವಾಸ ಮುಖ್ಯ. ಕಷ್ಟ,ಸಮಸ್ಯೆಗಳು ಎಲ್ಲರಿಗೂ ಬರುತ್ತದೆ. ಆದರೆ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ ಎದುರಿಸಿದಾಗ ಜೀವನದಲ್ಲಿ ಯಶಸ್ಸು ಸಾಧ್ಯ. ಮನುಷ್ಯ ಯಾವುದೇ ಸಾಧನೆ ಮಾಡಬೇಕಾದರೂ ಅವನ ಒಳಗಡೆ ಶಕ್ತಿ ಇರಬೇಕು. ಕೆಲವರು ದೈಹಿಕ ಅಂಗವೈಕಲ್ಯ ಹೊಂದಿದ್ದರೂ ಕೂಡ ಮಾನಸಿಕವಾಗಿ ದೃಢವಾಗಿದ್ದು, ಉನ್ನತ ಸಾಧನೆ ಮಾಡಿದ್ದಾರೆ. ಅದ್ಬುತವಾದ ಅನುಭವವೆಂದರೆ ಸವಾಲನ್ನು ಸ್ವೀಕರಿಸಿ ಗೆಲ್ಲುವುದು. ನನ್ನ ಪ್ರೌಢ ಶಾಲಾ ಶಿಕ್ಷಣದ ಸಂದರ್ಭದಲ್ಲಿ ಇಲ್ಲಿನ ಸಿ.ಬಿ.ರಂಗನಾಥ್ ಸರ್, ಅಜ್ಜಪ್ಪ ಸರ್, ಎಂ.ಆರ್.ಸರ್ ಮೊದಲಾದವರು ನನಗೆ ಉನ್ನತವಾದ ಮಾರ್ಗದರ್ಶನ ನೀಡಿದ್ದೆ ನಾನು ಇವತ್ತು ಈ ಸ್ಥಾನಕ್ಕೆ ಏರಿದ್ದೇನೆ. ಸಿ.ಬಿ.ರಂಗನಾಥ್ ಸರ್ ಅವರು, ವಿದ್ಯಾರ್ಥಿಗಳನ್ನು ದಂಡಿಸುವಾಗ ಅವರ ಕೈಯಲ್ಲಿ ಒಂದು ವಾಚ್ ಇತ್ತು. ಅದು ಜಾರುತ್ತಿತ್ತು. ಅದನ್ನು ಕಳಚಿಯಿಟ್ಟರು ಎಂದರೆ ಇಡೀ ತರಗತಿ ಮೌನವಾಗಿರುತ್ತಿತ್ತು. ಹೊಡೆತ ತಿಂದ ವಿದ್ಯಾರ್ಥಿಗಳೆಲ್ಲ ಇವತ್ತು ಅಂತರ್‌ರಾಷ್ಟ್ರೀಯ ಸಾಧನೆ ಮಾಡಿದ್ದರೆ. ಗಣ್ಯ ವ್ಯಕ್ತಿಗಳಾಗಿದ್ದಾರೆ ಎಂದು ಸ್ಮರಿಸಿದರು.


ಎನ್‌ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ್ ಮಾತನಾಡಿ, ನಮ್ಮ ಸಂಸ್ಥೆಯ ಒಬ್ಬ ಹಿರಿಯ ವಿದ್ಯಾರ್ಥಿ ಯಶಸ್ವಿ ಶಾಸಕರಾಗಿ ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ರಾಜ್ಯದಲ್ಲೇ ಹೆಸರುಗಳಿಸಿರುವುದು ನಮ್ಮ ಸಂಸ್ಥೆಯ ಹೆಮ್ಮೆ. ಈ ಕಾರ್ಯಕ್ರಮ ವಿಶೇಷ ಕಾರ್ಯಕ್ರಮವಾಗಿದೆ ಎಂದರು.
ನಿವೃತ್ತ ಪ್ರಾಧ್ಯಾಪಕ ನಾಗರಾಜ್ ಮಾತನಾಡಿ, ವಿದ್ಯಾರ್ಥಿಗಳು ಸಾಧನೆ ಮಾಡಿ ದೊಡ್ಡ ವ್ಯಕ್ತಿಗಳಾಗಿ ಗುರುವಿಗಿಂತ ಹೆಚ್ಚಿನ ಹೆಸರು ಗಳಿಸಿದಾಗ ಅಥವಾ ಶಿಷ್ಯನಿಗೆ ಹೆಚ್ಚಿನ ಗೌರವ ದೊರಕಿದಾಗ ಗುರುವಿಗೆ ಅದಕ್ಕಿಂತ ದೊಡ್ಡ ಸಂತೋಷ ಬೇರೆ ಯಾವುದು ಇಲ್ಲ. ಅನೇಕ ದೊಡ್ಡ ವ್ಯಕ್ತಿಗಳು ಬಂದು ಕಾಲಿಗೆ ಬಿದ್ದು ಆಶೀರ್ವಾದ ಬೇಡಿದಾಗ ಅವರ ಸಾಧನೆ ನೋಡಿ ಅತ್ಯಂತ ಸಂತೋಷ ಪಡುತ್ತೇವೆ. ಅದೇ ನಮಗೆ ಆತ್ಮತೃಪ್ತಿ ಕೊಡುತ್ತದೆ ಎಂದರು.


ಮಾಜಿ ಮುಖ್ಯೋಪಾಧ್ಯಾಯಿನಿ ಬಿ.ಎಸ್.ಸರೋಜಾ ಮಾತನಾಡಿ, ವಿದ್ಯೆಯ ಜೊತೆಗೆ ಸಂಸ್ಕಾರ ಇಲ್ಲದಿದ್ದರೆ ವಿದ್ಯೆಗೆ ಬೆಲೆ ಇರುವುದಿಲ್ಲ. ರಾಜೀವ ಓರ್ವ ಅಸಾಧಾರಣ ವ್ಯಕ್ತಿ. ಆತ ಈ ರಾಜ್ಯದ ಮುಖ್ಯಮಂತ್ರಿಯಾಗಲಿ ಎಂದು ಆಶಯ ವ್ಯಕ್ತಪಡಿಸಿದರು.
ಶಾಲೆಯಲ್ಲಿ ಪಾಠ ಮಾತ್ರ ಮುಖ್ಯವಲ್ಲ. ವಿದ್ಯಾರ್ಥಿಗಳಿಗೆ ಕಲಿಸಿದ ಸಂಸ್ಕಾರ ಮುಖ್ಯವಾಗುತ್ತದೆ. ಉತ್ತಮ ವಿದ್ಯಾರ್ಥಿಯಾದಾಗ ಆತನ ಸಾಧನೆ ನೋಡಿದಾಗ ಗುರುಗಳಿಗೆ ಅದೇ ಅಂತರ್‌ರಾಷ್ಟ್ರೀಯ ಪ್ರಶಸ್ತಿಗಿಂತ ದೊಡ್ಡದು ಎಂದು ಅನಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಈ ಗುರುವಂದನಾ ಕಾರ್ಯಕ್ರಮದ ರೂವಾರಿ ಸವಿತಾ ಅರುಣ್, ಹಿರಿಯ ನಿವೃತ್ತ ಅಧ್ಯಾಪಕರುಗಳಾದ ಸಿ.ಬಿ.ರಂಗನಾಥ್, ರಾಜಪ್ಪ, ಅಜ್ಜಪ್ಪ, ಎಂ.ಆರ್.ಸರ್, ಆನಂದ್, ಎಸ್.ಎಲ್.ನಾಗರಾಜ್, ಲಕ್ಷ್ಮಪ್ಪ ಮೊದಲಾದವರಿದ್ದರು.

Exit mobile version