ಶಿವಮೊಗ್ಗ, ಫೆ.14
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಅವರ ಹೆಸರನ್ನು ನಾಮಕರಣ ಮಾಡಬೇಕೆಂದು ಈಡಿಗ ಸಂಘದ ಹೆಸರಲ್ಲಿ ಅಧ್ಯಕ್ಷರು ಹಾಗೂ ಇತರೆ ಒಂದಿಬ್ಬರು ಒತ್ತಾಯ ಮಾಡಿರುವುದನ್ನು ಇದೇ ಸಮಾಜದ ಬಹುತೇಕ ಪ್ರಮುಖರು ಖಂಡಿಸಿರುವುದು ವಿಶೇಷ.
ಬಂಗಾರಪ್ಪ ಅವರ ಬಗ್ಗೆ ವಿಶೇಷ ಪ್ರೀತಿ ಗೌರವ ನಮಗಿದೆ. ಆದರೆ ಈಡಿಗರ ಸಂಘ ಸರ್ವ ಸಮ್ಮತವಾದ ನಿರ್ಧಾರ ಕೈಗೊಳ್ಳದೆ ಇರುವಾಗ ಜಿಲ್ಲಾ ಆರ್ಯ ಈಡಿಗರ ಸಂಘದ ಅಧ್ಯಕ್ಷ ಆರ್ ಶ್ರೀಧರ್ ಹುಲ್ತಿಕೊಪ್ಪ ಅವರು ಸುದ್ದಿಗೋಷ್ಠಿಯಲ್ಲಿ ಏಕಾಏಕಿ ಸಮಾಜದ ನಿರ್ಣಯ ನಿರ್ಣಯ ಎಂದು ಹೇಳಿರುವುದನ್ನು ಉದ್ಯಮಿ ಹಾಗೂ ಸಂಘದ ನಿರ್ದೇಶಕ ಸುರೇಶ್ ಬಾಳೇಗುಂಡಿ ಖಂಡಿಸಿದ್ದಾರೆ.
ಬಂಗಾರಪ್ಪ ಅವರು ಶಿವಮೊಗ್ಗಕ್ಕೆ ಅಷ್ಟೇ ಅಲ್ಲ ಇಡೀ ರಾಜ್ಯಕ್ಕೆ ಅತ್ಯುತ್ತಮ ಯೋಜನೆಗಳನ್ನು ನೀಡಿದಂತಹ ಮಹಾನ್ ಸಾಧಕ ಮುಖ್ಯಮಂತ್ರಿ ಎಂಬುದರಲ್ಲಿ ಎರಡು ಮಾತಿಲ್ಲ. ರಾಷ್ಟ್ರಕವಿ ಕುವೆಂಪು ಅವರ ಹೆಸರನ್ನು ಇಡುವಂತಹ ನಿರ್ಧಾರಕ್ಕೆ ನಿಕಟ ಪೂರ್ವ ಮುಖ್ಯಮಂತ್ರಿ ಕೆಎಸ್ ಯಡಿಯೂರಪ್ಪ ಸಹಮತಿ ವ್ಯಕ್ತಪಡಿಸಿರುವಾಗ ಜೊತೆಗೆ ತಮ್ಮ ಹೆಸರನ್ನು ಇಲ್ಲಿ ಪರಿಗಣಿಸದಿರಲು ಹೇಳಿರುವಾಗ ಏಕಾಏಕಿ ನಾಲ್ಕೈದು ಜನ ಈಗ ಬಂಗಾರಪ್ಪನವರ ಹೆಸರನ್ನು ಇಡಿ ಎಂದು ಹೇಳಿರುವುದನ್ನು ಖಂಡಿಸಿದ್ದಾರೆ.
ಸಮಾಜದ ಹಿರಿಯ ನಾಯಕರಾದ ಕಾಗೋಡು ತಿಮ್ಮಪ್ಪ, ಬಿ ಸ್ವಾಮಿರಾವ್, ಡಾ. ಜಿ ಡಿ ನಾರಾಯಣಪ್ಪ, ಹರತಾಳು ಹಾಲಪ್ಪ ಸೇರಿದಂತೆ ಯಾರ ಜೊತೆಯೂ ಚರ್ಚಿಸದೆ ಸಂಘದ ಸರ್ವ ಸಮ್ಮತವಾದ ಚರ್ಚೆಯಾಗದೆ ಏಕಾಏಕಿ ಅಧ್ಯಕ್ಷರೆಂಬ ಹೆಸರಿನಲ್ಲಿ ಪತ್ರಿಕಾಗೋಷ್ಠಿ ಕರೆದು ಇಂತಹ ಒತ್ತಾಯ ಮಾಡಿರುವುದನ್ನು ಸುರೇಶ್ ಬಾಳೆಗುಂಡಿ ತೀವ್ರವಾಗಿ ಖಂಡಿಸಿದ್ದಾರೆ.
ಎಲ್ಲರನ್ನು ಕರೆದು ಮಾತನಾಡಬೇಕಿತ್ತು ನಂತರ ಇಂತಹ ಒತ್ತಾಯವನ್ನು ಹಾಕಬೇಕಿತ್ತು ಎಂದೂ ಹೇಳಿದ್ದಾರೆ