Site icon TUNGATARANGA

ಶಿವಮೊಗ್ಗಕ್ಕೆ ಆಗಮಿಸಿದ “ಸಿಎಂ ಬೊಮ್ಮಯಿ” ವಿಐಎಸ್‌ಎಲ್.ಹಾಗೂ ಶರವತಿ ಸಂತ್ರಸ್ತರ ಸಮಸ್ಯೆ ಬಗ್ಗೆ ಹೇಳಿದ್ದೇನು?

ಭದ್ರಾವತಿಯ ವಿಐಎಸ್‌ಎಲ್ ಕಾರ್ಖಾನೆಯನ್ನು ಪುನರಾರಂಭಿಸಲು ರಾಜ್ಯ ಸರ್ಕಾರ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ. ಇದರಲ್ಲಿ ನಾವು ಯಶಸ್ವಿಯಾಗುತ್ತೇವೆ ಎಂಬ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಇಂದು ಶಿವಮೊಗ್ಗದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸುವ ಹಿನ್ನೆಲೆಯಲ್ಲಿ ಬಂದಾಗ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.


ವಿಐಎಸ್‌ಎಲ್ ಕಾರ್ಖಾನೆಗೆ ಸಂಬಂಧಿಸಿದಂತೆ ಕಾರ್ಮಿಕರಲ್ಲಿ ಯಾವುದೇ ಗೊಂದಲ ಬೇಡ. ಈ ಬಗ್ಗೆ ರಾಜ್ಯ ಸರ್ಕಾರ ಈಗಾಗಲೇ ಅಧಿಕಾರಿಗಳೊಂದಿಗೆ ಮಾತನಾಡಿದೆ. ಮತ್ತು ಇಂದು ಕೂಡ ಕಾರ್ಖಾನೆಯ ಕಾರ್ಮಿಕರು ಮತ್ತು ಅಧಿಕಾರಿಗಳ ನಿಯೋಗವು ತಮ್ಮನ್ನು ಭೇಟಿ ಮಾಡಲಿದೆ. ಅವರೊಂದಿಗೆ ಚರ್ಚಿಸುತ್ತೇನೆ. ಹಾಗೆಯೇ ಕಬ್ಬಿಣ ಮತ್ತು ಉಕ್ಕು ಉತ್ಪಾದಕ ಉದ್ಯಮಿಗಳ ಜೊತೆಯೂ ಸಭೆ ನಡೆಸುತ್ತೇನೆ. ಶಿವಮೊಗ್ಗದ ಜನಪ್ರತಿನಿಧಿಗಳ ಜೊತೆಯೂ ಮಾತನಾಡುತ್ತೇನೆ. ಉನ್ನತ ಮಟ್ಟದ ಸಭೆ ಕರೆದು ಅಲ್ಲಿ ಚರ್ಚಿಸಿ ಕೇಂದ್ರ ಸರ್ಕಾರಕ್ಕೆ ಕಾರ್ಖಾನೆಯನ್ನು ಪುನರಾರಂಭಿಸುವಂತೆ ಮನವಿ ಮಾಡುತ್ತೇನೆ. ನಮ್ಮ ಮನವಿಯನ್ನು ಕೇಂದ್ರದ ಸಚಿವರು ಒಪ್ಪುತ್ತಾರೆ. ಈ ವಾರದಲ್ಲಿಯೇ ಈ ಬಗ್ಗೆ ಸಂಪೂರ್ಣ ಕಾರ್ಯೋನ್ಮುಖನಾಗುತ್ತೇನೆ. ಕಾರ್ಮಿಕರು ಆತಂಕಪಡುವ ಅಗತ್ಯವಿಲ್ಲ ಎಂದರು.


ಶರಾವತಿ ಸಂತ್ರಸ್ತರ ಸಮಸ್ಯೆಯನ್ನು ಶೀಘ್ರವೇ ಬಗೆಹರಿಸಲಾಗುವುದು. ಈ ಹಿಂದೆಯೂ ಈ ಬಗ್ಗೆ ಭರವಸೆ ನೀಡಿದ್ದೇನೆ. ಈಗಾಗಲೇ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಕಾನೂನಿ ಚೌಕಟ್ಟಿನಲ್ಲಿಯೇ ಸಮಸ್ಯೆ ಪರಿಹಾರದ ಮಾರ್ಗವನ್ನು ಹುಡುಕುತ್ತೇನೆ. ಸಂತ್ರಸ್ತರು ಆತಂಕಪಡುವ ಅಗತ್ಯವಿಲ್ಲ ಎಂದರು.


ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಜಾತಿ ರಾಜಕಾರಣದ ಬಗ್ಗೆ ನನಗೆ ನಂಬಿಕೆ ಇಲ್ಲ. ಇದನ್ನು ಬಿಂಬಿಸುವುದು ಕೂಡ ಸರಿಯಲ್ಲ. ಜಾತಿಯ ಬಗ್ಗೆ ಯಾರೇ ಆಗಲಿ, ಮಾತನಾಡುವುದು ತಪ್ಪು. ಇದರಿಂದ ತೊಂದರೆಯೇ ವಿನಃ ಲಾಭವಂತೂ ಇಲ್ಲ. ಜನರು ಅಭಿವೃದ್ಧಿಯನ್ನು ನೋಡಿ ಮತ ನೀಡುತ್ತಾರೆಯೇ ಹೊರತು ಜಾತಿಯ ಆಧಾರದ ಮೇಲೆ ಅಲ್ಲ. ಜನರಿಗೆ ಜಾತಿಯ ಮೇಲೆ ಕಿಮ್ಮತ್ತೂ ಇಲ್ಲ. ಹೀಗೆ ಮಾತನಾಡುತ್ತಾ ನಮ್ಮನ್ನು ನಾವೇ ಕೆಳಮಟ್ಟಕ್ಕೆ ತಂದುಕೊಳ್ಳತ್ತೇವೆ. ಮತದಾರರು ಇಂದು ಪ್ರಬುದ್ಧರಾಗಿದ್ದಾರೆ. ಜಾತಿ ಬಗ್ಗೆ ಮಾತನಾಡಿದರೆ ಕೇಳುವುದಿಲ್ಲ ಎಂದು ಪರೋಕ್ಷವಾಗಿ ಹೆಚ್.ಡಿ. ಕುಮಾರಸ್ವಾಮಿಯವರಿಗೆ ಟಾಂಗ್ ನೀಡಿದರು.

Exit mobile version