ಬಾಲ್ಯ ವಿವಾಹ ಪ್ರಕರಣಗಳಲ್ಲಿ ಶಿವಮೊಗ್ಗ ರಾಜ್ಯದಲ್ಲೇ ೧೧.೧ ಪ್ರಮಾಣ ದೂರು ದಾಖಲಾಗಿದ್ದು, ಅಧಿಕಾರಿಗಳ ಲೋಪ ಎದ್ದುಕಾಣುತ್ತಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಜಣ್ಣ ಸಂಕಣ್ಣನವರ್ ಅಭಿಪ್ರಾಯ ಪಟ್ಟಿದ್ದಾರೆ.
ಅವರು ಇಂದು ನಗರದ ಆಲ್ಕೊಳದ ಚೈತನ್ಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದಿ ಶಿವಮೊಗ್ಗ ಮಲ್ಟಿಪರ್ಪಸ್ ಸೋಶಿಯಲ್ ಸರ್ವೀಸ್ ಸೊಸೈಟಿ ಶಿವಮೊಗ್ಗ. ಇವರುಗಳ ಸಂಯುಕ್ತಾಶ್ರಯದಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಅನುಷ್ಟಾನ ಹಾಗೂ ಕ್ರಮಬದ್ಧ ಕಾರ್ಯ ವಿಧಾನ (ಎಸ್‌ಒಪಿ) ಕುರಿತಂತೆ ಭಾಗಿದಾರ ಇಲಾಖೆಗಳ ಬಾಲ್ಯ ವಿವಾಹ ನಿಷೇದಾಧಿಕಾರಿಗಳಿಗೆ ಜಿಲ್ಲಾ ಮಟ್ಟದ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳಲ್ಲಿ ಮಕ್ಕಳಿಗೆ ಏನಾದರೂ ಸಮಸ್ಯೆಯಾದಾಗ ಯಾರಿಗೆ ಹೇಳಬೇಕು. ಮಕ್ಕಳ ಹಕ್ಕಿನ ರಕ್ಷಣೆ ಯಾರು ಮಾಡಬೇಕು. ಯಾರು ಜವಾಬ್ದಾರಿ ವಹಿಸಬೇಕು ಎಂಬ ಬಗ್ಗೆ ಅನೇಕ ಇಲಾಖೆಗಳ ಅಧಿಕಾರಿಗಳಿಗೆ ಮಾಹಿತಿಯಿಲ್ಲ. ಆದರೆ ಮಕ್ಕಳ ರಕ್ಷಣೆಯ ಪ್ರಶ್ನೆ ಬಂದಾಗ ಸರ್ಕಾರದ ಎಲ್ಲಾ ವಿಭಾಗದ ತಾಲ್ಲೂಕು ಮಟ್ಟ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಭಾದ್ಯರಾಗಿರುತ್ತಾರೆ. ಸರ್ಕಾರ ಈ ಬಗ್ಗೆ ಸುತ್ತೋಲೆ ಹೊರಡಿಸಿದ್ದು, ಮಕ್ಕಳ ರಕ್ಷಣಾ ಹಕ್ಕು ಎಲ್ಲರಿಗೆ ಸೇರಿದ್ದಾಗಿದೆ. ಅದಕ್ಕಾಗಿಯೇ ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ಈ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಬಾಲ್ಯವಿವಾಹ ತಡೆಗಟ್ಟುವುದು ಹೇಗೆ? ತಮಗಿರುವ ಅಧಿಕಾರ ಉಪಯೋಗಿಸಿ ಮಕ್ಕಳ ಹಕ್ಕನ್ನು ರಕ್ಷಿಸಲು ಮತ್ತು ಅಭಿವೃದ್ಧಿಗಾಗಿ ಏನು ಮಾಡಬೇಕು ಎಂಬುದರ ಬಗ್ಗೆ ಮಾಹಿತಿ ನೀಡುವುದು ಈ ಕಾರ್ಯಗಾರದ ಉದ್ದೇಶ. ಮಕ್ಕಳು ಈ ದೇಶದ ಮುಂದಿನ ಭವಿಷ್ಯ ಮಕ್ಕಳ ಹಕ್ಕಿನಿಂದ ಯಾರು ಕೂಡ ವಂಚಿತರಾಗಬಾರದು ಎಂಬುದರ ಬಗ್ಗೆ ಸಾರ್ವಜನಿಕರಲ್ಲಿ ಕರಪತ್ರ ಹಂಚಿಕೆ ಹಾಗೂ ಇನ್ನಿತರ ಕಾರ್ಯಗಾರಗಳ ಮೂಲಕ ಅರಿವು ಮೂಡಿಸಬೇಕಾಗಿದೆ ಎಂದರು.
ಮಕ್ಕಳ ವಿಚಾರ ಬಂದಾಗ ಎಲ್ಲಾ ಇಲಾಖೆಯ ಅಧಿಕಾರಿಗಳು ಒಟ್ಟಾಗಿ ಕೆಲಸ ಮಾಡುವ ಮನಸ್ಥಿತಿ ಬರಬೇಕು. ಯಾರೂ ಕೂಡ ಈ ಬಗ್ಗೆ ನಿರ್ಲಕ್ಷ್ಯ ತೋರಿದರೆ ಆ ಅಧಿಕಾರಿಗಳ ಮೇಲೆ ಕೂಡ ಸರ್ಕಾರ ತಕ್ಷಣ ಕ್ರಮಕೈಗೊಳ್ಳುತ್ತದೆ. ಕಾನೂನು ಅಷ್ಟು ಬಲವಾಗಿದೆ. ಮಕ್ಕಳ ಸಹಾಯವಾಣಿ ೧೧೨ ಕ್ಕೆ ಕರೆ ನೀಡಿದ ತಕ್ಷಣ ಸಮಸ್ಯೆ ಬಗೆಹರಿಯುವುದಿಲ್ಲ. ಅವರ ಸಂಪೂರ್ಣ ರಕ್ಷಣೆ ಮಾಡುವವರೆಗೆ ಎಲ್ಲಾ ಅಧಿಕಾರಿಗಳು ಕೆಲಸ ಮಾಡಬೇಕು ಎಂದರು.
ಎಸ್‌ಎಂಎಸ್‌ಎಸ್ ನಿರ್ದೇಶಕರಾದ ಪಾಧರ್ ಕ್ಲಿಫರ್ಡ್ ರೋಷನ್ ಪಿಂಟೋ ಮಾತನಾಡಿ, ಕಾಯ್ದೆಗಳನ್ನು ಸಮರ್ಪಕವಾಗಿ ಅನುಷ್ಟಾನ ಮಾಡುವ ಜವಾಬ್ದಾರಿ ಎಲ್ಲರದಾಗಿದೆ. ಸಮಾಜದಲ್ಲಿ ಸಮಾನ ರೀತಿಯಲ್ಲಿ ಬದುಕಲು ಕಾಯ್ದೆಗಳು ಅವಶ್ಯಕ. ಮಕ್ಕಳು ನಮ್ಮ ಮಧ್ಯೆ ಇರುವ ದೇವರು. ಅವರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಎಂದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಎಂ.ಚಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ರೇಖಾ ಜಿ.ಎಂ. ಹಾಗೂ ಸದಸ್ಯರಾದ ಶೀಲಾ ಸುರೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಬ್ಬಂದಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.